Prajwal Revanna
ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡು ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಬರೋಬ್ಬರಿ ಒಂದು ತಿಂಗಳ ಬಳಿಕ ಜನರ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಕಳೆದ ತಿಂಗಳು ಮತದಾನ ನಡೆವ ವೇಳೆಗೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಹಲವು ಅಶ್ಲೀಲ ವಿಡಿಯೋಗಳು ಹೊರಬಂದಿದ್ದವು. ಪ್ರಜ್ವಲ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ಅವರ ತಂದೆ ಎಚ್‌ಡಿ ರೇವಣ್ಣ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿ ಅವರ ಬಂಧನವೂ ಆಗಿ ಇದೀಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಇನ್ನು ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂಕಾರ್ನರ್ ನೊಟೀಸ್ ಹೊರಿಸಲಾಗಿದೆ. ಪ್ರಜ್ವಲ್ ರೇವಣ್ಣನ ಪಾಸ್ ಪೋಸ್ಟ್ ರದ್ದು ಪಡಿಸಲು ರಾಜ್ಯ ಸರ್ಕಾರ, ಕೇಂದ್ರಕ್ಕೆ ಪತ್ರ ಬರೆದಿದೆ. ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದಾನೆ ಎಂಬ ಮಾಹಿತಿಯೂ ಇರಲಿಲ್ಲ. ಇದೀಗ ಸ್ವತಃ ಪ್ರಜ್ವಲ್ ರೇವಣ್ಣ ಜನರ ಮುಂದೆ ಬಂದಿದ್ದಾರೆ.
ವಿಡಿಯೋ ಒಂದನ್ನು ಪ್ರಜ್ವಲ್ ರೇವಣ್ಣ ಬಿಡುಗಡೆ ಮಾಡಿದ್ದು, “ನಾನು ಎಲ್ಲಿದ್ದೇನೆ ಎಂಬ ಮಾಹಿತಿ ನೀಡಲು ಬಂದಿದ್ದೇನೆ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ನನ್ನ ವಿರುದ್ಧ ಷಡ್ಯಂತ್ರ ಹೆಣೆಯಲಾಗಿದೆ. ಕೆಲವು ಶಕ್ತಿಗಳು ಒಟ್ಟಾಗಿ ನನ್ನ ವಿರುದ್ಧ ಪಿತೂರಿ ನಡೆಸಿವೆ. ಏನೇ ಆಗಲಿ, ನಾನು ನನ್ನ ತಾತ, ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಮೇ 31ರಂದು ಬೆಳಗ್ಗೆ 10 ಗಂಟೆಗೆ ಭಾರತಕ್ಕೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ” ಎಂದಿದ್ದಾರೆ.
ನನ್ನ ವಿದೇಶ ಪ್ರವಾಸ ಮೊದಲೇ ನಿಗದಿ ಆಗಿತ್ತು. ನಾನು ವಿದೇಶಕ್ಕೆ ಬಂದ ಬಳಿಕ ಪ್ರಕರಣ ದಾಖಲಾಗಿರುವುದು ತಿಳಿಯಿತು. ನನ್ನ ವಿರುದ್ಧ ರಾಹುಲ್ ಗಾಂಧಿ ಸೇರಿದಂತೆ ಇನ್ನೂ ಅನೇಕರು ಹಲವು ವೇದಿಕೆ ಮೇಲೆ ನನ್ನ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ನಾನು ಇದೇ ಶುಕ್ರವಾರ ಕರ್ನಾಟಕಕ್ಕೆ ಆಗಮಿಸಿ, ಎಸ್‌ಐಟಿ ಎದುರು ಹಾಜರಾಗುತ್ತೇನೆ ಅವರ ತನಿಖೆಗೆ ಸಹಕಾರ ನೀಡುತ್ತೇನೆ. ನನಗೆ ಕಾನೂನಿನ ಮೇಲೆ ಗೌರವವಿದೆ. ನನ್ನ ವಿರುದ್ಧ ಮಾಡಿದ ಆರೋಪಗಳನ್ನು ಕೇಳಿ ನನಗೆ ಆಘಾತ ಆಗಿದೆ. ಇದೇ ಕಾರಣಕ್ಕಾಗಿ ನಾನು ಕೆಲ ದಿನಗಳಿಂದ ಹೊರಗೆ ಕಾಣಿಸಿಕೊಳ್ಳಲಿಲ್ಲ” ಎಂದು ಪ್ರಜ್ವಲ್ ರೇವಣ್ಣ ವಿಡಿಯೊದಲ್ಲಿ ಹೇಳಿದ್ದಾರೆ.
ದಾಸವಾಳ ಹೂವಿನ ಹತ್ತು ಉಪಯೋಗಗಳ ಪಟ್ಟಿ ಇಲ್ಲಿದೆ
ಪ್ರಜ್ವಲ್ ರೇವಣ್ಣರ ಪಾಸ್‌ಪೋರ್ಟ್ ರದ್ದು ಮಾಡಲು ಪ್ರಕ್ರಿಯೆ ಆರಂಭಿಸಿದ ಬೆನ್ನಲ್ಲೆ ಪ್ರಜ್ವಲ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಪ್ರಜ್ವಲ್ ವಿರುದ್ಧ ಈಗಾಗಲೇ ಕೆಲವು ಪ್ರಕರಣಗಳು ದಾಖಲಾಗಿದ್ದು, ಪ್ರಜ್ವಲ್ ಬಂದ ಕೂಡಲೇ ಅವರ ಬಂಧನವಾಗುವ ಸಾಧ್ಯತೆ ಖಾತ್ರಿ ಎನ್ನಲಾಗುತ್ತಿದೆ. ಪ್ರಜ್ವಲ್‌ರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಕೆಲವು ಮಹಿಳೆಯರು ಈಗಾಗಲೇ ದೂರು ನೀಡಿದ್ದಾರೆ. ಇನ್ನು ಕೆಲವರು ಮೌಖಿಕ ದೂರು ನೀಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.