Sloth Virus
ಕೋವಿಡ್ ತಂದೊಡ್ಡಿದ್ದ ಭೀಕರ ಸಾವು-ನೋವಿನ ನೆನಪು ಸ್ಮೃತಿ ಪಟಲದಿಂದ ಆರಿಲ್ಲ ಆಗಲೇ ಹೊಸದೊಂದು ನಿಗೂಢ ವೈರಸ್ ಒಂದು ದಾಳಿ ಇಟ್ಟಿದೆ. ಅಮೆರಿಕ, ಯೂರೋಪ್ ದೇಶಗಳು, ಬ್ರಿಟನ್ ಇನ್ನಿತರೆ ಕೆಲವು ಮುಂದುವರೆದ ದೇಶಗಳಲ್ಲಿ ಈ ನಿಗೂಢ ಸ್ಲಾತ್ ವೈರಸ್ ಅಥವಾ ಒರೊಪೋಶೆ ವೈರಸ್ ಕಾಣಿಸಿಕೊಂಡಿದೆ. ಈ ವೈರಸ್ನ ದಾಳಿ ತುತ್ತಾದವರಿಗೆ ಯಾವುದೇ ಚಿಕಿತ್ಸೆ ಸಹ ಇಲ್ಲ! ಅಮೆಜಾನ್ ಕಾಡುಗಳಲ್ಲಿ ಕಾಣಿಸಿಕೊಂಡಿದ್ದ ಈ ವೈರಸ್ ಈಗ ತನ್ನ ಅನುವಂಶಿಕ ಗುಣಗಳಲ್ಲಿ ಬದಲಾವಣೆ ಮಾಡಿಕೊಂಡು ಇದೀಗ ಇನ್ನಷ್ಟು ಶಕ್ತಿಯುತವಾಗಿದೆ.
ದಕ್ಷಿಣ ಅಮೆರಿಕದ ಅಮೆಜಾನ್ ಪ್ರದೇಶದಲ್ಲಿ ಮಾತ್ರವೇ ಅಲ್ಲಲ್ಲಿ ಆಗಾಗ್ಗೆ ಈ ನಿಗೂಢ ಸ್ಲಾತ್ ವೈರಸ್ ಕೆಲವರಲ್ಲಿ ಕಾಣಿಸಿಕೊಂಡಿತ್ತು. ಆದರೆ 2023ರ ಬಳಿಕ ವೇಗವಾಗಿ ಹಬ್ಬುತ್ತಿರುವ ಸ್ಲಾತ್ ವೈರಸ್ ಅಮರಿಕದ ಇತರೆ ಪ್ರದೇಶಗಳಿಗೂ ವ್ಯಾಪಿಸಿಕೊಳ್ಳುತ್ತಿದೆ. ಇದು ಕೋವಿಡ್ ನಷ್ಟು ವೇಗವಾಗಿ ಈಗ ಹಬ್ಬುತ್ತಿಲ್ಲವಾದರೂ ಸಾಂಕ್ರಾಮಿಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ ಎಂಬುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವೈರಸ್ ಇನ್ನಷ್ಟುನ ವೇಗವಾಗಿ ಹಬ್ಬುವ ಆತಂಕ ವ್ಯಕ್ತಪಡಿಸಲಾಗಿದೆ.
ಈ ಸ್ಲಾತ್ ವೈರಸ್ ಅಥವಾ ಒರೊಪೋಶೆ ವೈರಸ್ನ 8000 ಪ್ರಕರಣಗಳು ಈಗಾಗಲೇ ಅಮೆರಿಕದಲ್ಲಿ ಪತ್ತೆಯಾಗಿವೆ. ಆರಂಭದಲ್ಲಿ ಅಮೆರಿಕದಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದ ಈ ವೈರಸ್ ಕೇವಲ ಏಳು ತಿಂಗಳಲ್ಲಿ ಐದು ವಿವಿಧ ದೇಶಗಳಿಗೆ ಹರಡಿದೆ. ಬ್ರೆಜಿಲ್ನಲ್ಲಿ ಇತ್ತೀಚೆಗಷ್ಟೆ ಇಬ್ಬರು ಹೆಣ್ಣು ಮಕ್ಕಳು ಈ ಸ್ಲಾತ್ ವೈರಸ್ನಿಂದ ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
Dengue: ಡೆಂಘಿಗೆ ಕಂಡು ಹಿಡಿಯಲಾಗಿದೆ ಲಸಿಕೆ, ಆದರೆ ಸಾಮಾನ್ಯರಿಗೆ ಸಿಗುವುದು ಯಾವಾಗ?
