Hathras Incident
ಉತ್ತರ ಪ್ರದೇಶದ ಹತ್ರಾಸ್ ಸಮೀಪದ ಫುಲ್ಲೇರಾಯ್ ಗ್ರಾಮದ ಹೊರವಲಯದ ದೊಡ್ಡ ಮೈದಾನದಲ್ಲಿ ನಾರಾಯಣ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾನ ಸತ್ಸಂಗ ಆಯೋಜಿಸಲಾಗಿತ್ತು. ಸತ್ಸಂಗದಲ್ಲಿ ಭಾರಿ ಸಂಖ್ಯೆಯ ಭಕ್ತರು ಸೇರಿದ್ದರು, ಸತ್ಸಂಗ ಮುಗಿದು ಬಾಬಾ ತಮ್ಮ ಕಾರಿನಲ್ಲಿ ಹೋಗುವ ಸಮಯದಲ್ಲಿ ಉಂಟಾದ ಕಾಲ್ತುಳಿತದಿಂದ ನೂರಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಈ ದುರ್ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಘಟನೆಗೆ ಭೋಲೆ ಬಾಬ ನೇರ ಕಾರಣ ಎಂದು ಆರೋಪಿಸಲಾಗುತ್ತಿದ್ದು ಬಾಬಾ ಅನ್ನು ಬಂಧಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಅಂದಹಾಗೆ ಯಾರು ಈ ಭೋಲೆಬಾಬ?
ಒಳ್ಳೆಯ ಸೂಟು, ಕೋಟು ಬೂಟು ಹಾಕಿಕೊಂಡು, ವೇದಿಕೆ ಮೇಲೆ ಹಾಕಿರುವ ಐಶಾರಾಮಿ ಕುರ್ಚಿಯ ಮೇಲೆ ಕೂತು ಎದುರಿಗೆ ನೆಲದ ಮೇಲೆ ಕೂತ ಸಾವಿರಾರು ಮಂದಿಗೆ ಭಾಷಣ ಮಾಡುವ ಭೋಲೆ ಬಾಬ, ಈ ಸತ್ಸಂಗಗಳಿಗೆ ತಮ್ಮ ಜೊತೆಗೆ ಪತ್ನಿಯನ್ನೂ ಕರೆತರುತ್ತಾರೆ. ಉತ್ತರ ಪ್ರದೇಶದ ಶ್ರೀಮಂತ ಬಾಬಾಗಳಲ್ಲಿ ಒಬ್ಬರಾಗಿರುವ ಈ ಭೋಲೆ ಬಾಬ ಹಲವು ಐಶಾರಾಮಿ ಕಾರುಗಳನ್ನು ಹೊಂದಿದ್ದಾರೆ. ಉತ್ತರ ಪ್ರದೇಶದ ಹಲವು ಶಾಸಕರು, ಸಂಸದರು, ಮಂತ್ರಿಗಳು ಸಹ ಇವರ ಭಕ್ತರು.
https://samasthanews.com/stamped-in-uttar-pradesh-hathras-100-people-died/
ಭೋಲೆ ಬಾಬ ಕಾಶಿ ನಗರದ ಪಟಿಯಾಲ ಗ್ರಾಮದವರು. ತಂದೆಯ ಜೊತೆ ಕೃಷಿ ಮಾಡಿಕೊಂಡಿದ್ದ ಬಾಬಾ ಆ ಬಳಿಕ ಪೊಲೀಸ್ ನೌಕರಿಗೆ ಸೇರಿದರು. ಅಲ್ಲಿ 18 ವರ್ಷ ಸೇವೆ ಸಲ್ಲಿಸಿದ ಬಳಿಕ ಸ್ವಯಂ ನಿವೃತ್ತಿ ತೆಗೆದುಕೊಂಡು ಬಾಬಾ ಆಗಿಬಿಟ್ಟರು. ಆರಂಭದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಚಂದಾ ಎತ್ತುತ್ತಿದ್ದ ಬಾಬಾ. ತಮಗೆ ಈಶ್ವರನ ಸಾಕ್ಷಾತ್ಕಾರವಾಗಿದೆ ಎಂದು ಹೇಳಕೊಂಡಿರುವ ಬಾಬಾ, ನನಗ್ಯಾರೂ ಗುರು ಇಲ್ಲ ನಾನು ಈಶ್ವರ ಹೇಳುವಂತೆ ಕೇಳುವೆ, ನನ್ನ ಜೀವನವನ್ನು ಮಾನವ ಕಲ್ಯಾಣಕ್ಕೆ ಅರ್ಪಿಸಿರುವೆ ಎನ್ನುತ್ತಾ ಧಾರ್ಮಿಕ ಭಾಷಣಗಳನ್ನು ಮಾಡುತ್ತ ಭಾರಿ ಜನಪ್ರಿಯತೆ ಗಳಿಸಿದರು.
ಉತ್ತರ ಪ್ರದೇಶ ಮಾತ್ರವೇ ಅಲ್ಲದೆ ಅಕ್ಕ-ಪಕ್ಕದ ರಾಜ್ಯಗಳಲ್ಲಿಯೂ ಭೋಲೆ ಬಾಬಾಗೆ ಭಾರಿ ಸಂಖ್ಯೆಯ ಭಕ್ತರಿದ್ದಾರೆ. ಬಾಬಾಗೆ ನಿಯಮ ಮುರಿಯುವುದು ಹೊಸದೇನೂ ಅಲ್ಲ, ಈ ಹಿಂದೆ 2021 ರಲ್ಲಿ ಕೋವಿಡ್ ಸಮಯದಲ್ಲಿ ಸತ್ಸಂಗ ಮಾಡಿದ್ದರು ಬಾಬಾ. ಕೇವಲ 50 ಜನರಿಗೆ ಅನಿಮತಿ ಪಡೆದಿದ್ದ ಆ ಕಾರ್ಯಕ್ರಮಕ್ಕೆ ಆಗಮಿಸಿದ್ದಿದ್ದು ಬರೋಬ್ಬರಿ 50 ಸಾವಿರ ಜನ. ಆಗಲೂ ಬಾಬಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿತ್ತು ಆದರೆ ಬಾಬಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈಗ ಭೋಲೆ ಬಾಬಾ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಮಂದಿಯ ಜೀವ ಹೋಗಿದೆ. ಈಗಲಾದರೂ ಯೋಗಿ ಆದಿತ್ಯನಾಥರ ಸರ್ಕಾರ ಈ ಬಾಬಾ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆಯೇ ಕಾದು ನೋಡಬೇಕಿದೆ.