Bengaluru Food
ಇಡ್ಲಿ, ವಡೆ ಎಂಬುದು ದಕ್ಷಿಣ ಭಾರತದವರಿಗೆ ಜೀವನದ ಅವಿಭಾಜ್ಯ ಅಂಗ. ನಿರ್ದೇಶಕ ಯೋಗರಾಜ ಭಟ್ಟರನ್ನು ಪತ್ರಕರ್ತರೊಬ್ಬರು ‘ಅಲ್ಲಾ ಸ್ವಾಮಿ ನಿಮ್ಮ ಗೆಳೆಯರೆಲ್ಲ ಫಾರಿನ್ ಹೋಗಿ ಸಾಂಗ್ ಶೂಟ್ ಮಾಡ್ತಾರೆ, ನೀವ್ಯಾಕೆ ಫಾರಿನ್ಗೆ ಹೋಗಲ್ಲ’ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಭಟ್ಟರು, ‘ಫಾರಿನ್ ನಲ್ಲಿ ಇಡ್ಲಿ ವಡೆ ಸಿಗಲ್ಲ, ಅದಕ್ಕೆ ಅಲ್ಲಿಗೆ ಹೋಗಲ್ಲ’ ಎಂದಿದ್ದರು. ಇಡ್ಲಿ, ವಡೆಯನ್ನು ನಾವು ದಕ್ಷಿಣ ಭಾರತದವರು, ವಿಶೇಷವಾಗಿ ಕನ್ನಡಿಗರು ಅದೆಷ್ಟು ಪ್ರೀತಿಸುತ್ತೇವೆ ಎಂಬುದನ್ನು ಮಾತುಗಳಲ್ಲಿ ಹೇಳುವುದು ಕಷ್ಟ. ಒಳ್ಳೆಯ ಇಡ್ಲಿ ತಿನ್ನಲು ನೂರಾರು ಕಿಲೋ ಮೀಟರ್ ಬೇಕಾದರೂ ಕ್ರಮಿಸುತ್ತೇವೆ. ಬೆಂಗಳೂರಿನ ಸುತ್ತ ಮುತ್ತ ಒಳ್ಳೆಯ ಇಡ್ಲಿ ಸಿಗುವ ಹತ್ತು ಹೋಟೆಲ್ಗಳ ಪಟ್ಟಿ ಇಲ್ಲಿದೆ.
ಬಿಡದಿ ತಟ್ಟೆ ಇಡ್ಲಿ
ಬೆಂಗಳೂರಿನಿಂದ ತುಸುವೇ ದೂರದಲ್ಲಿರುವ ಬಿಡದಿ ತನ್ನ ತಟ್ಟೆ ಇಡ್ಲಿಗೆ ಬಹಳ ಜನಪ್ರಿಯ. ಒಂದು ಕಾಲದಲ್ಲಂತೂ ಬಿಡದಿ ತಟ್ಟೆ ಇಡ್ಲಿಗಾಗಿ ಜನ ಸಾಲುಗಟ್ಟುತ್ತಿದ್ದರು. ಈಗ ಬೆಂಗಳೂರು-ಮೈಸೂರು ರಸ್ತೆ ಆದ ಬಳಿಕ ಬಿಡದಿ ತಟ್ಟೆ ಇಡ್ಲಿ ತುಸು ಮಂಕಾಗಿದೆ. ಆದರೆ ಈಗಲೂ ಭಾನುವಾರ-ಶನಿವಾರ ಜನ ಬೆಂಗಳೂರಿನಿಂದ ಹೋಗಿ ತಟ್ಟೆ ಇಡ್ಲಿ ಸವಿದು ಬರುತ್ತಾರೆ.
ಚಿಬ್ಲು ಇಡ್ಲಿ
ಹಲಗೂರಿನ ಚಿಬ್ಲು ಇಡ್ಲಿಯ ಮೃದುತ್ವ ಅಬ್ಬಬ್ಬಾ, ತಿಂದವನೇ ಬಲ್ಲ ಆ ಸವಿಯ. ಮಂಡ್ಯ ಜಿಲ್ಲೆಯ ಹಲಗೂರಿನ ಬಾಬು ಹೋಟೆಲ್ ಚಿಬ್ಲು ಹೋಟೆಲ್ಗೆ ದೊಡ್ಡ ಅಭಿಮಾನಿ ವರ್ಗವಿದೆ. ಬೆಂಗಳೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿದ್ದರೂ ಸಹ ಬೆಂಗಳೂರಿಗರ ಮೆಚ್ಚಿನ ಇಡ್ಲಿ ಹೋಟೆಲ್ಗಳಲ್ಲಿ ಇದು ಸಹ ಒಂದು. ಬಿದಿರಿನ ಸಣ್ಣ ಬುಟ್ಟಿಗಳು, ಕಡ್ಡಿಗಳನ್ನು ಬಳಸಿ ಮಾಡುವ ಮುದ್ದಾದ ಇಡ್ಲಿ, ಈ ಚಿಬ್ಲು ಇಡ್ಲಿ.
