Iphone 16
ಐಫೋನ್ ಗಾಗಿ ಕಿಡ್ನಿ ಮಾರಿಕೊಂಡವರ, ತಾಯಿಯ ಚಿನ್ನ ಕದ್ದು ಮಾರಿದವರ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಐಫೋನ್ ಆರ್ಡರ್ ಮಾಡಿ, ಡೆಲಿವರಿ ಮಾಡಲು ಬಂದಿದ್ದ ಡೆಲಿವರಿ ಬಾಯ್ ಅನ್ನೇ ಕೊಂದು ಬಿಟ್ಟಿದ್ದಾನೆ. ಐಫೋನ್ ಆಸೆಗೆ ಕೊಲೆ ಮಾಡಿದ ಆ ಪಾಪಿ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರುವುದು ಲಖನೌನಲ್ಲಿ.
ಲಖನೌನಲ್ಲಿ ಗಜ್ಜನ್ ಎಂಬಾತನಿಗೆ ಐಫೋನ್ ಖರೀದಿಸುವ ಆಸೆ ಆದರೆ ಹಣ ಇರಲಿಲ್ಲ. ಆದರೂ ಫ್ಲಿಪ್’ಕಾರ್ಟ್ ನಲ್ಲಿ ಹೊಸ ಐಫೋನ್ 16 ಬುಕ್ ಮಾಡಿದ್ದಾನೆ. ಪೇಮೆಂಟ್ ಆಪ್ಷನ್ ನಲ್ಲಿ ಕ್ಯಾಷ್ ಆನ್ ಡೆಲಿವರಿ ಮಾಡುವುದಾಗಿ ಹೇಳಿದ್ದಾನೆ, ಆರ್ಡರ್ ಅನ್ನು ಡೆಲಿವರಿ ಮಾಡಲು ಫ್ಲಿಪ್’ಕಾರ್ಟ್ ನ ಡೆಲಿವರಿ ಏಜೆಂಟ್ ಶಶಾಂಕ್ ಸಿಂಗ್ ಎಂಬಾತ ಹೋಗಿದ್ದಾನೆ. ಗಜ್ಜನ್’ಗೆ ಐಫೋನ್ ಡೆಲಿವರಿ ಮಾಡಿ ಹಣ ಕೇಳಿದಾಗ ಗಜ್ಜನ್ ಹಣ ಕೊಡಲು ನಿರಾಕರಿಸಿದ್ದಾನೆ. ಆಗ ಶಶಾಂಕ್, ಹಾಗಿದ್ದರೆ ಮೊಬೈಲ್ ವಾಪಸ್ ಕೊಡಿ ಎಂದಿದ್ದಾನೆ. ಆಗ ಗಜ್ಜನ್ ಮತ್ತು ಆತನ ಗೆಳೆಯ ಶಶಾಂಕ್ ಜೊತೆ ಜಗಳ ಮಾಡಿ ಆತನ ಮೇಲೆ ಹಲ್ಲೆ ಮಾಡಿ ಉಸಿರುಗಟ್ಟಿ ಸಾಯಿಸಿದ್ದಾರೆ. ಬಳಿಕ ಹೆಣವನ್ನು ಚೀಲವೊಂದರಲ್ಲಿ ಹಾಕಿ, ಚೀಲವನ್ನು ಕಾಲುವೆ ಒಂದಕ್ಕೆ ಎಸೆದಿದ್ದಾರೆ.
ಡೆಲಿವರಿ ಕೆಲಸಕ್ಕೆ ಹೋದ ಮಗ ಎರಡು ದಿನವಾದರೂ ಬಾರದೇ ಇದ್ದಾಗ ಪೋಷಕರು ಲಖನೌ ಬಳಿಯ ಚಿನ್ನಾಹಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಬಳಿಕ ಪೊಲೀಸರು ಶಶಾಂಕ್ ನ ಕರೆ ಮಾಹಿತಿ, ಲೊಕೇಶನ್ ಪತ್ತೆ ಮಾಡಿ, ಕೊನೆಯದಾಗಿ ಆತ ಸಂಪರ್ಕಿಸಿದ್ದು ಗುಜ್ಜನ್ ಅನ್ನು ಎಂದು ತಿಳಿದುಕೊಂಡು ಆತನ ಹುಡುಕಾಟ ನಡೆಸಿದ್ದಾರೆ. ಆದರೆ ಆತನ ಗೆಳೆಯ ಆಕಾಶ್ ಪೊಲೀಸರ ಕೈಗೆ ಸಿಕ್ಕಿದ್ದು, ಆತ ನಡೆದ ಘಟನೆಯನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಫ್ಲಿಪ್’ಕಾರ್ಟ್ ಸಹ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ನಮ್ಮ ಡೆಲಿವರಿ ಏಜೆಂಟ್ ನಿಧನ ಹೊಂದಿರುವ ಘಟನೆ ನಮಗೆ ತೀವ್ರ ಆಘಾತ ತಂದಿದೆ. ನಾವು ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇವೆ. ನಾವು ಈಗಾಗಲೇ ಮೃತನ ಕುಟುಂಬದ ಜೊತೆಗೆ ಸಂಪರ್ಕದಲ್ಲಿದ್ದೇವೆ ಹಾಗೂ ನಮ್ಮ ಕೈಲಾದ ಸಹಾಯವನ್ನು ನಾವು ಮೃತನ ಕುಟುಂಬಕ್ಕೆ ಮಾಡಲಿದ್ದೇವೆ ಎಂದಿದೆ.
Pakistan: ಬೆಂಗಳೂರಿಗೆ ಬಂದುನಗುರುತು ಬದಲಾಯಿಸಿಕೊಂಡಿದ್ದ ಪಾಕಿಸ್ತಾನಿ ಕುಟುಂಬದ ಬಂಧನ
ಉತ್ತರ ಪ್ರದೇಶ, ಬಿಹಾರ, ಹರಿಯಾಣ ರಾಜ್ಯಗಳ ಕೆಲವೆಡೆ ಇಂಥಹಾ ಘಟನೆಗಳು ಈ ಮುಂಚೆಯೂ ನಡೆದಿವೆ. ಕ್ಯಾಶ್ ಆನ್ ಡೆಲಿವರಿ ಆಪ್ಷನ್ ತೆಗೆದುಕೊಂಡು ವಸ್ತುಗಳನ್ನು ತರಿಸಿಕೊಳ್ಳುವುದು ಡೆಲಿವರಿ ಏಜೆಂಟ್ ಗಳು ವಸ್ತುಗಳನ್ನು ಕೊಡಲು ಹೋದಾಗ ಅವರ ಮೇಲೆ ಹಲ್ಲೆ ಮಾಡಿ ವಸ್ತುಗಳನ್ನು ಕಿತ್ತುಕೊಳ್ಳುವ ಕಾರ್ಯ ಮಾಡುತ್ತಿದ್ದರು. ಇದೇ ಕಾರಣಕ್ಕೆ ಫ್ಲಿಪ್’ಕಾರ್ಟ್, ಅಮೆಜಾನ್, ಜೊಮ್ಯಾಟೊ, ಸ್ವಿಗ್ಗಿ ಇನ್ನೂ ಕೆಲವು ಸಂಸ್ಥೆಗಳು ಕೆಲವು ಪ್ರದೇಶದಲ್ಲಿ ಕ್ಯಾಷ್ ಆನ್ ಡೆಲಿವರಿ ಆಪ್ಷನ್ ಅನ್ನೇ ತೆಗೆದಿವೆ.