Site icon Samastha News

Bengaluru: ಬೆಂಗಳೂರಿನ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಡೀಲ್: ಭಾರಿ ಮೊತ್ತಕ್ಕೆ ಸೈಟ್ ಸೇಲ್

Bengaluru

Bengaluru

ಬೆಂಗಳೂರಿನ ರಿಯಲ್ ಎಸ್ಟೇಟ್ ದರ ಗಗನಕ್ಕೆ ಏರಿ ಕೂತಿವೆ. ಬೆಂಗಳೂರನ್ನು ಮಧ್ಯಮ ವರ್ಗ ಸ್ನೇಹಿ ಮಾಡುವ ಬಗ್ಗೆ ಕೆಲವು ಚರ್ಚೆಗಳು ಆರಂಭವಾಗಿವೆ ಆದರೆ ಅದಕ್ಕೆ ವ್ಯತಿರಿಕ್ತವಾಗಿ ಕೆಲವರು ಬೆಂಗಳೂರನ್ನು ದುಬಾರಿ ನಗರ ಮಾಡಿಯೇ ತೀರುವುದಾಗಿ ಪಣತೊಟ್ಟಂತೆ ವರ್ತಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗಷ್ಟೆ ಒಂದು ರಿಯಲ್ ಎಸ್ಟೇಟ್ ಡೀಲ್ ಆಗಿದ್ದು, ಇಂಥಹಾ ದುಬಾರಿ ಡೀಲ್ ಹಿಂದೆಂದೂ ಆಗಿರಲಿಲ್ಲ. ಬೆಂಗಳೂರು ಅದೆಷ್ಟು ದುಬಾರಿ ಆಗಿದೆ ಎಂಬುದನ್ನು ಉದಾಹರಣೆಯಾಗಿದೆ ಈ ಡೀಲ್.

ಮಲ್ಲೇಶ್ವರ, ಚಾಮರಾಜಪೇಟೆ, ಜಯನಗರ ಇವೆಲ್ಲ ಹಳೆ ಬೆಂಗಳೂರಿನ ಸೊಬಗು ಕಟ್ಟಿಕೊಟ್ಟರೆ, ಕೋರಮಂಗಲ ಹಾಗೂ ಅದರ ಸುತ್ತ ಮುತ್ತಲಿನ ಪ್ರದೇಶಗಳು ಹೊಸ ಬೆಂಗಳೂರು ಹೇಗೆ ಅತಿ ವೇಗವಾಗಿ ಬೆಳೆಯಿತು ಎಂಬುದಕ್ಕೆ ಸಾಕ್ಷಿಯಾಗಿವೆ. ಇದೀಗ ಬೆಂಗಳೂರಿಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥಹಾ ರಿಯಲ್ ಎಸ್ಟೇಟ್ ಡೀಲ್ ಒಂದು ಕೋರಮಂಗಲದಲ್ಲಿ ನಡೆದಿದೆ.

ಕೋರಮಂಗಲದ ಏರಿಯಾ ಒಂದರಲ್ಲಿ ಕೇವಲ 10 ಸಾವಿರ ಚದರ ಅಡಿ ಜಾಗವನ್ನು ಬರೋಬ್ಬರಿ 67.50 ಕೋಟಿಗೆ ಖರೀದಿ ಮಾಡಿದ್ದಾರೆ ಕ್ವಿಸ್ ಕಾರ್ಪ್ ಸಂಸ್ಥೆಯ ವ್ಯವಸ್ಥಾಪಕ ಅಜಿತ್ ಇಸಾಕ್. ಅಲ್ಲಿಗೆ ಒಂದು ಚದರ ಅಡಿ ಜಾಗಕ್ಕೆ ಅಜಿತ್ ಇಸಾಕ್ ನೀಡಿರುವುದು ಬರೋಬ್ಬರಿ 70,300 ರೂಪಾಯಿಗಳು. ಕೋರಮಂಗಲದ 3ನೇ ಬ್ಲಾಕ್​ನಲ್ಲಿ ಈ ಹತ್ತು ಸಾವಿರ ಚದರ ಅಡಿಯ ಜಾಗವಿದ್ದು, ಜಾಗದ ಹೊಸ ಮಾಲೀಕ ಅಜಿತ್ ಅವರು ತಮ್ಮ ಖಾಸಗಿ ಅನುಕೂಲಕ್ಕಾಗಿ ಸ್ಥಳವನ್ನು ಬಳಸಿಕೊಳ್ಳಲಿದ್ದಾರೆ.

