Site icon Samastha News

Jeeva Park: ಜೀವ ಪಾರ್ಕ್: ಬೆಂಗಳೂರಿನ ಪಕ್ಕದಲ್ಲೇ ಒಂದು ಪ್ರಾಣಿಗಳ ಅರಮನೆ

Jeeva Park

Jeeva Park

ಎಲ್ಲೆ ಮೀರಿ ಬೆಳೆದಿರುವ ಬೆಂಗಳೂರು ಹಲವು ಜೀವಗಳನ್ನು ನಾಶ ಮಾಡಿದೆ. ಮೊದಲಿಗೆ ನಾಶ ಮಾಡಿದ್ದು ಪರಸರವನ್ನು, ಬೆಂಗಳೂರಿನ ಪ್ರಗತಿಗೆ ಜೀವ ಕೊಟ್ಟಿರುವ ಮರಗಳ ಸಂಖ್ಯೆ ಲಕ್ಷಾಂತರ. ಮರ, ಹಸಿರು ನಾಶವಾದರೆ ಅದನ್ನು ನಂಬಿಕೊಂಡಿರುವ ಹಕ್ಕಿಗಳು, ಪ್ರಾಣಿಗಳು ಅದರ ಜೊತೆಗೆ ನಾಶವಾಗುತ್ತವೆ. 50 ವರ್ಷದ ಹಿಂದೆ ಸಾಕಷ್ಟು ಕೃಷಿ ಭೂಮಿಯನ್ನು, ಹೈನುಗಾರಿಕೆ, ಕುರಿ-ಕೋಳಿ ಸಾಗಣೆ ಒಳಗೊಂಡಿದ್ದ ಬೆಂಗಳೂರಿನಲ್ಲಿ ಈಗ ಬೀದಿ ನಾಯಿ ಬಿಟ್ಟರೆ ಇನ್ನೇನೂ ಕಾಣುವುದಿಲ್ಲ. ಬೆಂಗಳೂರಿನ ಮಕ್ಕಳು ವಿವಿಧ ಪ್ರಾಣಿಗಳನ್ನು ಚಿತ್ರಗಳಲ್ಲಿ ಮಾತ್ರ ನೋಡಬೇಕು, ಹಕ್ಕಿಗಳನ್ನೂ ಅಷ್ಟೆ. ಆದರೆ ವಿವಿಧ ಪ್ರಾಣಿ, ಪಕ್ಷಿ ಕೆಲ ಸರಿಸೃಪಗಳನ್ನು ಹತ್ತಿರದಿಂದ ನೋಡಿ, ಮುಟ್ಟಿ, ಅವುಗಳ ಪರಿಚಯ ಪಡೆಯುವ ಸ್ಥಳ ಬೆಂಗಳೂರಿನ ಪಕ್ಕದಲ್ಲೇ ಇದೆ. ಅದುವೆ ಜೀವ.

ವೀಕೆಂಡ್ ಬರುತ್ತಲೆ ಬೆಂಗಳೂರಿನ ಮಂದಿ ನಗರದ ಜಂಜಾಟದಿಂದ ತಪ್ಪಿಸಿಕೊಳ್ಳಲು ನಂದಿ ಬೆಟ್ಟಕ್ಕೆ ಬರುತ್ತಾರೆ. ಈ ನಂದಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿಯೇ ಇದೆ ‘ಜೀವ ಪೆಟ್ ಸ್ಯಾಂಚ್ಯುರಿ’ (jeevapark.com) ದೇವನಹಳ್ಳಿ ಬಳಿಕ ಸಿಗುವ ನಂದಿ ಬೆಟ್ಟದ ದಾರಿಯಲ್ಲಿ, ತುಸು ಮುಂದೆ ಸಾಗಿ ಬಂದು, ಕಾರಹಳ್ಳಿ ಬಳಿ ತುಸು ತಿರುವು ತೆಗೆದುಕೊಂಡು ಮುಂದೆ ಹೋದರೆ ದಾರಿಯ ಪಕ್ಕದಲ್ಲೇ ಸುಮಾರು 3 ರಿಂದ 4 ಎಕರೆ ವಿಶಾಲ ಪ್ರದೇಶದಲ್ಲಿ ಜೀವ ಪಾರ್ಕ್ ಇದೆ.

ವಿಶಾಲವಾದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಕಾರು-ಬೈಕುಗಳಿಗೆ ನೆರಳಿನ ವ್ಯವಸ್ಥೆ ಇದೆ. ಬೆಂಗಳೂರಿನ ಆ ಬದಿಯಲ್ಲಿರುವ ಇತರೆ ಕೆಲವು ಪೆಟ್ ಸ್ಯಾಂಚುರಿಗಳಿಗೆ ಹೋಲಿಸಿದರೆ ಕಡಿಮೆ ದರದ ಟಿಕೆಟ್ ಹಣ ನೀಡಿ ಒಳಗೆ ಹೋದರೆ ಎದುರಾಗುವುದು ಪ್ರಾಣಿ ಪ್ರೇಮಿ, ಜೀವ ಪಾರ್ಕ್​ನ ಜೀವಾಳ, ಸಂಸ್ಥಾಪಕ ಚಂದನ್. ನಗು ಮುಖದಿಂದ ಸ್ವಾಗತಿಸುವ ಚಂದನ್ ಆ ಬಳಿಕ ಪ್ರಾಣಿಗಳ ಬಗ್ಗೆ ತಮಗಿರುವ ಮಾಹಿತಿ ಖಜಾನೆಯನ್ನು ತೆರೆದು ನಿಮ್ಮ ಮುಂದಿಡುತ್ತಾರೆ. ನಾವು ವರ್ಷಗಳಿಂದ ನೋಡಿಕೊಂಡು ಬಂದಿರುವ ಕೆಲವು ಪ್ರಾಣಿಗಳ ಬಗ್ಗೆ ಅಪರೂಪದ ಮಾಹಿತಿಯನ್ನು ಹೇಳಿ ಚಕಿತಗೊಳಿಸಿಬಿಡುತ್ತಾರೆ.

Dodaballapur: ಹೊಸ ನಗರ ನಿರ್ಮಾಣಕ್ಕೆ ದೊಡ್ಡಬಳ್ಳಾಪುರದ ಬಳಿ 25 ಎಕರೆ ಜಾಗ ನೀಡಿದ ಸರ್ಕಾರ

ಜೀವ ಪಾರ್ಕ್​ನಲ್ಲಿ ದೇಸಿ ಪ್ರಾಣಿಗಳ ಜೊತೆಗೆ ಕೆಲ ವಿದೇಶಿ, ಅಪರೂಪದ ಪ್ರಾಣಿಗಳು, ಪಕ್ಷಿಗಳು ಸಹ ಇವೆ. ಸ್ವಚ್ಛವಾದ ಪರಿಸರದಲ್ಲಿ ಆ ಪ್ರಾಣಿಗಳನ್ನು ಸಾಕಲಾಗುತ್ತಿದೆ. ಅಲ್ಲಿರುವ ಪ್ರತಿ ಪ್ರಾಣಿಗಳೊಟ್ಟಿಗೆ ನೀವು ಪರಿಚಯ ಬೆಳೆಸಿಕೊಳ್ಳಬಹುದು. ಪ್ರಾಣಿಗಳನ್ನು ಮುಟ್ಟಬಹುದು, ಹಿಡಿದುಕೊಳ್ಳಬಹುದು, ಪ್ರಾಣಿಗಳಿಗೆ ಊಟ ಸಹ ತಿನ್ನಿಸಬಹುದು. ಫೋಟೊ, ವಿಡಿಯೋ, ರೀಲ್ಸ್ ಮಾಡಿಕೊಳ್ಳಲಂತೂ ವಿಫುಲ ಅವಕಾಶ ಜೀವ ಪಾರ್ಕ್​ನಲ್ಲಿದೆ.

