Bengaluru Lake: ಬೆಂಗಳೂರಿನಲ್ಲಿ ಇದ್ದ ಕೆರೆಗಳೆಷ್ಟು? ಈಗ ಉಳಿದಿರುವ ಕೆರೆಗಳು ಎಷ್ಟು?

0
167
Bengaluru Lake

Bengaluru Lake

ಬೆಂಗಳೂರಿಗೆ ಈ ಬೇಸಿಗೆ ಹಲವು ಸಮಸ್ಯಗಳನ್ನು ತಂದೊಡ್ಡಿದೆ. ಈಗ ಬೆಂಗಳೂರಿಗರು ಅನುಭವಿಸುತ್ತಿರುವ ಬಿಸಿಲು ಹಬೆಯನ್ನು ಹಿಂದೆಂದೂ ಅನುಭವಿಸುತ್ತಿರಲಿಲ್ಲವಂತೆ. ಇನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ನೀರಿನ ಅಭಾವ ತಲೆದೂರಿದೆ. ಹಲವು ಪ್ರಮುಖ ಏರಿಯಾಗಳಲ್ಲಿಯೇ ನೀರಿನ ಅಭಾವ ಸೃಷ್ಟಿಯಾಗಿದೆ. ಇದಕ್ಕೆಲ್ಲ ಕಾರಣ ಹುಡುಕುತ್ತಾ ಹೊರಟವರಿಗೆ ಸಿಗುತ್ತಿರುವ ಮೊದಲ ಉತ್ತರವೇ ಅತಿಯಾದ ನಗರೀಕರಣ. ಇದ್ದ ಮರಗಳನ್ನೆಲ್ಲ ಕಡಿದು, ಬೆಂಗಳೂರಿಗೆ ನೀರುಣಿಸುತ್ತಿದ್ದ ಕೆರೆಗಳನ್ನು ಅತಿಕ್ರಮಣ ಮಾಡಿಕೊಂಡ ಪರಿಣಾಮವನ್ನು ಈಗ ಬೆಂಗಳೂರಿಗರು ಎದುರಿಸುತ್ತಿದ್ದಾರೆ.

ಅದರಲ್ಲಿಯೂ ಬೆಂಗಳೂರಿನ ಕೆರೆಗಳನ್ನು ನಮ್ಮ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಕೊಂದ ರೀತಿ ಅತ್ಯಂತ ಹೀನಾಯ. ಬೆಂಗಳೂರಿನ ಕೆರೆಗಳು ಉಳಿದ ನಗರಗಳ ಕೆರೆಗಳಂಥಲ್ಲ. ಬೆಂಗಳೂರಿನ ಕೆರೆಗಳ ನಿರ್ಮಾಣದ ಹಿಂದೆ ಘನ ಉದ್ದೇಶವಿತ್ತು. ನಮ್ಮ ಪೂರ್ವಜರನೇಕರ ಶ್ರಮ, ಮುಂದಾಲೋಚನೆಗಳಿತ್ತು. ಗಂಗರು, ಕೆಂಪೇಗೌಡರಂಥಹಾ ಮಹನೀಯರ ದೂರದೃಷ್ಟಿಯ ಕಾರಣದಿಂದ ನಿರ್ಮಾಣವಾದ ಜನಾನುರಾಗಿ ಕೆರೆಗಳನ್ನು ನಾವಿಂದು ಕೊಂದಿದ್ದೇವೆ.

ಬೆಂಗಳೂರನ್ನು ‘ಸಾವಿರ ಕೆರೆಗಳ ನಗರ’ ಎಂದು ಆಂಗ್ಲ ಅಧಿಕಾರಿ ಕರೆದಿದ್ದರು. ಬೆಂಗಳೂರಿನಲ್ಲಿ ಸಾವಿರಕ್ಕೂ ಮಿಕ್ಕಿ ಕೆರೆಗಳಿದ್ದವೆಂದರೆ ನಂಬಲೇ ಬೇಕು. 2013 ರಲ್ಲಿ ನಿವೃತ್ತ ಅಧಿಕಾರಿ ವಿ ಬಾಲಸುಬ್ರಹ್ಮಣ್ಯಂ ಸಲ್ಲಿಸಿರುವ ಸಂಶೋಧನಾ ವರದಿಯ ಪ್ರಕಾರ, ಬೆಂಗಳೂರಿನಷ್ಟು ವೇಗವಾಗಿ ಕೆರೆಗಳ ವಿನಾಶ ಇನ್ಯಾವುದೇ ನಗರಗಳಲ್ಲಿ ಆಗಿಲ್ಲವಂತೆ. ಒಂದು ಕಾಲದಲ್ಲಿ 1000 ಕ್ಕೂ ಹೆಚ್ಚು ಕೆರೆ, ಕುಂಟೆಗಳಿದ್ದ ಬೆಂಗಳೂರಿನಲ್ಲಿ 2016ರ ವೇಳೆಗೆ ಉಳಿದಿದ್ದು ಕೇವಲ 200 ಕೆರೆಗಳಷ್ಟೆ. 2017ರಲ್ಲಿ ಬಿಬಿಎಂಪಿ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿರುವ ಮಾಹಿತಿಯಂತೆ ಬೆಂಗಳೂರಿನಲ್ಲಿ ಆಗ ಕೇವಲ 17 ಮಾತ್ರವೇ ‘ಒಳ್ಳೆಯ’ ಕೆರೆಗಳಿವೆ. 1000 ಎಲ್ಲಿ 17 ಎಲ್ಲಿ, ಎಲ್ಲಿಂದೆಲ್ಲಿಯ ಅಂತರ.

