Painting
ಕೆಲವರಿಗೆ ಅದೃಷ್ಟ ಯಾವ ಯಾವ ರೂಪದಲ್ಲಿ ಹುಡುಕಿ ಬರುತ್ತದೆ ಹೇಳಲು ಸಾಧ್ಯವೇ ಇಲ್ಲ. ಅದೃಷ್ಟವೆಂದರೆ ಹಾಗೆಯೇ ಅದು ಸೂಚನೆ ಕೊಟ್ಟು ಬರುವುದಿಲ್ಲ, ಬಂದರೆ ವ್ಯಕ್ತಿಯ ಜೀವನವನ್ನೇ ಬದಲಾಯಿಸಿಬಿಡುತ್ತದೆ. ಇಲ್ಲೊಬ್ಬ ವ್ಯಕ್ತಿಗೆ ಅದೃಷ್ಟ ಕಸದಲ್ಲಿ ಸಿಕ್ಕಿದೆ. ಕಸದಲ್ಲಿ ಸಿಕ್ಕ ವಸ್ತುವೊಂದು ಆ ವ್ಯಕ್ತಿಯ ಅದೃಷ್ಟವನ್ನೇ ಬದಲಾಯಿಸಿ ಬಿಟ್ಟಿದೆ. ಸಾಮಾನ್ಯ ವ್ಯಕ್ತಿಯನ್ನು ಒಮ್ಮಿಂದೊಮ್ಮೆಲೆ ಕೋಟ್ಯಧೀಶನನ್ನಾಗಿ ಮಾಡಿದೆ.
ಕಸದಲ್ಲಿ ಸಿಕ್ಕ ವಸ್ತುವಿನಿಂದ ಕೋಟ್ಯಧೀಶನಾಗಿರುವ ಈ ಘಟನೆ ನಡೆದಿರುವುದು ದೂರದ ಇಟಲಿಯಲ್ಲಿ. ಇಟಲಿಯ ಪೋಂಪಿ ಹೆಸರಿನ ಊರಿನವನಾದ ಲುಗಿ ಲೊ ರೊಸ್ಸೊ ಎಂಬಾತ ಕಪ್ರಿ ನಗರದಲ್ಲಿ ಕಸ ಸಂಗ್ರಹಿಸಿ ಅದರಲ್ಲಿ ಮಾರಬಹುದಾದ ವಸ್ತುಗಳನ್ನು ಹುಡುಕಿ ಮಾರಾಟ ಮಾಡುತ್ತಿದ್ದ. ಭಾರತೀಯರ ಭಾಷೆಯಲ್ಲಿ ಕಸ ಆಯುವವ. ಒಮ್ಮೆ 1962 ರಲ್ಲಿ ಕಪ್ರಿ ನಗರದಲ್ಲಿ ರೊಸ್ಸೊ ಕಸ ಆಯಬೇಕಾದರೆ ಒಂದು ವಿಚಿತ್ರವಾದ ಪೇಂಟಿಂಗ್ ಆತನಿಗೆ ಸಿಕ್ಕಿತ್ತು. ಅದನ್ನು ಅಷ್ಟೋ ಇಷ್ಟೊ ಹಣಕ್ಕೆ ಮಾರಲು ಪ್ರಯತ್ನಿಸಿದ ಆದರೆ ಸಾಧ್ಯವಾಗಲಿಲ್ಲ, ಹಾಗಾಗಿ ಅದನ್ನು ತನ್ನ ಊರಾದ ಪೋಂಪಿಗೆ ತೆಗೆದುಕೊಂಡು ಹೋಗಿ ತನ್ನ ಪುಟ್ಟ ಮನೆಯಲ್ಲಿ ಇಟ್ಟುಕೊಂಡ.
ರೊಸ್ಸೊಗೆ ಕಸದಲ್ಲಿ ಸಿಕ್ಕ ಚಿತ್ರ ವಿಚಿತ್ರವಾಗಿದ್ದು ಗಂಡು ಹೆಣ್ಣಿನ ಚಿತ್ರ ಅದಾದರೂ ಇಬ್ಬರಿಗೂ ಸೇರಿ ಮೂರೇ ಕಣ್ಣು ಹೊಂದಿದ್ದ ಭಿನ್ನ ಮಾದರಿಯ ಚಿತ್ರವದು. ಆತ ಆ ವರೆಗೆ ಆ ರೀತಿಯ ಚಿತ್ರ ನೋಡಿರಿಲಿಲ್ಲವಾದ್ದರಿಂದ ಆ ಚಿತ್ರದ ಬಗ್ಗೆ ಕುತೂಹಲವೂ ಇತ್ತು. ಸಮಯ ಕಳೆದಂತೆ ಆತನಿಗೆ ಮದುವೆಯಾಯ್ತು. ಬಂದ ಹೆಂಡತಿ ಸಾಕಷ್ಟು ಬಾರಿ ಆ ಪೇಂಟಿಂಗ್ ಅನ್ನು ಹೊರಗೆ ಬಿಸಾಡುವಂತೆ ಹೇಳಿದರೂ ಸಹ ರೊಸ್ಸೊ ಕೇಳಿರಲಿಲ್ಲ. ಅದನ್ನು ತನ್ನ ಮನೆಯ ಹಾಲ್’ನ ಗೋಡೆಯ ಮೇಲೆ ನೇತು ಹಾಕಿದ್ದ.
ಅವನಿಗೆ ಮಗನೊಬ್ಬ ಜನಿಸಿದ ಆತನಿಗೂ ಆ ಪೇಂಟಿಗ್ ಬಗ್ಗೆ ಕುತೂಹಲ ಇತ್ತು. ಹೀಗೆ ವರ್ಷಗಳು ಕಳೆದಂತೆ ರೊಸ್ಸೊ ನಿಧನ ಹೊಂದಿದ. ರೊಸ್ಸೊನ ಮಗ ತನ್ನ ತಂದೆಗೆ ಸಿಕ್ಕ ಪೇಟಿಂಗ್ ಅನ್ನು ಕಾಪಾಡಿಕೊಂಡ. ಆದರೆ ಆ ಚಿತ್ರ ಯಾರದ್ದು, ಅದರ ಪ್ರಾಮುಖ್ಯತೆ ಏನೆಂಬುದು ಮಗನಿಗೂ ಗೊತ್ತಿರಲಿಲ್ಲ. ಆದರೆ ರೊಸ್ಸೊನ ಮಗ ಆಂಡ್ರೇ, ಇತಿಹಾಸದ ವಿಧ್ಯಾರ್ಥಿ ಆಗಿದ್ದ, ಇತಿಹಾಸದ ಪಾಠ ಕಲಿಯುವಾಗ ಪಿಕಾಸೊ ಬಗ್ಗೆ ಆತನಿಗೆ ಗೊತ್ತಾಯ್ತು. ಆತನಿಗೆ ಸಣ್ಣ ಅನುಮಾನ ಮೂಡಿತು, ಪಿಕಾಸೊನ ಕಲಾ ಪ್ರಕಾರದ ಬಗ್ಗೆ ಅಧ್ಯಯನ ಮಾಡುತ್ತಾ ಆಂಡ್ರೆಯ ಅನುಮಾನ ಇನ್ನಷ್ಟು ಬಲವಾಯ್ತು. ಪಿಕಾಸೊನ ಇತರೆ ಚಿತ್ರಗಳನ್ನು ಗಹನವಾಗಿ ಅಧ್ಯಯನ ಮಾಡಿದಾಗ ತಿಳಿಯಿತಿ, ಪಿಕಾಸೊನ ಬಹುತೇಕ ಚಿತ್ರಗಳ ಮೇಲೆ ಇರುವ ಸಹಿ ಹಾಗೂ ತನ್ನ ಮನೆಯ ಪೇಂಟಿಗ್ ಮೇಲೆ ಇರುವ ಸಹಿ ಎರಡೂ ಒಂದೇ ಎಂದು!
Sadhguru: ಪತ್ನಿ ಕೊಲೆ ಕೇಸಿನಿಂದ ಸದ್ಗುರು ಪಾರಾಗಿದ್ದು ಹೇಗೆ?
