Site icon Samastha News

Forest: ಒತ್ತುವರಿ ತಡೆಯಲು ಸ್ಯಾಟಲೈಟ್ ಬಳಕೆ: ಒತ್ತುವರಿದಾರರ ಮೇಲೆ ಕ್ರಮ

Forest

Forest

ಅರಣ್ಯ ಒತ್ತುವರಿ ಎಂಬುದು ಕರ್ನಾಟಕದಲ್ಲಿ ತೀರ ಸಾಮಾನ್ಯ ಎಂಬಂತಾಗಿದೆ. ಅರಣ್ಯ ಪ್ರದೇಶ ಹೆಚ್ಚಾಗಿರುವ ಕೆಲ ಜಿಲ್ಲೆಗಳಲ್ಲಿ ಈ ಅರಣ್ಯ ಒತ್ತುವರಿಯಿಂದ ಕರ್ನಾಟಕ ಸರ್ಕಾರಕ್ಕೆ ಸಾವುರಾರು ಕೋಟಿ ನಷ್ಟ ಉಂಟಾಗುತ್ತಿದೆ. ಇದೀಗ ಈ ಅಕ್ರಮ ಒತ್ತುವರಿಯನ್ನು ತಡೆಯಲು ತತ್ರಜ್ಞಾನದ ನೆರವು ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಸ್ಯಾಟಲೈಟ್ ಮೂಲಕ ಅರಣ್ಯ ಗಡಿಗಳ ಮೇಲೆ ನಿಗಾ ಇಟ್ಟು, ಅಕ್ರಮ ಒತ್ತುವರಿ ಮಾಡಿಕೊಂಡವರ ಮೇಲೆ ಕ್ರಮ ಕೈಗೊಳ್ಳಲಿದೆ ರಾಜ್ಯ ಸರ್ಕಾರ.

ಹೊಸ ಅರಣ್ಯ ಒತ್ತುವರಿ ತಡೆಗೆ ರೂಪಿಸಿರುವ ಉಪಗ್ರಹ ಕಣ್ಗಾವಲು ವ್ಯವಸ್ಥೆ Forest Cover Change Alert System ಬಳಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ   ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.ಹೊಸದಾಗಿ ಅರಣ್ಯ ಒತ್ತುವರಿಗೆ ಅವಕಾಶ ನೀಡದೆ, ಶೂನ್ಯ ಸಹಿಷ್ಣುತೆ ತಳೆಯುವಂತೆ ಮತ್ತು ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಭೌಗೋಳಿಕ ಪ್ರದೇಶದ ಶೇ.33ರಷ್ಟು ಹಸಿರು ಹೊದಿಕೆ ಇರಬೇಕು. ಆದರೆ ರಾಜ್ಯದಲ್ಲಿ ಶೇ.22ರಷ್ಟು ಹಸಿರು ಹೊದಿಕೆ ಇದೆ. ಇರುವ ಅರಣ್ಯವನ್ನೂ ಒತ್ತುವರಿ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಈಗಾಗಲೇ ಅಕ್ಷಾಂಶ, ರೇಖಾಂಶ ಆಧಾರಿತ ಜಿಯೋ ರೆಫರೆನ್ಸ್ ಮೂಲಕ ಗುರುತಿಸಲಾಗಿರುವ ಅರಣ್ಯ ಗಡಿಯೊಳಗೆ ಯಾವುದೇ ಒತ್ತುವರಿ ಆಗದಂತೆ ಕರ್ನಾಟಕ ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರ (KSRSAC) ಸಹಯೋಗದಲ್ಲಿ ಸಿದ್ಧಪಡಿಸಲಾಗಿರುವ ಅರಣ್ಯ ಬದಲಾವಣೆ ಮುನ್ನೆಚ್ಚರಿಕಾ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದು ತಿಳಿಸಿದರು.

ಸರ್ಕಾರದ ನಡಾವಳಿಯಂತೆ 2015ರ ಪೂರ್ವದಲ್ಲಿ ಜೀವನೋಪಾಯಕ್ಕಾಗಿ 3 ಎಕರೆಗಿಂತ ಕಡಿಮೆ ಭೂಮಿ ಒತ್ತುವರಿ ಮಾಡಿರುವ ಹಾಗೂ ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಬಾಕಿ ಇರುವ ಮತ್ತು ನ್ಯಾಯಾಲಯದ ತಡೆ ಇರುವ ಪ್ರಕರಣ ಹೊರತುಪಡಿಸಿ, 2015ರ ನಂತರ ಆಗಿರುವ ಎಲ್ಲ ಹೊಸ ಒತ್ತುವರಿಗಳಿಗೆ ಸಂಬಂಧಿಸಿದಂತೆ ಉಪಗ್ರಹ ಚಿತ್ರಗಳನ್ನು ತಾಂತ್ರಿಕ ಸಾಕ್ಷ್ಯವಾಗಿ ಉಲ್ಲೇಖಿಸಿ ತೆರವಿಗೆ ಕ್ರಮ ವಹಿಸುವಂತೆ ಸೂಚಿಸಿದರು.

