Rave Party
ನೆರೆಯ ತೆಲುಗು ಚಿತ್ರರಂಗ ಆಗಾಗ ಡ್ರಗ್ಸ್ ಪ್ರಕರಣದಿಂದ ಸುದ್ದಿ ಆಗುತ್ತಲೇ ಇರುತ್ತದೆ. ತೆಲುಗು ಚಿತ್ರರಂಗದ ಕೆಲವು ಜನಪ್ರಿಯ ನಟ-ನಟಿಯರು, ನಿರ್ದೇಶಕರುಗಳ ಹೆಸರು ಸಹ ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿತ್ತು. ಇದೀಗ ತೆಲುಗು ಚಿತ್ರರಂಗದ ಕೆಲವು ನಟ-ನಟಿಯರು ಬೆಂಗಳೂರಿಗೆ ಬಂದು ಇಲ್ಲಿ ರೇವ್ ಪಾರ್ಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಪಾರ್ಟಿ ನಡೆಯುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ಮಾಡಿದ್ದು ಕೆಲವು ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿದ್ದಾರೆ. ಡ್ರಗ್ಸ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ.
ಮೇ 19ರ ತಡರಾತ್ರಿ ಬೆಂಗಳೂರಿನ ಎಲೆಕ್‍ಟ್ರಾನಿಕ್ ಸಿಟಿಯಲ್ಲಿರುವ ಜಿಆರ್ ಫಾರ್ಮ್ಸ್ ರೆಸಾರ್ಟ್‍ನಲ್ಲಿ ತೆಲುಗು ಚಿತ್ರರಂಗದ ಕೆಲ ನಟ-ನಟಿಯರು ತಡರಾತ್ರಿವರೆಗೆ ಪಾರ್ಟಿ ಮಾಡಿದ್ದಾರೆ. ಈ ಸುದ್ದಿ ತಿಳಿದ ಪೊಲೀಸರು ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದಾರೆ. ಆಗ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಮಾಡಿರುವ ಅನುಮಾನ ಮೂಡಿದ ಬೆನ್ನಲ್ಲೆ ಪರಿಶೀಲನೆ ನಡೆಸಿದ ಪೊಲೀಸರು ಕೆಲವು ಅಪಾಯಕಾರಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವುದಲ್ಲದೆ ಮೂವರು ಡ್ರಗ್ ಪೆಡ್ಲರ್‍ಗಳು ಹಾಗೂ ಪಾರ್ಟಿಯ ಆಯೋಜಕ ವಾಸು ಎಂಬಾತನನ್ನು ಬಂಧಿಸಿದ್ದಾರೆ.
ಅದ್ಧೂರಿಯಾಗಿಯೇ ಪಾರ್ಟಿಯನ್ನು ಆಯೋಜನೆ ಮಾಡಲಾಗಿದ್ದು ಸೆಲೆಬ್ರಿಟಿ ಡಿಜೆಗಳಾದ ರಾಬ್ಸ್, ಕಾಯ್ವಿ, ಬ್ಲಡಿ ಮಸ್ಕರಾ ಮುಂತಾದವರೂ ಭಾಗಿಯಾಗಿದ್ದರು. ಕೆಲವು ಸೆಲೆಬ್ರೆಟಿಗಳು, ಉದ್ಯಮಿಗಳು ಸಹ ಈ ಪಾರ್ಟಿಯಲ್ಲಿದ್ದರು. ಸುಮಾರು ಆರು ಗಂಟೆಗೂ ಹೆಚ್ಚು ಕಾಲದಿಂದ ಪಾರ್ಟಿಯ ಸ್ಥಳದಲ್ಲಿ ಪರಿಶೀಲನೆಯನ್ನು ಪೊಲೀಸರು ಮಾಡಿದ್ದಾರೆ. ಭೂಮಿ, ರಾಣಾ , ರಾಮು ಮತ್ತು ಮೈಲು ಹೆಸರಿನ ಪೊಲೀಸ್ ನಾಯಿಗಳನ್ನು ಬಳಸಿ ಸ್ಥಳದ ಪರಿಶೀಲನೆ ಮಾಡಲಾಗಿದ್ದು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ದಾಳಿಯಾದಾಗ ಮಾದಕ ವಸ್ತುಗಳನ್ನು ಟಾಯ್ಲೆಟ್‍ನಲ್ಲಿ ಚೆಲ್ಲಿ ನೀರು ಹಾಕಲಾಗಿದೆ.
ಪಾರ್ಟಿಯಲ್ಲಿ 30 ಮಹಿಳೆಯರು 70 ಪುರುಷರು ಸೇರಿ ಒಟ್ಟು 101 ಮಂದಿ ಭಾಗಿಯಾಗಿದ್ದರು. ಐವರನ್ನು ಬಂಧಿಸಿರುವ ಪೊಲೀಸರು ಉಳಿದವರಿಗೆ ಫಾರಂ ಹೌಸ್‍ನಲ್ಲಿಯೇ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಎಲ್ಲರ ರಕ್ತದ ಮಾದರಿಗಳನ್ನು ಪಡೆದಿರುವ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕಳಿಸಿದ್ದಾರೆ. ಜೊತೆಗೆ ಎಲ್ಲರ ವಿಳಾಸಗಳನ್ನು ಪಡೆದುಕೊಂಡಿದ್ದು, ವೈದ್ಯಕೀಯ ಪರೀಕ್ಷೆಯ ವರದಿ ಬರುವಿಕೆಗಾಗಿ ಕಾಯಲಾಗುತ್ತಿದೆ. ರಕ್ತದ ಮಾದರಿ ತೆಗೆದುಕೊಂಡಿರುವುದರಲ್ಲಿ ಕೆಲವು ಸೆಲೆಬ್ರಿಟಿಗಳು ಸಹ ಇದ್ದಾರೆ ಎನ್ನಲಾಗುತ್ತಿದೆ. ತೆಲುಗು ಮಾತ್ರವಲ್ಲದೆ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿರುವ ಹೇಮಾ ಎಂಬುವರು ಸಹ ಪಾರ್ಟಿಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು, ಆದರೆ ತಾವು ಹೈದರಾಬಾದ್ ನ ತಮ್ಮ ಫಾರಂ ಹೌಸ್‍ನಲ್ಲಿ ಇರುವುದಾಗಿ ನಟಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಹಲವು ಪೊಲೀಸರು ದಾಳಿಯಲ್ಲಿ ಭಾಗಿಯಾಗಿದ್ದಾರೆ.