ಕೂಡಲೇ ಆಂಡ್ರೆ, ಆರ್ಟ್ ಡಿಟೆಕ್ಟಿವ್ ಮಾರಿಯೋ ಸೆರಾಸಿನಿಗೆ ವಿಷಯ ಮುಟ್ಟಿಸಿ ಸಹಾಯ ಕೇಳಿದ. ಪೇಂಟಿಗ್ ಅನ್ನು ಕೂಲಂಕುಶವಾಗಿ ಪರಿಶೀಲಿಸಿದ ಕಲಾ ತಜ್ಞ ಮಾರಿಯೋ, ಇದು ಪಿಕಾಸೊ ರಚಿಸಿದ ಒರಿಜಿನಲ್ ಪೇಂಟಿಂಗ್ ಎಂದುಬಿಟ್ಟ. ಆ ಬಳಿಕ ಮಾರಿಯೋನೆ ಮುಂದೆ ನಿಂತು, ಇಟಲಿಯ ಆರ್ಟ್ ಸೈಂಟಿಸ್ಟ್ ಕಮಿಟಿ, ಗ್ರಾಫಾಲಜಿಸ್ಟ್, ಇತಿಹಾಸ ತಜ್ಞರನ್ನು ಕರೆಸಿ ಪೇಂಟಿಂಗ್ ಅನ್ನು ಅಧ್ಯಯನ ಮಾಡಲು ಕೊಟ್ಟರು. ತಮ್ಮ ತಮ್ಮ ರೀತಿಯಲ್ಲಿ ಕೂಲಂಕುಶವಾಗಿ ಅಧ್ಯಯನ ಮಾಡಿದ ಪರಿಣಿತರೆಲ್ಲರೂ ಹೇಳಿದ್ದು ಇದು ಸ್ವತಃ ಪಿಕಾಸೊ ರಚಿಸಿದ ಪೇಂಟಿಂಗ್ ಎಂದು.
ಆಂಡ್ರೆ ಖುಷಿಗೆ ಪಾರವೇ ಇರಲಿಲ್ಲ, ಕೆಲವು ಹರಾಜುದಾರರ ಬಳಿ ಮಾಹಿತಿ ಪಡೆದುಕೊಂಡು ತನ್ನ ತಂದೆಗೆ ಕಸದಲ್ಲಿ ಸಿಕ್ಕ ಪೇಂಟಿಂಗ್ ಅನ್ನು ಬರೋಬ್ಬರಿ 5 ಮಿಲಿಯನ್ ಪೌಂಡ್ ಗಳಿಗೆ ಮಾರಿಬಿಟ್ಟ. ಭಾರತದಲ್ಲಿ ಇದರ ಮೊತ್ತ 55.71 ಕೋಟಿ ಆಗುತ್ತದೆ. ಈಗ ಆ ಪೇಂಟಿಂಗ್ ಮಿಲಾನ್’ನ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿದೆ. ಇತಿಹಾಸಕಾರರ ಪ್ರಕಾರ ಪಿಕಾಸೋ ಆ ಪೇಂಟಿಂಗ್ ಅನ್ನು 1930 ರ ಆಸು ಪಾಸಿನಲ್ಲಿ ಬರೆದಿದ್ದರಂತೆ. ಕೆಪ್ರಿಗೆ ಸದಾ ಬಂದು ಹೋಗಿ ಮಾಡುತ್ತಿದ್ದ ಪಿಕಾಸೊ ಕೆಪ್ರಿಯಲ್ಲಿಯೇ ಆ ಪೇಂಟಿಂಗ್ ಅನ್ನು ಬರೆದಿದ್ದರು. ಆದರೆ ಆ ಪೇಂಟಿಂಗ್ ನ ಮಹತ್ವದ ಅರಿಯದ ಯಾರೋ ಅದನ್ನು ಕಸದಲ್ಲಿ ಎಸೆದಿದ್ದರು. ಅದು ರೊಸ್ಸೋಗೆ ಸಿಕ್ಕು ಸುಮಾರು 50 ವರ್ಷಗಳ ಕಾಲ ಮೌಲ್ಯವೇ ಇಲ್ಲದಂತೆ ಗೋಡೆ ಮೇಲೆ ನೇತು ಬಿದ್ದು, ಈಗ ಒಮ್ಮೆಲೆ 55 ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆ. ಇದಲ್ಲವೆ ಅದೃಷ್ಟ ಎಂದರೆ.