Solar
ಇದೇನಿದು, ಕರ್ನಾಟಕದಲ್ಲಿ ವಿದ್ಯುತ್ ಉಚಿತವಾಗಿದೆ ಆದರೂ ಸೋಲಾರ್ ಹಾಕಿಸಿ ಅನ್ನುತ್ತಿದ್ದಾರಲ್ಲ ಎಂದುಕೊಳ್ಳಬೇಡಿ. ಈಗ ಕರ್ನಾಟಕದಲ್ಲಿ ವಿದ್ಯುತ್ ಉಚಿತವಾಗಿದೆ ನಿಜ ಆದರೆ ಎಷ್ಟು ವರ್ಷ? ಎಷ್ಟು ಯುನಿಟ್? ಉಚಿತ ವಿದ್ಯುತ್ನ ನಿಯಮಗಳು ಈಗಾಗಲೇ ಸಂಕೀರ್ಣವಾಗಿವೆ ಮುಂದೆ ಇನ್ನಷ್ಟು ಸಂಕೀರ್ಣಗೊಳ್ಳುವುದಿಲ್ಲ ಎಂಬ ಭರವಸೆ ಇದೆ. ನೆನಪಿರಲಿ, 12 ತಿಂಗಳ ಸರಾಸರಿ ಬಳಕೆ 200 ಯೂನಿಟ್ ಒಳಗಿದ್ದರೆ ಮಾತ್ರವೇ ವಿದ್ಯುತ್ ಉಚಿತ. ಮುಂದಿನ ದಿನಗಳಲ್ಲಿ ಈ ಯುನಿಟ್ ಸಂಖ್ಯೆ ಕಡಿಮೆ ಆದರೂ ಆಶ್ಚರ್ಯವಿಲ್ಲ. ಮತ್ತು ವಿದ್ಯುತ್ ಬೆಲೆಯೂ ಪೆಟ್ರೋಲ್ ಇದ್ದಂತೆ, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆಯೇ ವಿನಃ ಕಡಿಮೆ ಆಗುವುದಿಲ್ಲ. ಮನೆಯಲ್ಲಿ ಮೂರು ಫ್ಯಾನು, ವಾಷಿಂಗ್ ಮಷಿನ್, ಫ್ರಿಡ್ಜು, ಎರಡು ಗೀಸರ್, ಒಂದು ಮೋಟಾರ್ ಪಂಪ್ ನಿಯಮಿತವಾಗಿ ಓಡಿತೆಂದರೆ 200 ಯುನಿಟ್ ಸುಲಭವಾಗಿ ಖರ್ಚಾಗಿಬಿಡುತ್ತದೆ. ಪ್ರಸ್ತುತ ವಿದ್ಯುತ್ ಉಚಿತವಾಗಿರಲಿ, ಆಗದೇ ಇರಲಿ, ಸೋಲಾರ್ ಹಾಕಿಸಿಕೊಳ್ಳುವುದು ಜಾಣತನ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಹ ಸೋಲಾರ್ ವಿದ್ಯುತ್ಗೆ ಭರಪೂರ ಬೆಂಬಲ ನೀಡುತ್ತಿವೆ. ಮೋದಿ ಅವರ ಸೂರ್ಯ ಘರ್ ಯೋಜನೆಗೆ ಭರಪೂರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಕನಿಷ್ಠ 20 ಸಾವಿರದಿಂದ ಹಿಡಿದು ಗರಿಷ್ಠ 78 ಸಾವಿರ ರೂಪಾಯಿಗಳ ವರೆಗೂ ಸಬ್ಸಿಡಿ ಹಣ ಸಿಗುತ್ತಿದೆ. ಸೋಲಾರ್ ಉದ್ಯಮದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಆಗಿರುವ ಬದಲಾವಣೆ, ಬಂದಿರುವ ಹೊಸ ತಂತ್ರಜ್ಞಾನ, ಸೋಲಾರ್ ಹಾಕಿಸಿಕೊಳ್ಳಲು ಇದು ಉತ್ತಮ ಸಮಯವನ್ನಾಗಿಸಿದೆ.
