Yash
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಸಿನಿಮಾ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗುತ್ತಿರುವ ಸಿನಿಮಾ ಅಲ್ಲ. ಬದಲಿಗೆ ಅಂತರಾಷ್ಟ್ರೀಯ ಸಿನಿಮಾ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ನಿರ್ಮಾಣ ಮಾಡಲಾಗುತ್ತಿರುವ ಸಿನಿಮಾ. ಇದೇ ಕಾರಣಕ್ಕೆ ಸಿನಿಮಾ ಅನ್ನು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಭಾರತದ ಇನ್ಯಾವ ಸಿನಿಮಾ ಸಹ ನಿರ್ಮಾಣ ಮಾಡದಷ್ಟು ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಇತ್ತೀಚೆಗೆ ‘ಟಾಕ್ಸಿಕ್’ ಸಿನಿಮಾ ಸೆಟ್ಗೆ ಭೇಟಿ ನೀಡಿದ್ದ ಸಿನಿಮಾ ನಿರ್ಮಾಪಕರೊಬ್ಬರು ಸೆಟ್ ಅನ್ನು ನೋಡಿ ಶಾಕ್ ಆಗಿದ್ದಾರೆ. ಸಿನಿಮಾ ಸೆಟ್ ಹೇಗಿದೆ ಎಂದು ವಿವರಿಸಿದ್ದಾರೆ.
‘ಮುಂಗಾರು ಮಳೆ’, ‘ಮೊಗ್ಗಿನ ಮನಸ್ಸು’ ಸೇರಿದಂತೆ ಹಲವಾರು ಅದ್ಭುತ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ನಿರ್ಮಾಪಕ ಇ.ಕೃಷ್ಣಪ್ಪ ಅವರು ಇತ್ತೀಚೆಗೆ ‘ಟಾಕ್ಸಿಕ್’ ಸಿನಿಮಾ ಸೆಟ್ಗೆ ಭೇಟಿ ನೀಡಿದ್ದರಂತೆ. ಸೆಟ್ ಅನ್ನು ನೋಡಿ ಅವಾಕ್ಕಾಗಿಬಿಟ್ಟರಂತೆ ಕೃಷ್ಣಪ್ಪ. ಅವರೇ ಹೇಳಿರುವಂತೆ, ‘ಟಾಕ್ಸಿಕ್’ ಸಿನಿಮಾದ ಸೆಟ್, ಇಂಗ್ಲೀಷ್ ಸಿನಿಮಾ ‘ಟೈಟಾನಿಕ್’ ಸೆಟ್ಗಿಂತಲೂ ಅದ್ಭುತವಾಗಿದೆ. ‘ಟೈಟಾನಿಕ್’ ಸಿನಿಮಾದ ಸೆಟ್ ಸಹ ಇಷ್ಟು ಅದ್ಧೂರಿಯಾಗಿ ಇತ್ತೊ ಇಲ್ಲವೋ ಅನುಮಾನ ನನಗೆ. ಅಷ್ಟು ಅದ್ಧೂರಿಯಾಗಿದೆ ಈ ಸಿನಿಮಾ ಸೆಟ್’ ಎಂದಿದ್ದಾರೆ.
ಮುಂದುವರೆದು ಮಾತನಾಡಿ, ‘ಶೂಟಿಂಗ್ ಸೆಟ್ ಅದ್ಭುತವಾಗಿದೆ, ಅದರ ಜೊತೆಗೆ ಸಿನಿಮಾದಲ್ಲಿ ಕೆಲಸ ಮಾಡುವವರಿಗೆ ಮಾಡಿರುವ ಅರೇಂಜ್ಮೆಂಟ್ಸ್ ಸಹ ನಂಬರ್ 1 ರೀತಿಯಲ್ಲಿವೆ. ಕೆಲಸ ಮಾಡುವ ಸಣ್ಣ ಕಾರ್ಮಿಕನಿಂದ ಹಿಡಿದು ಎಲ್ಲರಿಗೂ ಬಹಳ ಒಳ್ಳೆಯ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಊಟ ಮಾಡಲು ಕ್ಯಾಂಟೀನ್ ವ್ಯವಸ್ಥೆ ಮಾಡಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳಲು ವ್ಯವಸ್ಥೆ. ಎಲ್ಲರಿಗೂ ಟಾಯ್ಲೆಟ್ ವ್ಯವಸ್ಥೆ’ ಪ್ರತಿಯೊಂದು ಸಹ ಸೆಟ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಿನಿಮಾಕ್ಕಾಗಿ ಕೆಲಸ ಮಾಡುವ ಕೊನೆಯ ಹಂತದ ಕಾರ್ಮಿಕನಿಗೂ ಒಂದೊಳ್ಳೆ ಸೌಲಭ್ಯವನ್ನು ಕಲ್ಪಿಸಲಾಗಿದೆ’ ಎಂದಿದ್ದಾರೆ ಇ ಕೃಷ್ಣಪ್ಪ.
Daali Dhananjay: ಡಾಲಿ ಧನಂಜಯ್ ಮದುವೆಗೆ ಆದ ಖರ್ಚೆಷ್ಟು ಕೋಟಿ ಗೊತ್ತೆ?
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಅನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಲಾಗುತ್ತಿದೆ. ಸಿನಿಮಾ ಅನ್ನು ವಿದೇಶಗಳಲ್ಲಿಯೂ ಭಾರಿ ಅದ್ಧೂರಿಯಾಗಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಸಿನಿಮಾದಲ್ಲಿ ನಯನತಾರಾ, ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಹಲವು ಹಾಲಿವುಡ್ ತಂತ್ರಜ್ಞರು ಈ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಆಕ್ಷನ್ ನಿರ್ದೇಶಕರನ್ನು ಹಾಲಿವುಡ್ನಿಂದ ಕರೆತರಲಾಗಿದೆ. ಸಿನಿಮಾ ನಿರ್ದೇಶನ ಮಾಡುತ್ತಿರುವುದು ಮಲಯಾಳಂನ ಗೀತು ಮೋಹನ್ದಾಸ್. ನಿರ್ಮಾಣ ಮಾಡುತ್ತಿರುವುದು ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್. ಸಿನಿಮಾ ಮುಂದಿನ ವರ್ಷ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ.