HD Kumaraswamy
ಮೂಡಾ ಸೈಟು ಹಗರಣ ಸಿದ್ದರಾಮಯ್ಯ ಅವರನ್ನು ಸುತ್ತುವರೆದಿದೆ. ಅಕ್ರಮಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಈಗಾಗಲೇ ಮೈಸೂರು ಲೋಕಾಯುಕ್ತ ಎಫ್ಐಆರ್ ದಾಖಲಿಸಿದೆ. ಇಡಿ ಸಹ ಪ್ರಕರಣದ ತನಿಖೆಗೆ ಇಳಿದಿದೆ. ವಿಪಕ್ಷಗಳು ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿವೆ. ಪ್ರಕರಣ ಗಂಭೀರವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರ ಪತ್ನಿ ತಮಗೆ ನೀಡಲಾಗಿದ್ದ ಎಲ್ಲ 14 ಮೂಡಾ ಸೈಟುಗಳನ್ನು ಮರಳಿಸುವುದಾಗಿ ಪತ್ರ ಬರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಇದು ಕಾನೂನು ಉಲ್ಲಂಘನೆ ಎಂದಿದ್ದಾರೆ.
ಮುಡಾ ಹಗರಣವನ್ನು ಮುಚ್ಚಿ ಹಾಕಲು ಮಾಡಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ, ಸಾಕ್ಷ್ಯ ನಾಶಕ್ಕೆ ಪ್ರಯತ್ನ ನಡೆದಿದೆ. ನ್ಯಾಯಾಲಯಗಳ ಆದೇಶ ಉಲ್ಲಘಿಸಿ ಸಿಎಂ ಪತ್ನಿ ಅವರಿಂದ ನಿವೇಶನಗಳನ್ನು ವಾಪಸ್ ಪಡೆದಿರುವ ಮೂಡಾ ಆಯುಕ್ತರನ್ನು ಕೂಡಲೇ ಬಂಧಿಸಬೇಕು ಎಂದಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮೂಡಾ ಹಗರಣ ಮುಚ್ಚಿ ಹಾಕಲು ಸಿಎಂ ಸಿದ್ದರಾಮಯ್ಯ ಜೊತೆಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಲೋಕಾಯುಕ್ತ ಅಧಿಕಾರಿಗಳು ಹಾಗೂ ಮೂಡಾ ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ 14 ಮೂಡಾ ನಿವೇಶನಗಳನ್ನು ಹಿಂದಿರುಗಿಸಿರುವ ಕ್ರಮದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಎಚ್ಡಿ ಕುಮಾರಸ್ವಾಮಿ, ಸಿಎಂ ಪತ್ನಿ ವಾಪಸ್ ನೀಡಿರುವ ನಿವೇಶನಗಳನ್ನು ಹಿಂದಕ್ಕೆ ಪಡೆದಿರುವುದು ನ್ಯಾಯಾಲಯದ ಆದೇಶದ ಉಲ್ಲಂಘನೆ ಮತ್ತು ನ್ಯಾಯಾಂಗ ನಿಂದನೆ ಆಗಿದೆ, ಹೀಗಾಗಿ ಮುಡಾ ಆಯುಕ್ತರನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
HD Kumarswamy: ಕುಮಾರಸ್ವಾಮಿಯನ್ನೇ ಹಂದಿ ಎಂದ ಅಧಿಕಾರಿ, ಕೆಂಡಾಮಂಡಲವಾದ ಸಚಿವ
ಮೂಡಾ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ಕೈಗೆತ್ತಿಕೊಂಡು ಈಸಿಆರ್ ದಾಖಲು ಮಾಡಿದ ಕೂಡಲೇ ಸಿಎಂ ಸಿದ್ದರಾಮಯ್ಯ ಮತ್ತು ಇತರೆ ಅಧಿಕಾರಿಗಳು, ಸಚಿವರುಗಳು ಚುರುಕಾಗಿದ್ದಾರೆ. ಮಂಗಳವಾರದ ದಿನ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರೇ ಖುದ್ದು ಮುಡಾ ಕಚೇರಿಗೆ ಬಂದು ನಿವೇಶನ ವಾಪಸ್ ನೀಡುವುದಾಗಿ ಹೇಳಿದ್ದರು. ಈ ಹೇಳಿಕೆ ಹೊರಬಿದ್ದ ನಂತರ ಎಲ್ಲಾ ನಿವೇಶನಗಳು ಮೂಡಾ ವಶಕ್ಕೆ ಹೋಗಿವೆ. ಹದಿನಾಲ್ಕು ನಿವೇಶನಗಳ ಕ್ರಯಪತ್ರಗಳು ರದ್ದಾಗಿವೆ ಎಂದು ಮುಡಾ ಆಯುಕ್ತರೇ ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲಾ ರಾಕೆಟ್ ವೇಗದಲ್ಲಿ ಆಗಿದೆ ಎಂದು ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಮೂಡಾ ಆಯುಕ್ತರು ನಿವೇಶನಗಳನ್ನು ವಾಪಸ್ ಪಡೆದಿರುವುದು ತಪ್ಪು, ಅವರಿಗೆ ಈ ಅಧಿಕಾರ ಇಲ್ಲ. ಇಲ್ಲಿ ಸಿಎಂ ಅಧಿಕಾರದ ದುರುಪಯೋಗ ಮಾಡಿದ್ದಾರೆ. ಯಾವ ಆಧಾರದ ಮೇಲೆ ವಾಪಸ್ ಪಡೆಯಲಾಗಿದೆ? ಮೂಡಾ ಆಯುಕ್ತರು ತಮ್ಮ ಅಧಿಕಾರ ಮೀರಿ ವರ್ತಿಸಿದಾರೆ. ಹೀಗಾಗಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಭಿನ್ನ-ಭಿನ್ನ ಹೇಳಿಕೆಗಳನ್ನು ಸಿಎಂ ಸಿದ್ದರಾಮಯ್ಯ ನೀಡುತ್ತಿದ್ದಾರೆ. ಒಮ್ಮೆ ಯಾರ ಆಸ್ತಿ ಇದು? ಎಂದರು, ಒಮ್ಮೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದುರ. ಕೋರ್ಟ್ ನಲ್ಲಿ ನಮ್ಮದೇ ಆಸ್ತಿ ಎಂದಿದ್ದಾರೆ. ಇನ್ನೊಮ್ಮೆ ಜುಜುಬಿ ನಿವೇಶನಗಳು ಎಂದರು. ಅವುಗಳ ಮೌಲ್ಯ ₹62 ಕೋಟಿ ಎಂದಿದ್ದಾರೆ. ಇದರ ನಡುವೆ ಮೂಡಾ ಆಯುಕ್ತರಿಗೆ ಯಾರು ಬಂದು ನಿವೇಶನ ವಾಪಸ್ ಪಡೆಯುವ ಅರ್ಜಿ ಕೊಟ್ಟರು? ಹೇಗೆ ಪಡೆದರು ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.