Darshan
ರೇಣುಕಾ ಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಲ್ಲಿದ್ದಾಗ ಠಾಣೆಯ ಮುಂದೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು, ಅವರನ್ನು ಚದುರಿಸುವುದು ಪೊಲೀಸರಿಗೆ ಕಷ್ಟವಾಗಿಬಿಟ್ಟಿತ್ತು. ಅದೇ ಸಂರ್ಭದಲ್ಲಿ ನಟ ಪ್ರಥಮ್, ದರ್ಶನ್ ಅಭಿಮಾನಿಗಳ ಬಗ್ಗೆ ಆಡಿದ ಮಾತುಗಳು ಅಭಿಮಾನಿಗಳಿಗೆ ನೋವು ತರಿಸಿತ್ತು. ದರ್ಶನ, ಕೊಲೆ ಪ್ರಕರಣದಲ್ಲಿ ಆರೋಪಿಯಾದ ಬಳಿಕ ಹಲವು ನಟರು ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಅವರ ಅಭಿಮಾನಿಗಳ ಬಗ್ಗೆಯೂ ಮಾತನಾಡಿದ್ದಾರೆ. ಆದರೆ ನಟ ರಾಜ್ ಬಿ ಶೆಟ್ಟಿ, ದರ್ಶನ್ ಹಾಗೂ ಅವರ ಅಭಿಮಾನಿಗಳ ನಡುವಿನ ಬೆಸುಗೆಯನ್ನು ಬೇರೆಯದ್ದೇ ದೃಷ್ಟಿಕೋನದಲ್ಲಿ ನೋಡಿದ್ದಾರೆ.
ತಮ್ಮ ‘ರೂಪಾಂತರ’ ಸಿನಿಮಾದ ಪ್ರಚಾರಕ್ಕೆ ಕರೆಯಲಾಗಿದ್ದ ಸುದ್ದಿಗೋಷ್ಟೀಯಲ್ಲಿ ಮಾತನಾಡಿದ ರಾಜ್ ಬಿ ಶೆಟ್ಟಿ, ‘ದರ್ಶನ್ ಅವರಷ್ಟು ಅಭಿಮಾನಿಗಳು ಬಹುಷಃ ಯಾರಿಗೂ ಇಲ್ಲ. ಬೇರೆಯರು ಎಷ್ಟೇ ದುಡಿದರು, ಎಷ್ಟೇ ಒಳ್ಳೆ ಸಿನಿಮಾ ಕೊಟ್ಟರು ಆ ರೀತಿ ಅಭಿಮಾನಿಗಳನ್ನು ಸಂಪಾದಿಸುವುದು ಸಾಧ್ಯವಿಲ್ಲ. ಅವರ ಅಭಿಮಾನಿಗಳನ್ನು ವಿಶ್ಲೇಷಿಸುವುದು ಹೇಗೆಂಸು ಅರ್ಥವಾಗುವುದಿಲ್ಲ. ಅವರೇಕೆ ದರ್ಶನ್ ಅವರ ಸಿನಿಮಾಗಳನ್ನು ಹಾಗೆ ಮುಗಿಬಿದ್ದು ನೋಡುತ್ತಾರೆ, ಬೇರಯವರ ಸಿನಿಮಾಗಳು ಏಕೆ ಓಡುವುದಿಲ್ಲ ನನಗೆ ಅರ್ಥವಾಗುವುದಿಲ್ಲ. ಬಹುಷಃ ಅದು ದರ್ಶನ್ ಅವರಿಗೆ ದೇವರು ಕೊಟ್ಟ ವರ ಇರಬಹುದು’ ಎಂದಿದ್ದಾರೆ.
ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲು
ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮಾತನಾಡಿರುವ ನಟ ರಾಜ್ ಬಿ ಶೆಟ್ಟಿ, ‘ಒಂದೊಮ್ಮೆ ಈ ಪ್ರಕರಣದಲ್ಲಿ ದರ್ಶನ್ ಅವರಿಂದ ತಪ್ಪಾಗಿದ್ದರೆ ಖಂಡಿತ ಅದು ಅವರಿಗೆ ಕಾಡಿರುತ್ತೆ. ಇಲ್ಲಿ ಒಂದು ಜೀವ ಹೋಗಿದೆ. ಖಂಡಿತ ಆ ಬಗ್ಗೆ ದರ್ಶನ್ ಮನ ಮಂಥನ ಮಾಡಿಕೊಳ್ಳುತ್ತಿರುತ್ತಾರೆ. ಅಲ್ಲಿ ಅವರು ಒಬ್ಬಂಟಿಯಾಗಿದ್ದಾರೆ ಈ ಬಗ್ಗೆಯೇ ಯೋಚಿಸುತ್ತಿರುತ್ತಾರೆ’ ಎಂದಿದ್ದಾರೆ.
‘ನಾವೇ ವಾಹನದಲ್ಲಿ ಹೋಗುವಾಗ ಯಾರಾದರೂ ಓವರ್ ಟೇಕ್ ಮಾಡಿದರೆ ಬೈದುಕೊಳ್ಳುತ್ತೇವೆ, ಹೊಡೆದು ಹಾಕಬೇಕು ಎಂದು ಕೊಳ್ಳುತ್ತೇವೆ, ಅದು ಆ ಕ್ಷಣದ ಪ್ರತಿಕ್ರಿಯೆ ಹಾಗೆಂದು ನಮ್ಮ ಉದ್ದೇಶ ಅವನಿಗೆ ಹಿಂಸೆ ಮಾಡುವುದು ಆಗಿರುವುದಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ ರಾಜ್ ಬಿ ಶೆಟ್ಟಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜುಲೈ 18 ಕ್ಕೆ ಅವರ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದ್ದು, ಅಂದು ಮತ್ತೆ ವಿಚಾರಣೆ ನಡೆಯಲಿದೆ. ದರ್ಶನ್ ಹೊರಗೆ ಬರಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.