ಸೋಲಾರ್ ಎಲೆಕ್ಟ್ರಿಕ್ ಪ್ಯಾನೆಲ್ನಲ್ಲಿ ಪ್ರಮುಖ ಮೂರು ವಿಧಗಳಿವೆ. ಆಫ್ ಗ್ರಿಡ್, ಆನ್ ಗ್ರಿಡ್ ಮತ್ತು ಹೈಬ್ರಿಡ್. ಆಫ್ ಗ್ರಿಡ್ ಎಂದರೆ ನಿಮ್ಮ ಸೋಲಾರ್ ಪ್ಯಾನಲ್ನಲ್ಲಿ ಉತ್ಪಾದನೆಯಾದ ವಿದ್ಯುತ್ ಶಕ್ತಿ, ನಿಮ್ಮದೇ ಬ್ಯಾಟರಿಗಳಲ್ಲಿ ಶೇಖರಣೆಗೊಂಡು ಅದರಿಂದ ಮನೆಗೆ ವಿದ್ಯುತ್ ಶಕ್ತಿ ಪ್ರವಹಿಸುತ್ತದೆ. ಇದು ತುಸು ಹೆಚ್ಚಿನ ಬೆಲೆಯದ್ದು, ವರ್ಷಗಳು ಕಳೆದಂತೆ ಬ್ಯಾಟರಿ ಶಕ್ತಿ ಕುಂದುತ್ತಾ ಬರುತ್ತದೆ. ಬ್ಯಾಟರಿ ಶಕ್ತಿ ಪೂರ್ಣ ಕುಂದಿ ಅದನ್ನು ಬದಲಾಯಿಸಬೇಕು ಎಂದಾಗ ದೊಡ್ಡ ಮೊತ್ತವನ್ನು ತೆರಬೇಕು. ಯಾವುದೇ ಸಬ್ಸಿಡಿ ಸಿಗುವುದಿಲ್ಲ. ಆಫ್ ಗ್ರಿಡ್ ಸೋಲಾರ್ ಇನ್ಸ್ಟಾಲ್ ಮಾಡುವುದು ಸಹ ಹೆಚ್ಚಿನ ವೆಚ್ಚದ ಕಾರ್ಯ.
ಆಫ್ ಗ್ರಿಡ್ ಮಾಡೆಲ್ನಲ್ಲಿ ಬ್ಯಾಟರಿಯ ಬಳಕೆಯೇ ಆಗುವುದಿಲ್ಲ. ಸೋಲಾರ್ನಿಂದ ಉತ್ಪಾದನೆಯಾದ ಶಕ್ತಿ ನೇರವಾಗಿ ಸಮೀಪದ ಬೆಸ್ಕಾಂ ಅಥವಾ ಇನ್ಯಾವುದೇ ವಿದ್ಯುತ್ ಶಕ್ತಿ ಸಂಸ್ಥೆಯ ಪವರ್ ಗ್ರಿಡ್ಗೆ ಹೋಗುತ್ತದೆ. ಅಲ್ಲಿಂದ ಅದು ಮನೆಗೆ ವಾಪಸ್ಸಾಗುತ್ತದೆ. ಇದು ಕಡಿಮೆ ಖರ್ಚಿನದ್ದು. ಸುರಕ್ಷಿತ ಸಹ. ಭಾರತದಲ್ಲಿ ಅತಿ ಹೆಚ್ಚು ಬಳಕೆ ಆಗುತ್ತಿರುವುದು ಈ ಆನ್ ಗ್ರಿಡ್ ಮಾದರಿ. ಆದರೆ ಇದರಲ್ಲಿ ಇರುವ ಏಕೈಕ ಸಮಸ್ಯೆ ಎಂದರೆ, ಒಂದೊಮ್ಮೆ ಗ್ರಿಡ್ನಲ್ಲಿ ಪವರ್ ಸಪ್ಲೈ ಕಡಿತ ಆದರೆ ನಿಮ್ಮ ಮನೆಯಲ್ಲಿಯೂ ಕರೆಂಟ್ ಹೋಗುತ್ತದೆ. ಇನ್ನು ಹೈಬ್ರಿಡ್ ಮಾದರಿ ಮೇಲಿನ ಎರಡರ ಸಮ್ಮಿಲನ. ಇದರ ಖರ್ಚು ಸಹ ತುಸು ಹೆಚ್ಚಾಗಿಯೇ ಇದೆ. ನಮ್ಮ ವೈಯಕ್ತಿಕ ಆಯ್ಕೆ ಆನ್ ಗ್ರಿಡ್ ಮಾದರಿ.
