Dosa
ಒಳ್ಳೆ ತುಪ್ಪ ಸುರಿದು ಹದವಾಗಿ ಸುಟ್ಟ ದೋಸೆಯೊಂದು ದಾರಿ ತಪ್ಪಿದೆ. ಇದರಿಂದ 15 ಸಾವಿರ ರೂಪಾಯಿ ಹಣ ನಷ್ಟವಾಗಿದೆ. ದೋಸೆ ಹಿಟ್ಟನ್ನು ದಪ್ಪಕೆ ಹೆಂಚಿಗೆ ಹೊಯ್ದು ಅದರ ಮೇಲೆ ತುಸು ತುಪ್ಪ ಸುರಿದು ಅದರ ಮೇಲೆ ಸಣ್ಣಗೆ ಕತ್ತರಿಸಿ ಈರುಳ್ಳಿಯನ್ನು ಹರಡಲಾಗುತ್ತದೆ. ಅದಾದ ಮೇಲೆ ದೋಸೆ ತಿರುವಿ ಹಾಕಿ ಮತ್ತೆ ದೋಸೆಯ ಮೇಲೆ ತುಪ್ಪ ಸುರಿಯಲಾಗುತ್ತದೆ. ಇದನ್ನು ನಾವು ಈರುಳ್ಳಿ ದೋಸೆ ಎನ್ನುತ್ತೇವೆ. ಆದರೆ ತಮಿಳಿನವರು ದೋಸೆ ಉತ್ತಪ್ಪಮ್ ಎನ್ನುತ್ತಾರೆ. ಇಂಥಹಾ ಒಂದು ಉತ್ತಪ್ಪನ್ ಜೊತೆಗೆ ಒಂದು ಸಾದಾ ದೋಸೆ ಸಹ ಇತ್ತು. ಆದರೆ ಉತ್ತಪ್ಪಮ್ ಜೊತೆಗಿದ್ದ ದೋಸೆ ಕಾಣೆ ಆಗಿತ್ತು. ಅದರ ವರದಿ ಇಲ್ಲಿದೆ.
2023, ಆಗಸ್ಟ್ ತಿಂಗಳ 21 ರಂದು ಚೆನ್ನೈನ ಆನಂದ್ ಶೇಖರ್ ಎಂಬುವರು, ದೋಸೆ ಮತ್ತು ಅದರ ಜೊತೆಗೆ ಉತ್ತಪ್ಪಮ್ ಅನ್ನು ಸಮೀಪವೇ ಇದ್ದ ಅಕ್ಷಯ್ ಭವನ್ ಆಸ್ಪತ್ರೆಯಿಂದ ಜೊಮ್ಯಾಟೊ ಮೂಲಕ ಆರ್ಡರ್ ಮಾಡಿದ್ದರು. ದೋಸೆ ಜೊತೆಗೆ ಉತ್ತಪ್ಪಮ್, ಟ್ಯಾಕ್ಸು, ಡೆಲಿವರಿ ಚಾರ್ಜು, ಸೆಸ್ಸು ಎಲ್ಲವೂ ಸೇರಿ 498 ರೂಪಾಯಿ ಬಿಲ್ ಆಗಿತ್ತು. ಅಂತೆಯೇ ಆನಂದ್ ಅವರು ಆರ್ಡರ್ ಮಾಡಿದರು, ಆದರೆ ಡೆಲಿವರಿ ಬಂದಾಗ ಅದರಲ್ಲಿ ಉತ್ತಪ್ಪಮ್ ಮಾತ್ರವೇ ಇತ್ತು, ದೋಸೆ ನಾಪತ್ತೆ ಆಗಿತ್ತು!
ಕೂಡಲೆ ಆನಂದ್ ಶೇಖರ್ ಜೊಮ್ಯಾಟೊ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ದೂರು ನೀಡಿದ್ದಾರೆ. ಕಸ್ಟಮರ್ ಕೇರ್ ನಿಂದ ಸೂಕ್ತ ನೆರವು ದೊರೆತಿಲ್ಲ. ಕೂಡಲೆ ಅವರು ಗ್ರಾಹಕರ ವೇದಿಕೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ವಾದ ಮಂಡಿಸಿದ ಜೊಮ್ಯಾಟೊ, ತಾವು ಡೆಲಿವರಿ ಸಂಸ್ಥೆಯಾಗಿದ್ದು, ಊಟದ ಪ್ಯಾಕಿಂಗ್, ಗುಣಮಟ್ಟದ ಜವಾಬ್ದಾರಿಯನ್ನು ಹೋಟೆಲ್ ನವರೇ ಹೊರಬೇಕು ಎಂದಿದ್ದರು.
Zepto: ಮುಂಬೈ ಬಿಟ್ಟು ಬೆಂಗಳೂರಿಗೆ ಬರುತ್ತಿದೆ 30 ಸಾವಿರ ಕೋಟಿ ಮೌಲ್ಯದ ಕಂಪೆನಿ
ಆದರೆ ಇದನ್ನು ಒಪ್ಪದ ಗ್ರಾಹಕರ ವೇದಿಕೆ, ಜೊಮ್ಯಾಟೊ ಸಂಸ್ಥೆ ಫೂಡ್ ಡೆಲಿವರಿಗೆ 79 ರೂಪಾಯಿ ಚಾರ್ಜ್ ಮಾಡುತ್ತಿದೆ. ಅಲ್ಲದೆ ಜೊಮ್ಯಾಟೊ ವೇದಿಕೆಯಲ್ಲಿಯೇ ಗ್ರಾಹಕ ಊಟದ ಆರ್ಡರ್ ಮಾಡುತ್ತಾನೆ. ಜೊಮ್ಯಾಟೊ ಸಹ ತನ್ನ ಜಾಹೀರಾತುಗಳಲ್ಲಿ ಊಟದ ಗುಣಮಟ್ಟ, ರುಚಿ ಇನ್ನಿತರ ವಿಷಯಗಳ ಬಗ್ಗೆ ಮಾತನಾಡುತ್ತದೆಯೇ ಹೊರತು, ಕೇವಲ ಡೆಲಿವರಿ ಬಗ್ಗೆ ಮಾತ್ರವಲ್ಲ. ಹಾಗಾಗಿ ಅದೂ ಸಹ ಊಟದ ಗುಣಮಟ್ಟದ ಜವಾಬ್ದಾರಿ ಹೊರಬೇಕು ಎಂದು ನಿಶ್ಚಯಿಸಿ, ದೋಸೆ ಸಿಗದೆ ಕಂಗೆಟ್ಟಿದ್ದ ಗ್ರಾಹಕ ಆನಂದ್ ಗೆ, ಜೊಮ್ಯಾಟೊ 10 ಸಾವಿರ ರೂಪಾಯಿ ದಂಡ ಹಾಗೂ ಐದು ಸಾವಿರ ರೂಪಾಯಿಗಳನ್ನು ಪ್ರಕರಣ ನಡೆಸಲು ಆದ ಖರ್ಚಿನ ರೂಪದಲ್ಲಿ ನೀಡಬೇಕು ಎಂದು ಆದೇಶಿಸಿದೆ.