Bandh
ಚುನಾವಣೆ, ಗಾಂಧಿ ಜಯಂತಿ ಇನ್ನಿತರೆ ದಿನಗಳಂದು ಮದ್ಯ ಮಾರಾಟ ಬಂದ್ ಮಾಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ನವೆಂಬರ್ 20 ರಂದು ಮದ್ಯ ಮಾರಾಟ ಇರಯವುದಿಲ್ಲ. ಇದಕ್ಕೆ ಕಾರಣ ಚುನಾವಣೆ, ಹಬ್ಬ ಅಥವಾ ಸರ್ಕಾರಗಳಲ್ಲ, ಬದಲಿಗೆ ಸ್ವತಃ ಮದ್ಯದ ಅಂಗಡಿಗಳೆ!
ನವೆಂಬರ್ 20 ರಂದು ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರ ಸಂಘ ಸಾಮೂಹಿಕ ಬಂದ್ ಘೋಷಣೆ ಮಾಡಿದೆ ಇದರಿಂದಾಗಿ ಆ ದಿನ ಪೂರಾ ಮದ್ಯ ಮಾರಾಟ ಮಾಡಲಾಗುವುದಿಲ್ಲ. ರಾಜ್ಯದ ಬಹುತೇಕ ಮದ್ಯದ ಅಂಗಡಿಗಳು ಆ ದಿನ ಬಾಗಿಲು ಹಾಕಲಿವೆ. ಆ ಮೂಲಕ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಪ್ರದರ್ಶನ ಮಾಡಲಿವೆ.
ಅಬಕಾರಿ ಇಲಾಖೆಯಲ್ಲಿ ಮಿತಿಮೀರಿರುವ ಲಂಚಕೋರತನದಿಂದ ಬೇಸತ್ತು ರಾಜ್ಯ ಮದ್ಯ ಮಾರಾಟಗಾರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದ ರಾಜು ಈ ಬಗ್ಗೆ ಮಾತನಾಡಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ವಿಪರೀತ ಕಿರುಕುಳ ನೀಡುತ್ತಿದ್ದಾರೆ. ಲಂಚ ನೀಡದೆ ಸಣ್ಣ ಕೆಲಸವು ಆಗುವುದಿಲ್ಲ. ಸಚಿವರಿಗೆ ನಾವು ಲಂಚ ಕೊಡಬೇಕೆಂದು ಸ್ವತಃ ಅಧಿಕಾರಿಗಳೇ ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅಬಕಾರಿ ಇಲಾಖೆ ಯಾವುದೇ ಅನುದಾನ ಇರದ ಇಲಾಖೆ, ಹಾಗಿದ್ದಮೇಲೆ ಇದಕ್ಕೆ ಪ್ರತ್ಯೇಕ ಸಚಿವಾಲಯ ಏಕೆ ಬೇಕು, ಈ ಇಲಾಖೆಯನ್ನು ಹಣಕಾಸು ಇಲಾಖೆಯ ಕೆಳಗೆ ಸೇರಿಸಿ ಎಂದು ಮದ್ಯ ಮಾರಾಟಗಾರರ ಸಂಘ ಒತ್ತಾಯಿಸಿದೆ. ಈ ಹಿಂದೆಯೂ ಸಹ ವಿಪರೀತ ಲಂಚಕೋರತನ ಇತ್ತು, ಸತೀಶ ಜಾರಕಿಹೋಳಿ ಅವರು ಸಚಿವರಾಗಿದ್ದಾಗ ಇದೆಲ್ಲ ಸಮಸ್ಯೆ ಇರಲಿಲ್ಲ. ಆದರೆ ಈಗ ತಡೆದುಕೊಳ್ಳಲು ಆಗದಷ್ಟು ಹೆಚ್ಚಾಗಿದೆ ಎಂದಿದ್ದಾರೆ ಗೋವಿಂದರಾಜು.
Bengaluru: ಆತಂಕಕಾರಿ ಬೆಳವಣಿಗೆ, ಬೆಂಗಳೂರಿನಲ್ಲಿ ಡ್ರಗ್ಸ್ ಚಾಕಲೇಟ್ ಮಾರಾಟ
ಅಬಕಾರಿ ಇಲಾಖೆಯ ಅಧಿಕಾರಿಗಳ ಕಿರುಕುಳ ತಪ್ಪಿಸಲು ಹಾಗೂ ಇಲಾಖೆಯಲ್ಲಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಹಾಗೂ ಇನ್ನೂ ಕೆಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನವೆಂಬರ್ 20 ರಂದು ರಾಜ್ಯದ ಎಲ್ಲ ಬಾರುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.