ಸೋಲಾರ್ ಹಾಕಿಸಿಕೊಳ್ಳುವ ಮುಂಚೆ ನಿಮ್ಮ ಅಗತ್ಯತೆಯನ್ನು ತಿಳಿದುಕೊಳ್ಳುವುದು ಉತ್ತಮ. ಎಸಿ, ಲಿಫ್ಟ್ ಇದ್ದರೆ 5 ಕೆವಿ (ಕಿಲೊ ವ್ಯಾಟ್) ಅಥವಾ ಅದಕ್ಕಿಂತಲೂ ಹೆಚ್ಚಿನ ಶಕ್ತಿ ಉತ್ಪಾದಿಸುವ ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆದರೆ ತಿಂಗಳಿಗೆ 200 ಯೂನಿಟ್ ಅಥವಾ ಅದಕ್ಕಿಂತಲೂ ಕಡಿಮೆ ವಿದ್ಯುತ್ ಬಳಕೆ ಮಾಡುವವರು 3 ಕೆವಿ ಅಥವಾ ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ಸೋಲಾರ್ ಹಾಕಿಸಿಕೊಳ್ಳಬಹುದು. ನೆನಪಿರಲಿ ಅಧಿಕೃತ ಸಂಸ್ಥೆಯವರ ಮೂಲಕವೇ ಸೋಲಾರ್ ಹಾಕಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರವೇ ಸಬ್ಸಿಡಿ ಸಿಗುತ್ತದೆ ಮತ್ತು ಗುಣಮಟ್ಟವೂ ಇರುತ್ತದೆ.
ಸಬ್ಸಿಡಿ
ಸೋಲಾರ್ ಹಾಕಿಸಿಕೊಳ್ಳಲು ಸರ್ಕಾರ ಸಬ್ಸಿಡಿ ನೀಡುತ್ತದೆ. ಒಂದು ಕೆವಿಯ ಸೋಲಾರ್ ಎಲೆಕ್ರಿಕ್ ಪ್ಯಾನಲ್ ಅಳವಿಡಿಸರೆ 30 ಸಾವಿರ ರೂಪಾಯಿ ಸಬ್ಸಿಡಿಯನ್ನು ಸರ್ಕಾರ ನೀಡುತ್ತದೆ. ಎರಡು ಕೆವಿಗೆ 60 ಸಾವಿರ ಮತ್ತು 3 ಕೆವಿಗೆ 78 ಸಾವಿರ ಕೆವಿ ನೀಡಲಾಗುತ್ತದೆ. 3 ಕೆವಿಗೆ ಹೆಚ್ಚು ತೆಗೆದುಕೊಂಡಾಗಲು ಸಹ ಸಬ್ಸಿಡಿ ಮೊತ್ತ 78 ಸಾವಿರಕ್ಕೆ ಸೀಮಿತ ಆಗಿರುತ್ತದೆ. ಅಂದರೆ ಸರ್ಕಾರ ಸಬ್ಸಿಡಿ ನೀಡುವುದು 3 ಕೆವಿಗೆ ಮಾತ್ರ. ಒಂದೊಮ್ಮೆ ನೀವು 5 ಕೆವಿ ಸೋಲಾರ್ ಹಾಕಿಸಿದರೂ ಸಹ ನಿಮಗೆ ಸಿಗುವುದು 78 ಸಾವಿರ ಸಬ್ಸಿಡಿ ಮಾತ್ರ. ಆದರೆ ಇದು ಕಡಿಮೆ ಮೊತ್ತವೇನಲ್ಲ.
