Site icon Samastha News

Pawan Kalyan: ಕುವೆಂಪು ಪದ್ಯ ಹೇಳಿ ಕನ್ನಡಿಗರ ಮನಸ್ಸು ಗೆದ್ದ ಪವನ್ ಕಲ್ಯಾಣ್

Pawan Kalyan

Pawan Kalyan

ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್ ಗೆ ಕರ್ನಾಟಕದಲ್ಲಿಯೂ ಬಹು ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ. ಆಂಧ್ರ- ತೆಲಂಗಾಣಗಳಂತೆ ಕರ್ನಾಟಕದಲ್ಲಿಯೂ ಅವರ ಸಿನಿಮಾಗಳು ಹೌಸ್ ಫುಲ್ ಆಗುತ್ತವೆ. ಇಷ್ಟು ವರ್ಷ, ತಮ್ಮ ಸಿನಿಮಾಗಳಿಂದ ಕನ್ನಡಿಗರ ಹೃದಯ ಗೆದ್ದಿದ್ದ ಪವನ್ ಕಲ್ಯಾಣ್ ಇಂದು ಬೆಂಗಳೂರಿಗೆ ಆಗಮಿಸಿ ಕನ್ನಡದ ಮೇಲಿನ ಗೌರವ ಪ್ರದರ್ಶಿಸಿ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ಪಂಚಾಯರ್ ರಾಜ್ ಸಚಿವ, ಅರಣ್ಯ ಸಚಿವರೂ ಆಗಿರುವ ಪವನ್ ಕಲ್ಯಾಣ್ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯೊಂದಿಗೆ ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳಲೆಂದು ಕರ್ನಾಟಕಕ್ಕೆ ಆಗಮಿಸಿದ್ದರು. ಈ ವೇಳೆ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಪವನ್ ಕಲ್ಯಾಣ್ ಮಾತನಾಡಿದರು.

‘ಕರ್ನಾಟಕ-ಆಂಧ್ರ ಇಷ್ಟು ಹತ್ತಿರವಿದೆ. ಆದರೆ ಈ ವರೆಗೂ ಕನ್ನಡ ಭಾಷೆಯನ್ನು ಕಲಿಯದೇ ಇರುವ ಬಗ್ಗೆ ನನಗೆ ಬೇಸರವಿದೆ. ನಾವು ಇಷ್ಟು ಹತ್ತಿರವಿದ್ದರೂ ನಿಮ್ಮೊಂದಿಗೆ ನನ್ನ ಹೃದಯದ ಭಾವನೆ ಹಂಚಿಕೊಳ್ಳಲು ಇಂಗ್ಲೀಷ್ ಭಾಷೆ ಬಳಸುತ್ತಿರುವುದಕ್ಕೆ ಬಹಳ ವಿಷಾಧಿಸುತ್ತೇನೆ. ನಾನು ಈ ಸಭೆಗೆ ತಯಾರಾಗುತ್ತಿರುವಾಗ ನನ್ನ ಸಹೋದ್ಯೋಗಿಗಳು ನನಗೆ ಕುವೆಂಪು ಅವರ ಸಾಲೊಂದನ್ನು ನೀಡಿದರು. ಆ ಸಾಲಿನ ಅರ್ಥ ತಿಳಿದು ನನ್ನ ಹೃದಯ ತುಂಬಿ ಬಂತು. ಕನ್ನಡ ಕಲಿಯಬೇಕೆಂಬ ಬಯಕೆ ಇನ್ನಷ್ಟು ಹೆಚ್ಚಾಯ್ತು’ ಎಂದರು ಪವನದ ಕಲ್ಯಾಣ್.

ಮಾತ್ರವಲ್ಲದೆ, ಕುವೆಂಪು ಅವರ ‘ಅರಣ್ಯಕ್ಕೆ ಹಾಡು ಹಾಡುವ ಮುನ್ನ ನಾನು ನನ್ನ ಮನದ ಮುಂದೆ..’ ಎಂಬ ಸಾಲುಗಳನ್ನು ಕನ್ನಡದಲ್ಲಿಯೇ ಹೇಳಿದರಲ್ಲದೆ ಅದರ ಅರ್ಥವನ್ನು ಇಂಗ್ಲೀಷ್ ನಲ್ಲಿ ವಿವರಿಸಿ, ಕುವೆಂಪು ಅವರ ದೂರದರ್ಶಿತ್ವ, ಪ್ರಕೃತಿ ಪ್ರೇಮಕ್ಕೆ ಸಲಾಂ ಹೇಳಿದರು. ಮುಂದುವರೆದು ಮಾತನಾಡಿದ ಪವನ್ ಕಲ್ಯಾಣ್, ‘ ಕನ್ನಡದ ಜನ ಒಬ್ಬ ನಟನಾಗಿ ನನಗೆ ಭರಪೂರ ಪ್ರೀತಿಯನ್ನು ಕೊಟ್ಟಿದ್ದಾರೆ. ಕನ್ನಡ ಕಲಿಯುವ ಮೂಲಕ ಅವರ ಪ್ರೀತಿಯನ್ನು ಮರಳಿಸುತ್ತೇನೆ. ಈ ಸಭೆಯೇ ಕನ್ನಡ ಕಲಿಯಲು ನನಗೆ ಓಂಕಾರ’ ಎಂದರು ಪವನ್ ಕಲ್ಯಾಣ್.

