Site icon Samastha News

SSLC ಯಲ್ಲಿ 99% ಅಂಕ, ಆದರೆ ಕನ್ನಡ ಓದಲು, ಬರೆಯಲು ಬರಲ್ಲ! ತನಿಖೆಗೆ ಆದೇಶ

ಕರ್ನಾಟಕದಲ್ಲಿ ಕೆಲವು ನೇಮಕಾತಿಗಳು ಪರೀಕ್ಷೆಗಳಿಲ್ಲದೆ ಕೇವಲ ಅಂಕಗಳ ಆಧಾರದಲ್ಲಿ ನಡೆಯುತ್ತವೆ. ಹತ್ತನೇ ತರಗತಿ ಅಥವಾ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹುದ್ದೆಗಳು ದೊರಕುತ್ತವೆ. ಹೀಗೆಯೇ ಕರ್ನಾಟಕದ ಕೊಪ್ಪಳದ ಜಿಲ್ಲಾ ನ್ಯಾಯಾಲಯದ ಸಹಾಯಕ ಹುದ್ದೆಗೆ ಅಂಕಗಳ ಆಧಾರದಲ್ಲಿ ಯುವಕನೊಬ್ಬನ ನೇಮಕಾತಿಯಾಗಿತ್ತು. ಆ ಯುವಕ ಹತ್ತನೇ ತರಗತಿಯಲ್ಲಿ 99.50% ಅಂಕ ಗಳಿಸಿದ್ದ. ಆದರೆ ಆತನಿಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ!

23 ವರ್ಷ ವಯಸ್ಸಿನ ಪ್ರಭು ಲಕ್ಷ್ಮೀಕಾಂತ್ ಲೋಕೆರೆ 10ನೇ ತರಗತಿಯಲ್ಲಿ ಭಾರಿ ಅಂಕ ಪಡೆದು ಪಾಸ್ ಆಗಿದ್ದಾನೆ. ಅದರ ಆಧಾರದ ಮೇಲೆ ಕೊಪ್ಪಳ ನ್ಯಾಯಾಲಯದಲ್ಲಿ ಕೆಲಸ ಸಹ ಪಡೆದುಕೊಂಡಿದ್ದಾನೆ. ಆದರೆ ಕೆಲಸದ ಸಂದರ್ಭದಲ್ಲಿ ಕನ್ನಡ ಓದಲು, ಬರೆಯಲು ಬರದೇ ಇರುವುದು ಗಮನಿಸಿದ ನ್ಯಾಯಾಧೀಶರು, ಆತನ ಅಂಕಪಟ್ಟಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದು ತನಿಖೆಗೆ ಆದೇಶ ನೀಡಿದ್ದಾರೆ.

ತನಿಖೆ ವೇಳೆ ತಿಳಿದುಬಂದಿರುವುದೇನೆಂದರೆ ರಾಯಚೂರು ಜಿಲ್ಲೆ ಸಿಂಧನೂರಿನ ಪ್ರಭು ಲಕ್ಷ್ಮೀಕಾಂತ್ ಲೋಕೆರೆ ಓದಿರುವುದು 7ನೇ ತರಗತಿ ವರೆಗೆ ಮಾತ್ರ. ಅದಾದ ಬಳಿಕ ಆತ ಶಾಲೆಗೆ ಹೋಗಿಲ್ಲ, ಕೊಪ್ಪಳ ನ್ಯಾಯಾಲಯದಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಒಮ್ಮೆಲೆ ಹತ್ತನೇ ತರಗತಿ ಪರೀಕ್ಷೆಯನ್ನು ನೇರವಾಗಿ ಎದುರಿಸಿ ಪಾಸ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ.

ಓದಲು ಬರೆಯಲು ಬಾರದ ಪ್ರಭು ಬಗ್ಗೆ ಅನುಮಾನಿತರಾಗಿರುವ ನ್ಯಾಯಾಧೀಶರು, ಪ್ರಭು ವಿರುದ್ಧ ಖಾಸಗಿ ದೂರು ದಾಖಲಿಸಿದ್ದು ಆತನ ಅಂಕಪಟ್ಟಿಯ ಪರಿಶೀಲನೆ ಮಾಡುವಂತೆ ಸೂಚಿಸಿದ್ದಾರೆ ಅಲ್ಲದೆ, ಆತ ಪರೀಕ್ಷೆ ಬರೆದಿರುವ ಪ್ರಶ್ನೆ ಪತ್ರಿಕೆಯನ್ನು ಪ್ರಭುವಿನ ಕೈಬರಹದೊಂದಿಗೆ ಹೋಲಿಸಿ ನೋಡುವಂತೆ ಸೂಚಿಸಿದ್ದಾರೆ. ಪ್ರಭು ಮಾತ್ರವೇ ಅಲ್ಲದೆ, ಅದೇ ಸಾಲಿನಲ್ಲಿ ಕೆಲಸಕ್ಕೆ ಸೇರಿದ ಎಲ್ಲ ಸಹಾಯಕರ ಅಂಕಪಟ್ಟಿಗಳನ್ನು ತನಿಖೆ ಮಾಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.

ಪ್ರಭು, 2017-18ನೇ ಸಾಲಿನಲ್ಲಿ ಹತ್ತನೇ ತರಗತಿ ಪರೀಕ್ಷೆ ಎದುರಿಸಿದ್ದ. 625 ಅಂಕಗಳಿಗೆ 623 ಅಂಕ ಪಡೆದು ಅತ್ಯುನ್ನತ ದರ್ಜೆಯಲ್ಲಿ ಪಾಸ್ ಆಗಿದ್ದ. ಬಾಗಲಕೋಟೆ ಸೆಂಟರ್್ನಲ್ಲಿ ಪ್ರಭು ಪರೀಕ್ಷೆ ಬರೆದಿದ್ದಾನೆ ಆದರೆ ಆತ ಬರೆದಿರುವುದು ದೆಹಲಿ ಎಕ್ಸಾಂ ಬೋರ್ಡ್ ನ ಪರೀಕ್ಷೆಯನ್ನು. ಇದು ಸಹ ಅನುಮಾನಕ್ಕೆ ಕಾರಣವಾಗಿದೆ.

Exit mobile version