Site icon Samastha News

Highway: ಮೈಸೂರು ಹೆದ್ದಾರಿ, ಬೈಕರ್ ಗಳು ಚಾಪೆ ಕೆಳಗೆ ಪೊಲೀಸರು ರಂಗೋಲಿ ಕೆಳಗೆ

Highway

Highway

ಮೈಸೂರು- ಬೆಂಗಳೂರು ಹೆದ್ದಾರಿ ಎರಡು ನಗರಗಳ ನಡುವಿನ ಪ್ರಯಾಣ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈ ಮೊದಲು ಈ ಹೆದ್ದಾರಿಯಲ್ಲಿ ವೇಗ ಮಿತಿ ಹೆಚ್ಚಿತ್ತು, ಆದರೆ ಒಂದರ ಹಿಂದೊಂದು ಅಪಘಾತಗಳು ಸಂಭವಿಸಿದ ಬಳಿಕ ವೇಗ ಮಿತಿ ಇಳಿಸಿ 100 ಕಿ.ಮೀ ಮಾಡಲಾಗಿದೆ. ಜೊತೆಗೆ ಹೈವೆ ಯಲ್ಲಿ ಸಾಕಷ್ಟು ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವೇಗ ಮಿತಿ ಉಲ್ಲಂಘಿಸುವವರಿಗೆ ಕ್ಷಣಾರ್ಧದಲ್ಲಿ ದಂಡ ಹಾಕಲಾಗುತ್ತಿದೆ. ಆದರೆ ಕೆಲವು ಚಾಲಾಕಿ ವಾಹನ ಸವಾರರು ಈ ತಂತ್ರಜ್ಞಾನ ಆಧರಿತ ಕ್ಯಾಮೆರಾಗಳನ್ನು ಅದೇ ತಂತ್ರಜ್ಞಾನ ಬಳಸಿ ವಂಚಿಸುತ್ತಿದ್ದರು. ಆದರೆ ಈಗದು ಪೋಲಿಸರ ಗಮನಕ್ಕೆ ಬಂದು, ದೂರು ಸಹ ದಾಖಲಿಸಿಕೊಂಡಿದ್ದಾರೆ.

ವೀಕೆಂಡ್ ಗಳಲ್ಲಿ ಈ ಹೈವೇ ಯಲ್ಲಿ ಬೈಕ್ ರೈಡ್ ಮಾಡಲು ಬೆಂಗಳೂರು ಸೇರಿದಂತೆ ಹಲವು ನಗರಗಳಿಂದ ಬೈಕ್ ರೈಡರ್ ಗಳು ಬರುತ್ತಾರೆ. ಭಾರಿ ವಾಹನಗಳನ್ನು ಓಡಿಸಿಕೊಂಡು ಬರುವ ಈ ಬೈಕರ್ ಗಳಿಗೆ 150-180 ಕಿ.ಮೀ ವೇಗದಲ್ಲಿ ಬೈಕು, ಕಾರು ಓಡಿಸುವ ಹುಚ್ಚು. ಆದರೆ ಇಷ್ಟು ವೇಗದಲ್ಲಿ ಬೈಕು ಓಡಿಸಿದರೆ ಮೈಸೂರು ಹೆದ್ದಾರಿಯ ಜಾಣ ಕ್ಯಾಮೆರಾಗಳು ಗುರುತಿಸಿ ಕ್ಷಣದಲ್ಲಿಯೇ ಸಾವಿರ ರೂಪಾಯಿ ದಂಡ ಹಾಕುತ್ತವೆ. ಇದರಿಂದ ತಪ್ಪಿಸಿಕೊಳ್ಳಲು ಈ ರೈಡರ್ ಗಳು ಆಪ್ ಒಂದರ ಮೊರೆ ಹೋಗಿದ್ದಾರೆ. ಅದುವೇ ‘ರಡಾರ್ ಸ್ಪೀಡ್ ಕ್ಯಾಮೆರ ಡಿಟೆಕ್ಟರ್’ .

ಈ ರಡಾರ್ ಸ್ಪೀಡ್ ಕ್ಯಾಮೆರ ಡಿಟೆಕ್ಟರ್’ ಅಪ್ಲಿಕೇಶನ್, ಎಐ ಕ್ಯಾಮೆರಾಗಳನ್ನು ಮೊದಲೇ ಗುರುತಿಸಿ ರೈಡರ್ ಗೆ ಎಚ್ಚರ ನೀಡುತ್ತವೆ. ಎಚ್ಚರಿಕೆ ಗ್ರಹಿಸುವ ಚಾಲಕ ಕ್ಯಾಮೆರಾಗಳು ಹತ್ತಿರವಾಗುತ್ತಿದ್ದಂತೆ ಬೈಕು ಅಥವಾ ಕಾರಿನ ವೇಗ ಕಡಿಮೆ ಮಾಡಿಕೊಳ್ಳುತ್ತಾನೆ. ಕ್ಯಾಮೆರಾ ಇರುವ ಸ್ಥಳ ಹೋದ ಬಳಿಕ ಮತ್ತೆ ವೇಗ ಹೆಚ್ಚು ಮಾಡಿಕೊಳ್ಳುತ್ತಾನೆ. ಇದರಿಂದ ನಿಯಮ ಬಾಹಿರವಾಗಿ ವೇಗವಾಗಿ ಗಾಡಿ ಓಡಿಸಿದರು ದಂಡದಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ಎಐ ಕ್ಯಾಮೆರಾಗಳು ಅಂದುಕೊಂಡಿದ್ದಕ್ಕಿಂತಲೂ ಜಾಣ ಆಗಿದ್ದು, ಈ ಕ್ಯಾಮೆರಾಗಳು ವಾಹನಗಳು ಹೈವೆ ಮೇಲೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಲು ತೆಗೆದಿಕೊಂಡಿರುವ ಸಮಯದ ಆಧಾರದಲ್ಲಿ ವೇಗವನ್ನು ಲೆಕ್ಕಾಚಾರ ಹಾಕಿ ದಂಡ ವಿಧಿಸುತ್ತದೆ.

Sun Pharmaceutical: ತನ್ನ 4500 ನೌಕರರನ್ನು ವಿದೇಶ ಪ್ರವಾಸಕ್ಕೆ ಕಳಿಸಿದ ಭಾರತೀಯ ಉದ್ಯಮಿ, ಯಾರೀತ?

ಈಗ ರಡಾರ್ ಸ್ಪೀಡ್ ಕ್ಯಾಮೆರ ಡಿಟೆಕ್ಟರ್’ ಆಪ್ ಬಳಸಿ ಎಐ ಕ್ಯಾಮೆರಾಗಳನ್ನು ಮೋಸ ಮಾಡಿ ದಂಡದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕೆಲವು ರೈಡರ್ ಗಳ ವಿರುದ್ಧ FIR ದಾಖಲಿಸೊರುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಅಲ್ಲದೆ, ಆ ಕ್ಯಾಮೆರ ಡಿಟೆಕ್ಟರ್ ಅಪ್ಲಿಕೇಶನ್ ಗಳು ರೈಡರ್ ಗಳು ಅಂದುಕೊಂಡಂತೆ ಎಫಿಶಿಯೆಂಟ್ ಆಗಿ ಕ್ಯಾಮೆರಾಗಳನ್ನು ಪತ್ತೆ ಹಚ್ಚುವುದಿಲ್ಲ. ಹಲವು ಬಾರಿ ಆ ಕ್ಯಾಮೆರಾಗಳು ತಪ್ಪು ಮಾಹಿತಿ ನೀಡುತ್ತವೆ ಎಂದಿದ್ದಾರೆ.

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ 60 ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅತಿಯಾದ ವೇಗ, ಅಶಿಸ್ತಿನ ಚಾಲನೆ, ಲೇನ್ ಬದಲಿಸುವುದು, ಹೆಲ್ಮೆಟ್ ರಹಿತ ಚಾಲನೆ, ಸೀಟ್ ಬೆಲ್ಟ್ ರಹಿತ ಚಾಲನೆ, ಇನ್ನಿತರೆ ಉಲ್ಲಂಘನೆಗಳನ್ನು ಗುರುತಿಸಿ ಈ ಕ್ಯಾಮೆರಾಗಳು ದಂಡ ವಿಧಿಸುತ್ತವೆ. ಈ ಕ್ಯಾಮೆರಾಗಳು ವಿಧಿಸುವ ದಂಡ ಕೆಲವೇ ನಿಮಿಷದಲ್ಲಿ ಗಾಡಿ ಮಾಲೀಕನ ಮೊಬೈಲ್ ಗೆ, ಇಮೇಲ್ ಗೆ ನೇರವಾಗಿ ಸಂದೇಶ ಹೋಗುತ್ತದೆ.

Exit mobile version