ಪವಿತ್ರಾ ತಟ್ಟೆ ಇಡ್ಲಿ
ತುಮಕೂರಿನ ಬಳಿಯ ಕ್ಯಾತಸಂದ್ರ ಕ್ರಾಸ್ನಲ್ಲಿರುವ ಪವಿತ್ರಾ ತಟ್ಟೆ ಇಡ್ಲಿ ಅದರ ಮೇಲೆ ಇಡುವ ಬೆಣ್ಣೆ ಅಬ್ಬಬ್ಬ. ಸಿದ್ದಗಂಗಾ ಮಠಕ್ಕೆ ಹೋಗಲು ತೆಗೆದುಕೊಳ್ಳುವ ತಿರುವಿನ ಬಳಿಯೇ ಇರುವ ಪವಿತ್ರಾ ಹೋಟೆಲ್ ದಿನಕ್ಕೆ ಸಾವಿರಾರು ಇಡ್ಲಿ ಮಾರಾಟ ಮಾಡುತ್ತದೆ. ಅಂದಹಾಗೆ ಇಲ್ಲಿ ಮಸಾಲೆ ದೋಸೆಯೂ ಚೆನ್ನಾಗಿರುತ್ತದೆ.
ನಾಣಿ ಹೋಟೆಲ್
ದೇವನಹಳ್ಳಿ ದಾಟಿ ಬಂದರೆ ಸಿಗುವ ವಿಜಯಪುರದ ನಾಣಿ ಹಾಗೂ ಬಾಬು ಹೋಟೆಲ್ನ ಇಡ್ಲಿಗೂ ಸಹ ಪ್ರತ್ಯೇಕ ಅಭಿಮಾನಿ ವರ್ಗವಿದೆ. ನಾಣಿ ಹಾಗೂ ಬಾಬು ಹೋಟೆಲ್ಗಳು ವಿಜಯಪುರದ ಅತ್ಯಂತ ಹಳೆಯ ಹಾಗೂ ರುಚಿಯಾದ ಆಹಾರ ಕೊಡುವ ಹೋಟೆಲ್ಗಳು. ಎರಡೂ ಹೋಟೆಲ್ಗಳಲ್ಲಿ ಇಡ್ಲಿ ಜೊತೆಗೆ ಮಸಾಲೆ ದೋಸೆಯನ್ನೂ ಸವಿಯಬಹುದು.
ಕೋಟೆ ಇಡ್ಲಿ
ಕನಕಪುರದ ಕೋಟೆ ಇಡ್ಲಿ, ಪುಟ್ಟದಾಗಿದ್ದರೂ ಮೃದುವಾಗಿಯೂ ಅದಕ್ಕೆ ಕೊಡುವ ಚಟ್ನಿ ಖಾರವಾಗಿಯೂ ಇದ್ದು ತಿಂದವರು ಇನ್ನಷ್ಟು, ಮತ್ತಷ್ಟು ಹಾಕಿಸಿಕೊಳ್ಳುವಂತಿರುತ್ತದೆ. 50 ವರ್ಷದಿಂದಲೂ ಒಬ್ಬರೇ ವ್ಯಕ್ತಿ ಕೋಟೆ ಇಡ್ಲಿ ಮಾಡಿ ಮಾರುತ್ತಿದ್ದಾರೆ. ಇಲ್ಲಿ ಇಡ್ಲಿ ಹೊರತಾಗಿ ಇನ್ನೇನು ಸಿಗುವುದಿಲ್ಲ. ಕಟ್ಟಿಗೆ ಒಲೆಯಲ್ಲಿ ಇಡ್ಲಿ ಮಾಡಿ ಬಹಳ ಕಡಿಮೆ ಬೆಲೆಗೆ ಇಡ್ಲಿ ಮಾರಾಟ ಮಾಡಲಾಗುತ್ತದೆ. ಇತ್ತೀಚೆಗೆ ಇದೇ ಹೆಸರಿನ ಇನ್ನೂ ಕೆಲವು ಕೋಟೆ ಇಡ್ಲಿ ಹೋಟೆಲ್ಗಳು ಕನಕಪುರದಲ್ಲಿ ಪ್ರಾರಂಭವಾಗಿವೆ. ಆದರೆ ಹಂಸವಾಣಿ ಶಾಲೆಯ ಎದುರು ಇರುವುದೇ ನಿಜವಾದ ಕೋಟೆ ಇಡ್ಲಿ ಹೋಟೆಲ್.