ಈಗ ಖರ್ಚಿನ ವಿಷಯ ನೋಡೋಣ
ಫ್ಯಾನು, ಫ್ರಿಡ್ಜು, ವಾಷಿಂಗ್ ಮಷಿನ್, ಮೋಟಾರ್ ಪಂಪ್ ಇರುವ ಮನೆಗಳಿಗೆ ಕನಿಷ್ಟ 2 ಕೆವಿ ಬೇಕೇ ಬೇಕಾಗುತ್ತದೆ. ಹಾಗಾಗಿ ನಾವು ಇಲ್ಲಿ 2 ಕೆವಿ ಹಾಗೂ ಅದರ ಮೇಲಿನ ಆನ್ ಗ್ರಿಡ್ ಸೋಲಾರ್ ಪ್ಯಾನಲ್ಗಳನ್ನು ಹಾಕಿಸಲು ಆಗುವ ಮೊತ್ತವನ್ನಷ್ಟೆ ನೋಡೋಣ. 2 ಕೆವಿ ಸೋಲಾರ್ ಆನ್ಗ್ರಿಡ್ ಹಾಕಿಸಲು 1.85 ಲಕ್ಷ ಹಣ ಖರ್ಚಾಗುತ್ತದೆ. ಸಬ್ಸಿಡಿ ಮೊತ್ತ ಕಳದರೆ 2 ಕೆವಿ ಸೋಲಾರ್ ಹಾಕಿಸಲು 1.25 ಲಕ್ಷ ರೂಪಾಯಿ ಆಗುತ್ತದೆ.
3 ಕೆವಿ ಆನ್ಗ್ರಿಡ್ ಸೋಲಾರ್ ಹಾಕಿಸಲು 2.10 ಲಕ್ಷ ಖರ್ಚಾಗುತ್ತದೆ. ಸಬ್ಸಿಡಿ ಮೊತ್ತವಾದ 78 ಸಾವಿರ ತೆಗೆದರೆ 1.32 ಲಕ್ಷ ರೂಪಾಯಿ ಮಾತ್ರವೇ ಖರ್ಚಾಗುತ್ತದೆ. ನಾಲ್ಕು ಕೆವಿಗೆ 1.92 ಲಕ್ಷ, 5 ಕೆವಿಗೆ 2.47 ಲಕ್ಷ ಖರ್ಚಾಗುತ್ತದೆ. (ಇದು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಬೆಲೆ ಇರುತ್ತದೆ. ಕರ್ನಾಟಕದಲ್ಲಿ ತುಸು ಹೆಚ್ಚಿರುತ್ತದೆ ಆದರೆ ಸಬ್ಸಿಡಿ ಮೊತ್ತದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.) ಆನ್ ಗ್ರಿಡ್ ಸೋಲಾರ್ ವ್ಯವಸ್ಥೆಯಲ್ಲಿ ಎಷ್ಟು ಕೆವಿಯ ಸೋಲಾರ್ ಪ್ಯಾನಲ್ ಅಳವಡಿಸುತ್ತೇವೆಯೋ ಅದೇ ಶಕ್ತಿಯ ಮೀಟರ್ ಸಹ ಕೂರಿಸಬೇಕಾಗುತ್ತದೆ. ಇದಕ್ಕೆ ಸ್ಥಳೀಯ ವಿದ್ಯುತ್ ಇಲಾಖೆಯಿಂದ ಮೀಟರ್ ಖರೀದಿ ಮಾಡಬೇಕು. ಇದರ ಬೆಲೆ ಪ್ರತಿ ಕೆವಿಗೆ ಅಂದಾಜಿ 5,500 ಸಾವಿರ ಆಗಿರುತ್ತದೆ. 4 ಕೆವಿ ಅಳವಡಿಸಿದರೆ ಸುಮಾರು 23 ರಿಂದ 25 ಸಾವಿರ ಹಣ ಕಟ್ಟಬೇಕಾಗುತ್ತದೆ. ಸರ್ವೆ ಸಂಖ್ಯೆಯಲ್ಲಿ ಮನೆ ಇದ್ದವರಿಗೆ ಇದು ಕಡಿಮೆಯೂ ಆಗಬಹುದು.
ವಿದ್ಯುತ್ ಮಾರಿ ಹಣ ಗಳಿಸಿ
ನೀವು 4 ಕೆವಿ ಸೋಲಾರ್ ಪ್ಯಾನಲ್ ಅಳವಡಿಸಿ ನೀವು ತಿಂಗಳಿಗೆ ಕೇವಲ 150 ಯುನಿಟ್ ಉತ್ಪಾದಿಸಿ ಇನ್ನೂ ಸಾಕಷ್ಟು ಯುನಿಟ್ ಉಳಿಯುತ್ತಿದೆ ಎಂದಾದರೆ ಅದನ್ನು ಮಾರಾಟ ಸಹ ಮಾಡಬಹುದು. ಸರ್ಕಾರವು ಪ್ರತಿ ಯೂನಿಟ್ಗೆ 2.43 ರೂಪಾಯಿ ನೀಡಿ ಖರೀದಿ ಮಾಡುತ್ತದೆ. ಸಬ್ಸಿಡಿ ತೆಗೆದುಕೊಳ್ಳದಿದ್ದರೆ 3.63 ರೂಪಾಯಿ ಹಣ ಕೊಟ್ಟು ಖರೀದಿ ಮಾಡುತ್ತದೆ. ಇದರಿಂದ ತಿಂಗಳಿಗೆ ಒಂದಿಷ್ಟು ಹಣ ಕೈ ಸೇರುತ್ತದೆ.
ಸೋಲಾರ್ನ ನಿಜವಾದ ಲಾಭ
ವಿದ್ಯುತ್ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ. ಈಗಿರುವ ಉಚಿತ ವಿದ್ಯುತ್ ಯಾವಾಗ ನಿಂತು ಹೋಗಬಹುದು ತಿಳಿಯದು ಅಥವಾ ಉಚಿತ ವಿದ್ಯುತ್ ಯುನಿಟ್ ಸಂಖ್ಯೆ ಕಡಿಮೆ ಆಗಲೂ ಬಹುದು ಹಾಗಾಗಿ ಒಂದೊಮ್ಮೆ ಸೋಲಾರ್ ಹಾಕಿಸಿಕೊಂಡರೆ ಮುಂದಿನ 25 ವರ್ಷಗಳ ವರೆಗೆ ಸತತವಾಗಿ ಅದು ವಿದ್ಯುತ್ ಉತ್ಪಾದನೆ ಮಾಡುತ್ತಲೇ ಇರುತ್ತದೆ. ಸುಮಾರು 15 ವರ್ಷಗಳ ನಂತರ ಸೋಲಾರ್ ಪ್ಯಾನಲ್ನ ಕಾರ್ಯಕ್ಷಮತೆಯಲ್ಲಿ ತುಸುವಷ್ಟೆ ಕಡಿಮೆ ಆಗಬಹುದು. ಆದರೆ ಸೋಲಾರ್ ಪ್ಯಾನಲ್ನ ಒಟ್ಟು ಕಾರ್ಯನಿರ್ವಹಿಸುವ ಕ್ಷಮತೆ ಬರೋಬ್ಬರಿ 25 ವರ್ಷ.