Polygraph Test
ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿರುವ ಕೊಲ್ಕತ್ತದ ವೈದ್ಯೆಯ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಸುಳ್ಳುಪತ್ತೆ ಪರೀಕ್ಷೆ (Polygraph Test) ಮಾಡಿಸಲು ಸಿಬಿಐಗೆ ಅನುಮತಿ ನೀಡಲಾಗಿದೆ. ಕೊಲ್ಕತ್ತ ಹೈಕೋರ್ಟ್ನಲ್ಲಿ ಆರೋಪಿಗಳ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಅನುಮತಿ ಕೋರಲಾಗಿತ್ತು. ನ್ಯಾಯಾಲಯವು ಅನುಮತಿ ನೀಡಿದ್ದು, ನಾಳೆ ಅಂದರೆ ಆಗಸ್ಟ್ 20ರಂದು ಎಲ್ಲ ಆರೋಪಿಗಳ ಸುಳ್ಳುಪತ್ತೆ ಪರೀಕ್ಷೆ ಮಾಡಿಸಲಾಗುತ್ತದೆ.
ಸುಜಯ್ ರಾಯ್, ಕೊಲ್ಕತ್ತದ ಆರ್ಜೆ ಕಾರ್ ಆಸ್ಪತ್ರೆ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತನ ಸುಳ್ಳುಪತ್ತೆ ಪರೀಕ್ಷೆಯನ್ನು ನಾಳೆ ಮಾಡಲಾಗುತ್ತದೆ. ಮಾತ್ರವಲ್ಲದೆ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮಾಡಲಾಗುವುದೆಂದು ಹೈಕೋರ್ಟ್ ಪ್ರಕರಣದ ವಿಚಾರಣೆ ಮುಂದೂಡಿದೆ.
ಇದರ ಜೊತೆಗೆ ಆರ್ಜೆ ಕಾರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅನ್ನು ಇಂದು ಸಹ ಸಿಬಿಐ ವಿಚಾರಣೆ ಮಾಡಿದೆ. ಸತತ ಮೂರು ದಿನಗಳಿಂದಲೂ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ವಿಚಾರಣೆ ನಡೆಸಲಾಗುತ್ತಿದೆ. ಮಾಜಿ ಪ್ರಾಂಶುಪಾಲ ಸಂದೀಪ್, ಅತ್ಯಾಚಾರ ಹಾಗೂ ಕೊಲೆಯಾದ ಯುವತಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೊದಲು ಹೇಳಿಕೆ ನೀಡಿದ್ದರು.
CM Siddaramaiah: ಮತ್ತೊಬ್ಬ ಹೇಮಂತ್ ಸೊರೆನ್ ಆಗಲಿದ್ದಾರೆಯೇ ಸಿದ್ದರಾಮಯ್ಯ
ಆಗಸ್ಟ್ 9 ರಂದು ಮುಂಜಾನೆ ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಜೂನಿಯರ್ ವೈದ್ಯೆಯ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಕಾಲೇಜು ಆಡಳಿತ ಮಂಡಳಿ ಇದೊಂದು ಆತ್ಮಹತ್ಯೆ ಎಂದು ನಂಬಿಸಲು ಯತ್ನಿಸಿತ್ತು ಎಂದು ಆರೋಪಿಸಲಾಗಿದೆ. ಆದರೆ ಇದೊಂದು ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಎಂಬ ಸುದ್ದಿ ಬಹಿರಂಗವಾದ ಬಳಿಕ ಇಡೀ ದೇಶದಲ್ಲಿಯೇ ಈ ಪ್ರಕರಣದ ವಿರುದ್ಧ ದೊಡ್ಡ ಆಕ್ರೋಶ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳ ಮಾತ್ರವೇ ಅಲ್ಲದೆ ಇಡೀ ದೇಶದಲ್ಲಿ ವೈದ್ಯರು ಈ ಅಮಾನುಶ ಘಟನೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.