ಪ್ರಾಣಿ, ಪಕ್ಷಿಗಳು ಪಾತ್ರವೇ ಅಲ್ಲದೆ, ಇಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿಯೂ ಇದೆ. ಪ್ರಯೋಗಶೀಲ ವ್ಯಕ್ತಿತ್ವದ ಚಂದನ್, ಪ್ರಯೋಗಿಕ ಕೃಷಿಯನ್ನು ಜೀವ ಪಾರ್ಕ್​ನಲ್ಲಿ ಮಾಡಿದ್ದಾರೆ. ಮಣ್ಣು ರಹಿತವಾಗಿ ಹೈಡ್ರೋಫೋನಿಕ್ ವಿಧಾನದಲ್ಲಿ ಹೂವಿನ ಕೃಷಿ ಮಾಡಿದ್ದಾರೆ. ಇನ್ನು ಸೂರ್ಯಕಾಂತಿಯಂತೂ ಇಡೀ ಜೀವ ಪಾರ್ಕ್​ನ ಮೂಲೆ ಮೂಲೆಯಲ್ಲಿಯೂ ಇದೆ. ಪ್ರಾಣಿಗಳಿಗೆ ಬೇಕಾದ ಹುಲ್ಲು, ಪಪ್ಪಾಯ ಹಣ್ಣು ಇನ್ನಿತರೆಗಳನ್ನು ಅಲ್ಲಿಯೇ ಬೆಳೆಸುತ್ತಿದ್ದಾರೆ. ಪ್ರಾಣಿಗಳ ಜೊತೆಗೆ ಚಂದನ್ ಅವರ ಪ್ರಯೋಗಿಕ ಕೃಷಿ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಬಹುದು.

ಇನ್ನು ಪಾರ್ಕ್​ಗೆ ಭೇಟಿ ನೀಡುವ ಸಂದರ್ಶಕರ ಸೌಕರ್ಯಕ್ಕೆ ಕೆಲ ವಿಶೇಷ ಸೌಕರ್ಯಗಳನ್ನು ಚಂದನ್ ಹಾಗೂ ಅವರ ತಂಡ ಒದಗಿಸಿದೆ. ಸುಸಜ್ಜಿತ, ಶುಭ್ರ ಶೌಚಾಲಯಗಳ ವ್ಯವಸ್ಥೆ ಇದೆ. ಪಾರ್ಕಿಂಗ್ ವ್ಯವಸ್ಥೆ ಇದೆ. ಕೈ ತೊಳೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ವಿಶಾಲವಾದ ಹೊಂಗೆ ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕ್ಯಾಂಟೀನ್ ಸಹ ತೆರೆಯುವ ಯೋಜನೆ ಚಂದನ್ ಅವರಿಗೆ ಇದೆ. ಒಟ್ಟಾರೆಯಾಗಿ ಸಣ್ಣ ಮಕ್ಕಳಿಗೆ ಮಾತ್ರವಲ್ಲದೆ ನಗರದ ಜಂಜಾಟದಿಂದ ಹೊರ ಹೋಗಿ ಪ್ರಕೃತಿಯೊಂದಿಗೆ ಕೆಲ ಸಮಯ ಕಳೆಯಬೇಕು ಎಂದುಕೊಳ್ಳುವ ಎಲ್ಲರಿಗೂ ಇಷ್ಟವಾಗುವ, ಭೇಟಿ ನೀಡಿದ ಬಳಿಕ ಅದರ ನೆನಪು ಬಹು ಸಮಯ ಉಳಿಬಲ್ಲ ಸ್ಥಳ ‘ಜೀವ ಪಾರ್ಕ್’.

Exit mobile version