Leopard
ಬೆಂಗಳೂರು ನಗರದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಅದೂ ನಗರದ ಅತ್ಯಂತ ಬ್ಯುಸಿ ಪ್ರದೇಶದಲ್ಲಿ, ಹೌದು, ನಗರದಲ್ಲೇ ಅತಿ ಹೆಚ್ಚು ಟ್ರಾಫಿಕ್ ಇರುವ ಪ್ರದೇಶವಾದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಗರವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಎಲೆಕ್ಟ್ರಾನಿಕ್ ಸಿಟಿ ಫೇಸ್ 1 ಟೋಲ್ ಬಳಿ ಮಂಗಳವಾರ ಬೆಳ್ಳಂಬೆಳಿಗ್ಗೆ 3 ಗಂಟೆ ವೇಳೆಗೆ ಚಿರತೆ ಕಾಣಿಸಿಕೊಂಡಿದೆ. ಒಂಟಿ ಚಿರತೆ ಟೋಲ್ ಬೂತ್’ನ ರಸ್ತೆಗಳಲ್ಲಿ ರಾಜ ಗಾಂಭಿರ್ಯದಿಂದ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೆಲ ಸಮಯ ಟೋಲ್ ಬೂತ್’ನ ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡಿದ ಚಿರತೆ ಬಳಿಕ ಸಮೀಪದಲ್ಲೇ ಇರುವ ಎನ್’ಟಿಟಿಎಫ್’ಸಿ ಗ್ರೌಂಡ್ ಕಡೆಗೆ ಹೋಗಿದೆ. ಅದಾದ ಬಳಿಕ ಚಿರತೆ ಎಲ್ಲಿ ಹೋಯ್ತು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಚಿರತೆ ಓಡಾಟ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಅಲರ್ಟ್ ಘೋಷಣೆ ಮಾಡಿದ್ದು ಚಿರತೆ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಎನ್’ಟಿಟಿಎಫ್ ನ ಕಾಂಪೌಂಡ್ ಬಳಿಯಲ್ಲಿ ಕಾಣಿಸಿಕೊಂಡ ಚಿರತೆ ಆ ನಂತರ ಎಲ್ಲಿ ಹೋಯ್ತು ಎಂಬ ಬಗ್ಗೆ ಈವರೆಗೆ ಮಾಹಿತಿ ಲಭ್ಯವಾಗಿಲ್ಲ. ಎನ್’ಟಿಟಿಎಫ್ ನ ಪ್ರಾಂಶುಪಾಲರು ಮಾಧ್ಯಮಗಳೊಟ್ಟಿಗೆ ಮಾತನಾಡಿ, ನಮ್ಮ ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ಕಾಂಪೌಂಡ್’ನ ಅಂಚಿನಲ್ಲಿ ಚಿರತೆ ನಡೆದು ಹೋಗಿದೆ, ಆದರೆ ನಮ್ಮ ಕಾಂಪೌಂಡ್ ದಾಟಿ ಒಳಗೆ ಬಂದಿರುವುದು ದಾಖಳಾಗಿಲ್ಲ, ನಾವುಗಳು ಎಲ್ಲ ರೂಮ್, ಗ್ರೌಂಡ್ ಎಲ್ಲವನ್ನೂ ಹುಡುಕಾಡಿದ್ದೇವೆ ಆದರೆ ಚಿರತೆ ಬಂದಿರುವ ಬಗ್ಗೆ ಯಾವುದು ಕುರುಹು ಸಿಕ್ಕಿಲ್ಲ ಎಂದಿದ್ದಾರೆ.
ಚಿರತೆ ಈಗ ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಸಿಗದೇ ಇರುವುದು ಸ್ಥಳೀಯರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ. ಯಾವುದಾದರೂ ಮನೆಗಳ ಬಳಿ ಅಡಗಿ ಕೂತಿದೆಯೇ ಎಂಬ ಆತಂಕ ಶುರುವಾಗಿದೆ. ಅರಣ್ಯ ಇಲಾಖೆಯವರು ಚಿರತೆಗಾಗಿ ಹುಡುಕಾಡುತ್ತಿದ್ದಾರೆ. ಅತ್ಯಂತ ಜನನಿಭಿಡ ಪ್ರದೇಶವಾಗಿರುವ ಕಾರಣ ಚಿರತೆ ಆತಂಕದಲ್ಲಿ ಯಾರ ಮೇಲಾದರೂ ದಾಳಿ ಮಾಡುವ ಸಂಭವ ಹೆಚ್ಚಾಗಿದೆ ಎನ್ನಲಾಗುತ್ತಿದೆ.
Flipkart: ಫ್ಲಿಪ್ಕಾರ್ಟ್ ಬಿಗ್ಬಿಲಿಯನ್ ಡೇ, ಐಫೋನ್ ಮೇಲೆ ಭಾರಿ ಡಿಸ್ಕೌಂಟ್
ಅಂದಹಾಗೆ ಬೆಂಗಳೂರಿಗೆ ಚಿರತೆ ಬಂದಿರುವುದು ಇದು ಮೊದಲೇನಲ್ಲ. ಕೆಲ ತಿಂಗಳ ಹಿಂದೆ ಜಿಗಣಿ ಕೈಗಾರಿಕಾ ಪ್ರದೇಶದ ಬಳಿ ಚಿರತೆ ಕಾಣಿಸಿಕೊಂಡಿತ್ತು, ಅದಕ್ಕೂ ಮುನ್ನ ದೇವನಹಳ್ಳಿ-ನಲ್ಲೂರು ಬಳಿಯೂ ಚಿರತೆ ಕಾಣಿಸಿಕೊಂಡಿತ್ತು. ಕೆಲ ವರ್ಷಗಳ ಹಿಂದೆ ಶಾಲೆಯೊಂದಕ್ಕೆ ನುಗ್ಗಿದ್ದ ಚಿರತೆ ದೊಡ್ಡ ಆತಂಕವನ್ನೆ ನಿರ್ಮಾಣ ಮಾಡಿದ್ದು ಬೆಂಗಳೂರಿಗರು ಮರೆತಿಲ್ಲ. ಈಗ ಮತ್ತೊಮ್ಮೆ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.