ಶಿವಪ್ಪ ಇಡ್ಲಿ ಹೋಟೆಲ್
ಪಾಂಡವಪುರದ ಶಿವಪ್ಪ ಇಡ್ಲಿ ಹೋಟೆಲ್ನ ಇಡ್ಲಿಗಳಿಗೆ ವಿಶೇಷ ಘಮ, ಮೃದುತ್ವ ಇದೆ. ಇದೇ ಕಾರಣಕ್ಕೆ ದೂರವಾದರೂ ಸಹ ಗುಂಪುಗಳಲ್ಲಿ ಜನ ಹೋಗಿ ಶಿವಪ್ಪ ಇಡ್ಲಿ ಹೋಟೆಲ್ನ ಇಡ್ಲಿ ಮೆದ್ದು ಬರುತ್ತಾರೆ. ಎಲ್ಲೆಡೆ ಇಡ್ಲಿ ಮೇಲೆ ಬೆಣ್ಣೆ ಹಾಕಿಕೊಟ್ಟರೆ, ಶಿವಪ್ಪ ಇಡ್ಲಿ ಹೋಟೆಲ್ನಲ್ಲಿ ಚಟ್ನಿ ಮೇಲೆ ಬೆಣ್ಣೆ ಹಾಕಲಾಗುತ್ತದೆ.
ನಂಜುಂಡಪ್ಪ ಇಡ್ಲಿ ಹೋಟೆಲ್
ತುಮಕೂರಿನ ಎಂಜಿ ರಸ್ತೆಯ ಪೊಲೀಸ್ ಸಮುದಾಯದ ಬಳಿ ಇರುವ ನಂಜುಂಡಪ್ಪ ಇಡ್ಲಿ ಹೋಟೆಲ್ ಪ್ರಾರಂಭವಾಗಿ 50 ವರ್ಷಗಳಾಗುತ್ತಾ ಬಂದಿದೆ. ಈಗಲೂ ಹಳೆಯ ರುಚಿಯನ್ನೇ ಉಳಿಸಿಕೊಂಡಿದೆ ಈ ಹೋಟೆಲ್. ಈ ಹೋಟೆಲ್ನ ಇಡ್ಲಿ ತಿನ್ನಲು ತುಮಕೂರಿನ ಜನರಷ್ಟೆ ಅಲ್ಲ ಬೇರೆ-ಬೇರೆ ಜಿಲ್ಲೆಗಳ ಜನರೂ ಸಹ ತುಮಕೂರಿಗೆ ಬರುತ್ತಾರೆ.
Bengaluru: ಬಾಡಿಗೆ ತಗ್ಗಿಸುತ್ತಿದ್ದಾರೆ ಬೆಂಗಳೂರಿನ ಮನೆ ಮಾಲೀಕರು, ಕಾರಣವೇನು?
ಹೋಟೆಲ್ ಪರಿಮಳ
ಕುಣಿಗಲ್ನ ಹೋಟೆಲ್ ಪರಿಮಳ ಕಲೆದ 42 ವರ್ಷಗಳಿಂದಲೂ ಹಸಿದವರಿಗೆ ರುಚಿಯಾದ ಊಟ ಬಡಿಸುತ್ತಾ ಬಂದಿದೆ. ಈ ಹೋಟೆಲ್ನ ಇಡ್ಲಿಗೆ ಏನೋ ಒಂದು ವಿಶೇಷತೆಯಿದೆ. ಇಡ್ಲಿ, ರವೆ ಇಡ್ಲಿ, ವಡೆ ಹಾಗೂ ದೋಸೆ ಇಷ್ಟು ಮಾತ್ರವೇ ಇಲ್ಲಿ ಸಿಗುತ್ತದೆಯಾದರೂ ಸಿಗುವ ಎಲ್ಲ ತಿಂಡಿಗಳನ್ನೂ ಗ್ರಾಹಕರು ಬಯಸಿ ಬಯಸಿ ತಿನ್ನುತ್ತಾರೆ.
ಕೆಸರಮಾಡು ಗಂಗಾಧರ ಇಡ್ಲಿ ಹೋಟೆಲ್
ತುಮಕೂರಿನಲ್ಲಿರುವ ಕೆಸರಮಾಡು ಇಡ್ಲಿ ಹೋಟೆಲ್ ತನ್ನ ಭಿನ್ನವಾದ ಇಡ್ಲಿಯಿಂದ ಜನಪ್ರಿಯವಾಗಿದೆ. ಕೆಸರಮಾಡುವಿನ ಗಂಗಾಧರ ಇಡ್ಲಿ ಹೋಟೆಲ್ನಲ್ಲಿ ತಟ್ಟೆ ಇಡ್ಲಿಯನ್ನು ತುಪ್ಪದಲ್ಲಿ ರೋಸ್ಟ್ ಮಾಡಿ ಸರ್ವ್ ಮಾಡಲಾಗುತ್ತದೆ. ತುಪ್ಪದ ರೋಸ್ಟ್ ಇಡ್ಲಿಗೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ.