Sai Baba
ಉತ್ತರ ಭಾರತದ ಹಲವು ಹಿಂದೂ ದೇವಾಲಯಗಳಲ್ಲಿ ನಿರ್ಮಿಸಲಾಗಿರುವ ಕೆಲವು ಮೂರ್ತಿಗಳನ್ನು ಹಿಂದೂ ಕಾರ್ಯಕರ್ತರು ತೆರವು ಮಾಡುತ್ತಿದ್ದಾರೆ. ಹಾರೆ ಪಿಕಾಸೆ ತೆಗೆದುಕೊಂಡು ಒಡೆದು ಬೀಳಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ದೇವಾಲಯಗಳ ಬಗ್ಗೆ ಕಾಳಜಿ ಹೊಂದಿರುವ, ದೇವಾಲಯಗಳ ಉಳಿವಿಗೆ ಹೋರಾಡುವ ಮಾತುಗಳನ್ನಾಡುವ ಹಿಂದೂ ಕಾರ್ಯಕರ್ತರು ದೇವಾಲಯದಲ್ಲಿನ ಮೂರ್ತಿಗಳನ್ನು ಕೆಡವಲು ಕಾರಣ ಇದೆ.
ಹಿಂದೂ ಕಾರ್ಯಕರ್ತರು ತೆರವು ಮಾಡುತ್ತಿರುವುದು ಶಿರಡಿ ಸಾಯಿ ಬಾಬ ಅವರ ಮೂರ್ತಿಗಳನ್ನು. ವಾರಣಾಸಿ ಹಾಗೂ ಉತ್ತರ ಪ್ರದೇಶದ ಇನ್ನೂ ಕೆಲವು ದೇವಾಲಯಗಳಲ್ಲಿ ನಿರ್ಮಾಣ ಮಾಡಲಾಗಿದ್ದ ಶ್ವೇತ ವರ್ಣದ ಸಾಯಿ ಬಾಬ ಮೂರ್ತಿಗಳನ್ನು ಹಿಂದೂ ಕಾರ್ಯಕರ್ತರು ತೆರವುಗೊಳಿಸುತ್ತಿದ್ದಾರೆ. ಕಳೆದೊಂದು ವಾರದಿಂದಲೂ ಈ ಸಾಯಿ ಬಾಬ ಮೂರ್ತಿ ತೆರವು ಕಾರ್ಯ ಚಾಲ್ತಿಯಲ್ಲಿದೆ. ಇದರ ಸಂಬಂಧ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ವಾರಣಾಸಿಯ ಸನಾತನ ರಕ್ಷಕ ದಳದ ಸದಸ್ಯರು ನಗರದ ಕೆಲವು ಪ್ರಮುಖ ದೇವಾಲಯಗಳಲ್ಲಿ ಇದ್ದ ಸಾಯಿ ಬಾಬ ಮೂರ್ತಿಗಳನ್ನು ತೆರವುಗೊಳಿಸಿದ್ದಾರೆ. ಬಡಾ ಗಣೇಶ್ ದೇವಾಲಯ ಹಾಗೂ ಇನ್ನೂ ಕೆಲವು ದೇವಾಲಯಗಳಲ್ಲಿದ್ದ ವಿಗ್ರಹಗಳನ್ನು ತೆರವುಗೊಳಿಸಲಾಗಿದೆ. ದೇವಾಲಯದ ಪ್ರಧಾನ ಅರ್ಚಕ ರಾಮು ಗುರು ಮಾತನಾಡಿ, ‘ಶಾಸ್ತ್ರಗಳಲ್ಲಿ ಸಾತಿ ಬಾಬ ಪೂಜೆ ಬಗ್ಗೆ ಉಲ್ಲೇಖಗಳಿಲ್ಲ ಹಾಗಾಗಿ ಮೂರ್ತಿಯನ್ನು ತೆರವು ಮಾಡಲಾಗಿದೆ’ ಎಂದಿದ್ದಾರೆ.
Hindu Temple: ಅಮೆರಿಕದಲ್ಲಿ ಎರಡು ಹಿಂದೂ ದೇವಾಲಯಗಳ ಮೇಲೆ ದಾಳಿ: ಹಿಂದೂಗಳ ಮೇಲೆ ಏಕೆ ಈ ದ್ವೇಷ
ಅಯೋಧ್ಯೆಯ ಹನುಮಾನ್ ಗರ್ಹಿ ದೇವಾಲಯದ ಅರ್ಚಕ ಮಾತನಾಡಿ, ‘ಸಾಯಿ ಬಾಬ ಧರ್ಮ ಗುರು ಆಗಿರಬಹುದು, ಸಂತ ಆಗಿರಬಹುದು, ಮಹಾಪುರುಷ ಆಗಿರಬಹುದು, ಧರ್ಮ ಪ್ರಚಾರಕ ಆಗಿರಬಹುದು, ಒಬ್ಬ ಮೌಲ್ವಿಯೂ ಆಗಿರಬಹುದು ಆದರೆ ಸಾಯಿ ಬಾಬ ದೇವರಲ್ಲ. ಹಾಗಾಗಿ ಸಾಯಿ ಬಾಬ ಮೂರ್ತಿಗಳನ್ನು ತೆರವು ಮಾಡಿರುವ ಕ್ರಮ ಸರಿಯಾಗಿಯೇ ಇದೆ’ ಎಂದಿದ್ದಾರೆ.
ಸನಾತನ ರಕ್ಷಕ ದಳದ ಮುಖ್ಯಸ್ಥ ಅಜಯ್ ಶರ್ಮಾ ಮಾತನಾಡಿ, ‘ಕಾಶಿ (ವಾರಣಾಸಿ) ಯಲ್ಲಿ ಕೇವಲ ಮಹಾಶಿವನ ಆರಾಧನೆ ಮಾತ್ರವೇ ಆಗಬೇಕು. ಶಿವನೊಬ್ಬನೇ ಸರ್ವಸ್ವ, ಆತನೇ ಮಹಾನ್. ಹಿಂದೂ ಭಕ್ತರ ಭಾವನೆಗಳಿಗೆ ಗೌರವ ನೀಡಿ ಈ ವರೆಗೆ ಹತ್ತು ಹಿಂದೂ ದೇವಾಲಯಗಳಿಂದ ಸಾಯಿ ಬಾಬ ಮೂರ್ತಿಯನ್ನು ತೆರವು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ದೇವಾಲಯಗಳಿಂದ ತೆರವು ಮಾಡಲಿದ್ದೇವೆ’ ಎಂದಿದ್ದಾರೆ.
ಸಾಯಿ ಬಾಬ ಸೂಫಿ ಪಂಥದ ಅನುಯಾಯಿಗಳಾಗಿದ್ದರು, ಇದೇ ಕಾರಣಕ್ಕೆ ಈಗ ಅವರ ಮೂರ್ತಿಗಳನ್ನು ತೆರವು ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸ್ಥಳೀಯ ಸಾಯಿ ಬಾಬ ದೇವಾಲಯದ ಅರ್ಚಕರು ಮಾತನಾಡಿ, ‘ಈಗ ಸನಾತನಿ ಎಂದು ಹೇಳಿಕೊಂಡು ಯಾರು ಸಾಯಿ ಬಾಬ ಮೂರ್ತಿಗಳನ್ನು ತೆರವು ಮಾಡುತ್ತಿದ್ದಾರೋ ಅದೇ ಸನಾತನಿಗಳು ವರ್ಷಗಳ ಹಿಂದೆ ಸಾಯಿ ಬಾಬ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.