‘ನಾನು ಅರಣ್ಯ ಖಾತೆ ಸಚಿವಾಲಯದ ಜವಾಬ್ದಾರಿ ಹೊತ್ತಿದ್ದೇನೆ. ಅರಣ್ಯದ ಮಹತ್ವ, ಅರಣ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಮೊದಲ ಶಿಕ್ಷಣ ನನಗೆ ಸಿಕ್ಕಿದ್ದು, ಕನ್ನಡ ಕಂಠೀರವ ಡಾ ರಾಜ್ ಕುಮಾರ್ ಅವರ ‘ಗಂಧದ ಗುಡಿ’ ಸಿನಿಮಾ ಮೂಲಕ. ಅದೆಷ್ಟು ಅದ್ಭುತವಾದ ಯೋಚನೆ. ಒಬ್ಬ ಅರಣ್ಯಾಧಿಕಾರಿ ಕಳ್ಳಸಾಗಣೆಕಾರರಿಂದ ಅರಣ್ಯವನ್ನು ರಕ್ಷಿಸುತ್ತಾನೆ. ಈಗ ಉಲ್ಟಾ ಆಗಿದೆ ಒಬ್ಬ ಕಳ್ಳಸಾಗಣೆದಾರನೆ ಸಿನಿಮಾದ ಹೀರೋ ಆಗಿದ್ದಾನೆ’ ಎಂದು ಪರೋಕ್ಷವಾಗಿ ‘ಪುಷ್ಪ’ ಸಿನಿಮಾದ ಕತೆಯನ್ನು ಟೀಕಿಸಿದರು ಪವನ್ ಕಲ್ಯಾಣ್.

ಸಭೆಯಲ್ಲಿ ಕರ್ನಾಟದ ಅರಣ್ಯ ಅಧಿಕಾರಿಗಳ ಪ್ರಾಮಾಣಿಕತೆಯನ್ನೂ ಕೊಂಡಾಡಿದ ಪವನ್ ಕಲ್ಯಾಣ್, ‘ಇತ್ತೀಚೆಗೆ ಆಂಧ್ರ ಪ್ರದೇಶಕ್ಕೆ ಸೇರಿಸ 140 ಕೋಟಿ ಮೌಲ್ಯದ ರಕ್ತಚಂದನವನ್ನು ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯವರು ವಶಪಡಿಸಿಕೊಂಡರು. 2017 ರಲ್ಲಿ 100 ಕೋಟಿ ಮೌಲ್ಯದ ರಕ್ತ ಚಂದನ ವಶ ಪಡಿಸಿಕೊಂಡಿದ್ದರು. ಘಟನೆ ಬಳಿಕ ಇಲ್ಲಿನ ಅರಣ್ಯ ಅಧಿಕಾರಿಗಳು ಪ್ರಾಮಾಣಿಕವಾಗಿ ನಮಗೆ ಮಾಹಿತಿ ನೀಡಿದರು. ನನ್ನೊಟ್ಟಿಗೆ ಮಾತನಾಡಿದ ಅರಣ್ಯ ಅಧಿಕಾರಿಯ ಕಾರ್ಯವಿಧಾನವೂ ಸಹ ನನಗೆ ಬಹಳ ಹಿಡಿಸಿತು ಎಂದಿದ್ದಾರೆ.

Bengaluru Police: ಬೆಂಗಳೂರು ಪೊಲೀಸರನ್ನೇ ಬೆದರಿಸಿ ಹಣ ವಸೂಲಿ ಮಾಡಿದ್ದ ಐನಾತಿಯ ಬಂಧನ

ಕರ್ನಾಟಕ ಅರಣ್ಯ ಇಲಾಖೆ ಜೊತೆಗೆ 7 ವಿಷಯಗಳ ತಿಳುವಳಿಕೆ ಒಪ್ಪಂದಕ್ಕೆ ಪವನ್ ಕಲ್ಯಾಣ್ ಸಹಿ ಮಾಡಿದರು. ಆನೆ ಪಳಗಿಸುವುದು, ರಕ್ತ ಚಂದನ ಕಳ್ಳ ಸಾಗಣೆ ತಡೆ, ಇಕೊ ಟೂರಿಸಂ, ಅರಣ್ಯ ರಕ್ಷಣೆಯಲ್ಲಿ ತಂತ್ರಜ್ಞಾನದ ಬಳಕೆ ಇನ್ನೂ ಕೆಲವು ವಿಷಯಗಳಲ್ಲಿ ಪರಸ್ಪರ ಸಹಕಾರ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ.

Exit mobile version