ಮರ ತಬ್ಬಿಕೊಳ್ಳಲು 1500, ಬೆಂಗಳೂರಿನಲ್ಲಿ ಹೀಗೊಂದು ಬ್ಯುಸಿನೆಸ್

ಬೆಂಗಳೂರಿನಲ್ಲಿ 1000 ಕೆರೆಗಳು ಇತ್ತಾದರೆ ಅಷ್ಟೋಂದು ಕೆರೆಗಳ ಅವಶ್ಯಕತೆ ಬೆಂಗಳೂರಿಗೆ ಏನಿತ್ತು? ಅವುಗಳನ್ನು ನಿರ್ಮಾಣ ಮಾಡಿದ್ಯಾರು? ಏಕೆ? ಎಂಬ ಪ್ರಶ್ನೆಗಳು ಸಹ ಮೂಡುತ್ತವೆ. ಬಹುತೇಕರಿಗೆ ತಿಳಿದಿರುವಂತೆ ಬೆಂಗಳೂರು ಸಮುದ್ರಮಟ್ಟದಿಂದ 3000 ಅಡಿಗಳಷ್ಟು ಎತ್ತರದಲ್ಲಿದೆ. ಹಾಗಾಗಿ ಇಲ್ಲಿ ನದಿಗಳ ಹರಿವು ಇಲ್ಲ. ನದಿಗಳ ಹರಿವು ಇಲ್ಲದ ಕಾರಣದಿಂದ ಕೃಷಿ ಇನ್ನಿತರ ಚಟುವಟಿಕೆಗಳಿಗೆ ನೀರಿನ ಅಗತ್ಯ ಪೂರೈಸಲು ಕೆರೆ, ಕುಂಟೆಗಳ ನಿರ್ಮಾಣ ಅತ್ಯಂತ ಅಗತ್ಯವಾಗಿತ್ತು. ಗಂಗರ ಕಾಲದಲ್ಲಿ ಇಲ್ಲಿ ಕೆರೆಗಳ ನಿರ್ಮಾಣವಾಯ್ತು ಎನ್ನಲಾಗುತ್ತದೆ. ಬೆಂಗಳೂರಿನ ದೊಡ್ಡ ಕೆರೆ ಬೆಳಂದೂರು ಕೆರೆಯನ್ನು ಸಹ ಗಂಗರೇ ನಿರ್ಮಾಣ ಮಾಡಿದ್ದೆನ್ನುತ್ತದೆ ಇತಿಹಾಸ.

ಚೋಳರು, ಹೊಯ್ಸಳ ಹಾಗೂ ವಿಜಯನಗರ ಅರಸರು ಸಹ ಕೆರೆಗಳ ನಿರ್ಮಾಣ ಮುಂದುವರೆಸಿದರು. ಕೆರೆಗಳ ಮೂಲಕ ಬಿದ್ದ ಮಳೆ ನೀರನ್ನು ಸಂಗ್ರಹಿಸಿಟ್ಟುಕೊಂಡು ಬಳಸುವಂತಾಯ್ತು. ನಂತರ ಬಂದ ಕೆಂಪೇಗೌಡರು ಬೆಂಗಳೂರನ್ನು ಅದ್ಭುತವಾಗಿ ಕಟ್ಟಿ ಬೆಳೆಸಿದರು. ಕೆಲವು ಇತಿಹಾಸಕಾರರು ಹೇಳುವಂತೆ ಕೆಂಪೇಗೌಡರ ತಾಯಿ ನೀಡಿದ ಸಲಹೆಯಿಂದ ಬೆಂಗಳೂರಿನಲ್ಲಿ ಹಲವು ಕೆರೆಗಳು, ಕುಂಟೆಗಳ ಜೊತೆಗೆ ಸಾವಿರಾರು ಸಂಖ್ಯೆಯಲ್ಲಿ ಮರಗಳನ್ನು ನೆಡೆಸಿದರಂತೆ ಕೆಂಪೇಗೌಡರು. ಕೆರೆಗಳನ್ನು ಕಟ್ಟಿಸಿದ್ದು ಮಾತ್ರವಲ್ಲದೆ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಲಿಂಕ್ ಇರುವಂತೆ ಮಾಡಿದರು. ಇದರಿಂದಾಗಿ ಕೆರೆಗಳು ಬೇಗನೆ ತುಂಬುತ್ತಿದ್ದ ಜೊತೆಗೆ ವರ್ಷದ ಎಲ್ಲ ಕಾಲದಲ್ಲಿಯೂ ನೀರು ಇರುವಂತೆ ಆಗುತ್ತಿತ್ತು.

ಆದರೆ 1980 ರಲ್ಲಿ ಆರಂಭವಾದ ಭೀಕರ ನಗರೀಕರಣದ ಪ್ರಭಾವದಿಂದಾಗಿ ಐವತ್ತು ವರ್ಷಗಳಲ್ಲಿ ಬೆಂಗಳೂರಿನ 96% ಪ್ರತಿಶತಃ ಕೆರೆಗಳನ್ನು ಕೊಲ್ಲಲಾಗಿದೆ ಮತ್ತು ಇಷ್ಟೇ ಪ್ರತಿಷತಃ ಹಸಿರನ್ನು ನಾಶಪಡಿಸಲಾಗಿದೆ. ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಾವೆಯೇ, ನಗರೀಕರಣಕ್ಕೆ ಬ್ರೇಕ್ ಹಾಕುತ್ತವೆಯೇ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here