ಏನಿದು ಅರಣ್ಯ ಬದಲಾವಣೆ ಮುನ್ನೆಚ್ಚರಿಕೆ ವ್ಯವಸ್ಥೆ

ಕಾಡ್ಗಿಚ್ಚು ಕಾಣಿಸಿಕೊಂಡಾಗ ಸಕಾಲದಲ್ಲಿ ಮಾಹಿತಿ ನೀಡುವ ದೂರಸಂವೇದಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಮಾದರಿಯಲ್ಲೇ ಹೊಸ ಅರಣ್ಯ ಒತ್ತುವರಿ ಆದಾಗ ಅಥವಾ ಅರಣ್ಯ ಸ್ವರೂಪ ಬದಲಾದಾಗ ಸಂಬಂಧಿತ ವಲಯ ಅರಣ್ಯಾಧಿಕಾರಿಗೆ ಮಾಹಿತಿ ರವಾನಿಸುವ ವ್ಯವಸ್ಥೆಯನ್ನು  ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ -KSRSAC ಸಹಯೋಗದಲ್ಲಿ ಅಭಿವೃದ್ಧಿ ಪಡಿಸುವಂತೆ  ಕಳೆದ ಜೂನ್ ನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದರು.

ಪ್ರಸ್ತುತ ಕೃತಕ ಬುದ್ಧಿಮತ್ತೆ ಮತ್ತು ಉಪಗ್ರಹ ಚಿತ್ರ ಆಧಾರಿತವಾಗಿ ಸಕಾಲದಲ್ಲಿ ಅರಣ್ಯ ಸ್ವರೂಪ ಬದಲಾವಣೆಯ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ಕಳೆದ ಜುಲೈ 1ರಿಂದ ನವೆಂಬರ್ 3ರವರೆಗೆ 167 ಎಚ್ಚರಿಕೆ ಸಂದೇಶ ಬಂದಿದ್ದು, ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ ಮತ್ತು ಕ್ರಮ ವಹಿಸಲಾಗಿದೆ. ಅರಣ್ಯ ಒತ್ತುವರಿಯಾದರೆ, ಅರಣ್ಯದ ಗಡಿಯೊಳಗೆ ಮರ ಕಡಿತಲೆಯಾದರೆ ಆ ಬಗ್ಗೆ  ಇಲಾಖೆಗೆ ಸಂದೇಶ ಬರುತ್ತದೆ. ಅಧಿಕಾರಿಗಳು ಈ ಸಂದೇಶವನ್ನು ಸ್ಥಳೀಯ ಅಧಿಕಾರಿಗಳಿಗೆ ರವಾನಿಸುತ್ತಾರೆ. ಪ್ರಸ್ತುತ ಹಸಿರು ಹೊದಿಕೆಯಲ್ಲಿ21 ದಿನಗಳಲ್ಲಾದ ಬದಲಾವಣೆಯನ್ನು Forest Cover Change Alert System ಗುರುತಿಸುತ್ತದೆ.

ಆಪ್ಟಿಕಲ್ ಮತ್ತು ಮೈಕ್ರೋವೇವ್ ಬ್ಯಾಂಡ್‌ಗಳ ಕುರಿತಂತೆ ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿರುವ ಉಪಗ್ರಹ ಚಿತ್ರಣಗಳನ್ನು ಬಳಸಿ, ಬದಲಾವಣೆ ಪತ್ತೆಗೆ ಅಲ್ಗಾರಿದಮ್ ಅನ್ನು ರನ್ ಮಾಡಲಾಗುತ್ತದೆ. ಅರಣ್ಯ ಹೋದಿಕೆಯಲ್ಲಿ ಬದಲಾವಣೆಗಳನ್ನು ಗುರುತಿಸಿದಾಗ ಈ ಎಚ್ಚರಿಕೆಗಳನ್ನು ಕ್ಷೇತ್ರಮಟ್ಟಕ್ಕೆ ಕಳುಹಿಸಲಾಗುತ್ತದೆ. ಕ್ಷೇತ್ರಮಟ್ಟದಲ್ಲಿ ಬದಲಾವಣೆಯ ಎಚ್ಚರಿಕೆಗಳನ್ನು ಪರಿಶೀಲಿಸಿ ಪ್ರತಿಕ್ರಿಯೆ ನೀಡಲು ಮತ್ತು ಕ್ರಮ ಕೈಗೊಂಡು, ವರದಿಯನ್ನು ಸಲ್ಲಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ.ಈ ವ್ಯವಸ್ಥೆಯು ಕ್ಷೇತ್ರಮಟ್ಟದ ಅಧಿಕಾರಿಗಳಿಗೆ ಅರಣ್ಯ ವ್ಯಾಪ್ತಿಯ ಬದಲಾವಣೆಯನ್ನು ಸಕಾಲಿಕವಾಗಿ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.

Fashion: ಉಚಿತ ಫ್ಯಾಷನ್ ಡಿಸೈನ್ ಕೋರ್ಸ್, ಆಸಕ್ತರು ಅರ್ಜಿ ಸಲ್ಲಿಸಿ

ಕಳೆದ ಜುಲೈ 1ರಿಂದ 21ರವರೆಗೆ 28, ಜುಲೈ 22ರಿಂದ ಆಗಸ್ಟ್ 11ರವರೆಗೆ 21, ಆಗಸ್ಟ್ 12 ರಿಂದ ಸೆ.1ರವರೆಗೆ 58, ಸೆ.2ರಿಂದ 22ರವರೆಗೆ 33, ಸೆ.23ರಿಂದ ಅಕ್ಟೋಬರ್ 13ರವರೆಗೆ 14 ಮತ್ತು ಅ.14ರಿಂದ ನ.3ರವರೆಗೆ 13 ಒತ್ತುವರಿ ಅಥವಾ ಅರಣ್ಯ ಬದಲಾವಣೆಯ ಸಂದೇಶಗಳು ಸ್ವೀಕೃತವಾಗಿದೆ.  ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಿನ ಅರಣ್ಯ ಬದಲಾವಣೆ ಆಗಿರುವ ಸಂದೇಶ ಬಂದಿದ್ದು, ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.

Exit mobile version