Site icon Samastha News

Rishab Shetty: ‘ಕಾಂತಾರ 2’ ಚಿತ್ರೀಕರಣ ಎಲ್ಲಿ ವರೆಗೆ ಬಂತು?

Rishab Shetty

Rishab Shetty look in Kantara 2

Rishab Shetty

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದ ‘ಕಾಂತಾರ’ ಸಿನಿಮಾ ಭರ್ಜರಿ ಹಿಟ್ ಆಗಿದ್ದು ಮಾತ್ರವಲ್ಲದೆ ದೇಶದಾದ್ಯಂತ ಸಂಚಲನವನ್ನೇ ಮೂಡಿಸಿತ್ತು. ಕನ್ನಡಕ್ಕಾಗಿ ಮಾತ್ರವೇ ತಯಾರಾಗಿದ್ದ ಸಿನಿಮಾ ಕೊನೆಗೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಹಲವು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಯ್ತು. ಬಿಡುಗಡೆ ಆದ ಎಲ್ಲ ಭಾಷೆಗಳಲ್ಲಿಯೂ ಸೂಪರ್ ಹಿಟ್ ಆಯ್ತು. ಅದೇ ಖುಷಿಯಲ್ಲಿ ರಿಷಬ್ ಶೆಟ್ಟಿ ಮತ್ತು ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ ‘ಕಾಂತಾರ 2’ ಸಿನಿಮಾ ಘೋಷಣೆ ಮಾಡಿತಾದರೂ ಅದರ ಬಗ್ಗೆ ಯಾಕೋ ಹೆಚ್ಚಾಗಿ ಸುದ್ದಿ ಹೊರಬೀಳುತ್ತಿಲ್ಲ. ಆದರೆ ಇಲ್ಲಿದೆ ಸಿನಿಮಾದ ಚಿತ್ರೀಕರಣದ ಬಗ್ಗೆ ಅಪ್​ಡೇಟ್.

ಅಸಲಿಗೆ ಕಾಂತಾರ 2 ಅಥವಾ ‘ಕಾಂತಾರ ಸಿನಿಮಾದ ಪ್ರೀಕ್ವೆಲ್ ಪ್ರಾರಂಭವಾಗಿ ಕೆಲವು ತಿಂಗಳುಗಳೇ ಕಳೆದಿವೆ. ಮೊದಲೇ ಹೇಳಿದ್ದಂತೆ ಮಳೆಗಾಲಕ್ಕೆ ಮುಂಚೆ ಚಿತ್ರೀಕರಣ ಪ್ರಾರಂಭ ಮಾಡಿ, ಮಳೆಗಾಲದ ಸಂಪೂರ್ಣ ಲಾಭವನ್ನು ಪಡೆಯುವ ಗುರಿಯನ್ನು ಚಿತ್ರತಂಡ ಹೊಂದಿತ್ತು. ಈ ಹಿಂದೆ ‘ಕಾಂತಾರ’ ಸಿನಿಮಾದ ಚಿತ್ರೀಕರಣ ಮಾಡಿದ್ದ ಜಾಗದಲ್ಲಿಯೇ ಅಂದರೆ ಕೆರಾಡಿಯಲ್ಲಿಯೇ ‘ಕಾಂತಾರ 2’ ಅಥವಾ ಕಾಂತಾರ ಸಿನಿಮಾದ ಪ್ರೀಕ್ವೆಲ್ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ.

ಕೆರಾಡಿ ರಿಷಬ್ ಶೆಟ್ಟಿಯವರ ತವರಾಗಿದ್ದು ‘ಕಾಂತಾರ’ ಸಿನಿಮಾದ ಚಿತ್ರೀಕರಣ ಇದೇ ಜಾಗದಲ್ಲಿ ನಡೆದಿತ್ತು. ಈಗ ರಿಷಬ್ ಹಠ ಮಾಡಿ ಪಾರ್ಟ್ 2 ಸಿನಿಮಾವನ್ನೂ ಸಹ ಅಲ್ಲಿಯೇ ಚಿತ್ರೀಕರಣ ಮಾಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಇಡೀ ಕುಟುಂಬವನ್ನು ಬೆಂಗಳೂರಿನಿಂದ ಕುಂದಾಪುರಕ್ಕೆ ಶಿಫ್ಟ್ ಮಾಡಿಸಿದ್ದು, ತಮ್ಮ ಮಕ್ಕಳ ಶಾಲಾ ದಾಖಲಾತಿಯನ್ನು ಸಹ ಕುಂದಾಪುರದ ಪ್ರತಿಷ್ಠಿತ ಶಾಲೆಯಲ್ಲಿ ಮಾಡಿಸಿದ್ದಾರಂತೆ.

Kalki 2898 AD: ಕಲ್ಕಿ ಸಿನಿಮಾದ ನಟರು ಪಡೆದ ಸಂಭಾವನೆ ಎಷ್ಟು?

ಸಿನಿಮಾದ ಚಿತ್ರೀಕರಣ ಜೋರಾಗಿ ನಡೆಯುತ್ತಿದ್ದು, ಮಲಯಾಳಂ ಹಾಗೂ ಇತರೆ ಭಾಷೆಗಳ ಕೆಲ ನಟರು ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ತುಸು ತಡವಾಗಿದ್ದು, ಚಿತ್ರೀಕರಣವನ್ನು ನಿಗದಿತ ಸಮಯಕ್ಕಿಂತಲೂ ಎರಡು ತಿಂಗಳು ತಡವಾಗಿ ಮುಗಿಸಲಿದ್ದಾರೆ ರಿಷಬ್ ಶೆಟ್ಟಿ. ಸಿನಿಮಾದ ಸುಮಾರು 50% ಭಾಗದ ಚಿತ್ರೀಕರಣವನ್ನು ರಿಷಬ್ ಈಗಾಗಲೇ ಮುಗಿಸಿದ್ದಾರಂತೆ. ಸೆಟ್​ಗಳ ಜೊತೆಗೆ ಗ್ರೀನ್​ ಮ್ಯಾಟ್​ನ ಬಳಕೆಯನ್ನು ಜೋರಾಗಿಯೇ ಮಾಡಲಾಗಿದೆ.

‘ಕಾಂತಾರ’ ಸಿನಿಮಾದ ಶಿವನ ಕತೆ ನಡೆದಿದ್ದಕ್ಕಿಂತಲೂ ನೂರಾರು ವರ್ಷ ಹಿಂದಿನ ಕತೆಯನ್ನು ಕಾಂತಾರದ ಹೊಸ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರೆ ರಿಷಬ್ ಶೆಟ್ಟಿ. ಹಾಗಾಗಿ ಈ ಸಿನಿಮಾದಲ್ಲಿ ಗ್ರಾಫಿಕ್ಸ್, ವಿಎಫ್​ಎಕ್ಸ್ ಹಾಗೂ ಸೆಟ್​ಗಳ ಬಳಕೆ ಯಥೇಚ್ಛವಾಗಿ ಇರಲಿದೆ. ಇದೇ ಕಾರಣಕ್ಕೆ ಹಾಲಿವುಡ್​ನ ಪ್ರತಿಷ್ಠಿತ ಸಂಸ್ಥೆಯೊಂದಿಗೆ ರಿಷಬ್ ಹಾಗೂ ಹೊಂಬಾಳೆ ಒಪ್ಪಂದ ಮಾಡಿಕೊಂಡಿದೆ.

Exit mobile version