ಭಾರತಕ್ಕೆ ಬರುವ ಮುನ್ನ ಟೆಸ್ಲಾಗೆ ಹಿನ್ನಡೆ, ಭಾರತದಲ್ಲಿ ಸಿಗಲಿದೆಯಾ ಯಶಸ್ಸು

ಅಜಿತ್ ಅವರು ಆ ಸ್ಥಳವನ್ನು ಖರೀದಿ ಮಾಡುವ ಮೊದಲು ಆ ಸ್ಥಳವು ಅರವಿಂದ್ ರೆಡ್ಡಿ ಮತ್ತು ಗೀತಾ ರೆಡ್ಡಿ ಅವರ ಹೆಸರಲ್ಲಿತ್ತು. ಅದೇ ಏರಿಯಾದಲ್ಲಿ ಕೆಲವು ತಿಂಗಳ ಹಿಂದಷ್ಟೆ ಟಿವಿಎಸ್ ಮೋಟಾರ್ಸ್ ಸಂಸ್ಥೆ ಚದರ ಅಡಿಗೆ 68,000 ರೂಪಾಯಿ ನೀಡಿ ಕೆಲವು ಚದರ ಅಡಿ ಜಾಗವನ್ನು ಖರೀದಿ ಮಾಡಿದ್ದರು. ಆ ಜಾಗವನ್ನು ಅವ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಯೋಜನೆಯಲ್ಲಿದ್ದಾರೆ. ಟಿವಿಎಸ್ ಮೋಟಾರ್ಸ್ 68,000 ರೂಪಾಯಿ ನೀಡಿದ್ದು ಸ್ಥಳೀಯವಾಗಿ ಸುದ್ದಿಯಾಗಿತ್ತು. ಅದೇ ಕಾರಣಕ್ಕೆ ಈಗ ಚದರ ಅಡಿ 70,300 ರೂಪಾಯಿಗೆ ಮಾರಾಟವಾಗಿದೆ.

ಈಗ ಕೋರಮಂಗಲದಲ್ಲಿ ಭಾರಿ ಮೊತ್ತಕ್ಕೆ ಸ್ಥಳ ಖರೀದಿ ಮಾಡಿರುವ ಅಜಿತ್ ಇಸಾಕ್ ಸಾಮಾನ್ಯ ವ್ಯಕ್ತಿಯಲ್ಲ. ಕ್ವಿಸ್ ಕಾರ್ಪ್ ಹೆಸರಿನ ದೊಡ್ಡ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ. ಈಗ ಅಜಿತ್ ಇಸಾಕ್ ಸ್ಥಳ ಖರೀದಿ ಮಾಡಿರುವ ಕೋರಮಂಗಲದ 3ನೇ ಬ್ಲಾಕ್ ಬಿಲೆನಿಯರ್ಸ್ ಬ್ಲಾಕ್ ಎಂದೇ ಅಡ್ಡ ಹೆಸರು ಪಡೆದುಕೊಂಡಿದೆ. ಈ ಏರಿಯಾನಲ್ಲಿ ಫ್ಲಿಪ್​ಕಾರ್ಟ್​ನ ಸಹ ಸಂಸ್ಥಾಪಕ ಸಚಿನ್ ಬನ್ಸಲ್, ಇನ್ಫೋಸಿಸ್​ನ ಸಂಸ್ಥಾಪಕರಾದ ನಂದನ್ ನೀಲಕೇಣಿ, ಕ್ರಿಸ್ ಗೋಪಾಲಕೃಷ್ಣ, ಖ್ಯಾತ ಹೃದಯ ತಜ್ಞ ದೇವಿ ಶೆಟ್ಟಿ, ರಾಜ್ಯಸಭಾ ಸದಸ್ಯ ಮತ್ತು ಯಶಸ್ವಿ ಉದ್ಯಮಿ ರಾಜೀವ್ ಚಂದ್ರಶೇಖರ್, ದೀಪಿಕಾ ಪಡುಕೋಣೆಯ ಮನೆ ಇನ್ನೂ ಕೆಲವು ಕೋಟ್ಯಧೀಶರು ಇದೇ ಏರಿಯಾನಲ್ಲಿ ನೆಲೆಸಿದ್ದಾರೆ. ಹಾಗಾಗಿ ಈ ಏರಿಯಾದ ಸೈಟ್​ ಬೆಲೆ ಬೆಂಗಳೂರಿನಲ್ಲೇ ಅತ್ಯಂತ ದುಬಾರಿ.

Exit mobile version