Pushpa 2
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ಮುನ್ನವೇ ಭಾರಿ ನಿರೀಕ್ಷೆಯನ್ನು ಹುಟ್ಟಿಸಿತ್ತು, ಈ ಸಿನಿಮಾ ಈ ಹಿಂದಿನ ಎಲ್ಲ ದಾಖಲೆಗಳನ್ನು ಪುಡಿಗಟ್ಟುತ್ತದೆ ಎಂದೇ ಹೇಳಲಾಗಿತ್ತು. ಈ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದ್ದ ವಿತರಕನಂತೂ ‘ಕೆಜಿಎಫ್ 2’ ದಾಖಲೆ ಮುರಿದೇ ತೀರುತ್ತೇವೆ ಎಂದಿದ್ದರು. ಅಂದಹಾಗೆ ಈ ಸಿನಿಮಾ ಎಲ್ಲ ದಾಖಲೆಗಳನ್ನು ಮುರಿಯಿತೆ?
‘ಪುಷ್ಪ 2’ ಚಿತ್ರತಂಡವೇ ಹೇಳಿಕೊಂಡಿರುವಂತೆ ‘ಪುಷ್ಪ 2’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 294 ಕೋಟಿ ರೂಪಾಯಿ ಗಳಿಕೆ ಮಾಡಿದೆಯಂತೆ. ಭಾರತದ ಇನ್ಯಾವುದೇ ಸಿನಿಮಾ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್ ನಲ್ಲಿ ಇಷ್ಟು ಹಣ ಗಳಿಕೆ ಮಾಡಿಲ್ಲ ಎಂದು ಹೇಳಿಕೊಂಡಿದೆ. ವಿಶ್ವ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ ಅತಿ ಹೆಚ್ಚು ಹಣವನ್ನು ‘RRR’ ಸಿನಿಮಾ ಗಳಿಸಿತ್ತು, ‘RRR’ ಸಿನಿಮಾ ಮೊದಲ ದಿನ 233 ಕೋಟಿ ಹಣ ಗಳಿಸಿತ್ತು. ಆ ದಾಖಲೆಯನ್ನು ‘ಪುಷ್ಪ 2’ ಮುರಿದು ಹಾಕಿದೆ.
294 ಕೋಟಿ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ ಆದರೆ ಭಾರತದಲ್ಲಿ ‘ಪುಷ್ಪ 2’ ಸಿನಿಮಾ ಬರೋಬ್ಬರಿ 175 ಕೋಟಿ ರೂಪಾಯಿ ಗಳಿಸಿದೆ. ಆ ಮೂಲಕ ಭಾರತದ ಮಾರುಕಟ್ಟೆಯಲ್ಲಿಯೂ ದಾಖಲೆ ಬರೆದಿದೆ. ‘ಕೆಜಿಎಫ್ 2’ ಸಿನಿಮಾ ಭಾರತದಲ್ಲಿ ಮೊದಲ ದಿನ 135 ಕೋಟಿ ರೂಪಾಯಿ ಗಳಿಸಿತ್ತು. ಆ ಮೂಲಕ ‘ಪುಷ್ಪ 2’ ಸಿನಿಮಾ ಮೊದಲ ದಿನ ‘ಕೆಜಿಎಫ್ 2’ ಸಿನಿಮಾದ ದಾಖಲೆಯನ್ನು ಮುರಿದಿದೆ.
Pushpa 2: ಒಳ್ಳೆ ಕನ್ನಡ ಸಿನಿಮಾದ ಕತ್ತು ಹಿಸುಕಿದ ‘ಪುಷ್ಪ 2’ ಕೇಳೋರು ಯಾರೂ ಇಲ್ಲ
ಆದರೆ, ‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗಿದ್ದ ಸಮಯದಲ್ಲಿ ಇದ್ದ ಟಿಕೆಟ್ ದರಗಳಿಗಿಂತಲೂ ಬಹುತೇಕ 50% ಹೆಚ್ಚು ಟಿಕೆಟ್ ದರಗಳನ್ನು ‘ಪುಷ್ಪ 2’ ನಿಗದಿಪಡಿಸಲಾಗಿತ್ತು, ‘ಪುಷ್ಪ 2’ ಸಿನಿಮಾ ಭಾರಿ ದೊಡ್ಡ ಕಲೆಕ್ಷನ್ ಮಾಡಲು ಪ್ರಮುಖ ಕಾರಣ ಇದೇ. ತೆಲಂಗಾಣ, ಆಂಧ್ರಗಳಲ್ಲಿಯೂ ಸಹ ಯಾವ ಸಿನಿಮಾಕ್ಕೂ ಮಾಡದಷ್ಟು ಟಿಕೆಟ್ ಬೆಲೆಯನ್ನು ಹೆಚ್ಚಿಸಲಾಗಿತ್ತು. ಅದೇ ಕೆಜಿಎಫ್ 2 ಸಿನಿಮಾ ಬಿಡುಗಡೆ ಆದಾಗ ಆಂಧ್ರ ತೆಲಂಗಾಣದಲ್ಲಿ ಟಿಕೆಟ್ ಬೆಲೆ ಇದ್ದಿದ್ದು ಕೇವಲ 100 ರಿಂದ 150 ರೂಪಾಯಿ ಮಾತ್ರ. ಬೆಂಗಳೂರಿನಲ್ಲಿ ಸರಾಸರಿ ಟಿಕೆಟ್ ದರ 250 ರೂಪಾಯಿ ಇತ್ತು. ಹಾಗಿದ್ದರೂ ಸಹ ‘ಕೆಜಿಎಫ್ 2’ ಸಿನಿಮಾ ಮೊದಲ ದಿನ 135 ಕೋಟಿ ರೂಪಾಯಿ ಹಣವನ್ನು ಭಾರತದಲ್ಲಿ ಗಳಿಸಿ ದಾಖಲೆ ಬರೆದಿತ್ತು.