ಸೊಳ್ಳೆ ಮತ್ತು ಇತರೆ ಕೆಲವು ಕೀಟಗಳ ಕಡಿತದಿಂದ ಈ ಸ್ಲಾತ್ ವೈರಸ್ ಬರುತ್ತಿದ್ದು, ಈ ವೈರಸ್ ಅನ್ನು ರಾಷ್ಟ್ರೀಯ ವಿಪತ್ತು ಎಂದು ಅಮೆರಿಕ ಘೋಷಣೆಗೆ ಮುಂದಾಗಿದೆ. ಈಗಾಗಲೇ ವೈದ್ಯಾಧಿಕಾರಿಗಳಿಗೆ, ಆಸ್ಪತ್ರೆಗಳಿಗೆ ಈ ರೋಗದ ವಿರುದ್ಧ ವಿಶೇಷ ಚಿಕಿತ್ಸಾ ಸಲಹೆಯನ್ನು ನೀಡಲಾಗಿದೆ. ಇನ್ನು ಯೂರೋಪ್ನಲ್ಲಿ ಈ ಸ್ಲಾತ್ ವೈರಸ್ ಜುಲೈ ತಿಂಗಳಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದೆ. ಪ್ರವಾಸಿಗರೊಬ್ಬರು ಬ್ರೆಜಿಲ್ ಮತ್ತು ಕ್ಯೂಬಾಗೆ ಭೇಟಿ ನೀಡಿ ಮರಳಿದಾಗ ಅವರು ಸ್ಲಾತ್ ವೈರಸ್ ಅನ್ನು ಯೂರೋಪ್ಗೂ ಹೊತ್ತು ತಂದಿದ್ದು ಗೊತ್ತಾಗಿದೆ.
ಈ ಒರೊಪೋಶೆ ವೈರಸ್ ಅಮೆಜಾನ್ ಪ್ರದೇಶದಲ್ಲಿ ಸಾಮಾನ್ಯ. ಸೊಳ್ಳೆ ಸೇರಿದಂತೆ ಕೆಲವು ಕೀಟಗಳ ಕಡಿತದಿಂದ ಇದು ಬರುತ್ತದೆ. ಕೆಲವು ವಿಧದ ಕೋತಿಗಳು, ಸ್ಲಾತ್ ಹೆಸರಿನ ಅತ್ಯಂತ ಸೋಮಾರಿ ಪ್ರಾಣಿ, ಮರ್ಮೋಸೇಟ್ಸ್ ಹಾಗೂ ಕೆಲ ಕೀಟಗಳಲ್ಲಿಯೂ ಈ ವೈರಸ್ ಇರುತ್ತದೆ. ಈ ವೈರಸ್ ಮಾನವನ ದೇಹ ಪ್ರವೇಶಿಸಿದರೆ ವಿಪರೀತ ಜ್ವರ ಕಾಣಿಸಿಕೊಳ್ಳುತ್ತದೆ, ಸ್ನಾಯುಗಳಲ್ಲಿ, ಮೂಳೆಗಳಲ್ಲಿ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ. ಜ್ವರ ಬಂದ ವ್ಯಕ್ತಿ ತನ್ನ ಕೈ-ಕಾಲುಗಳನ್ನು ಆಡಿಸುವುದು ಸಹ ವಿಪರೀತ ಕಷ್ಟವಾಗುತ್ತದೆ. ಸ್ಲಾತ್ ಪ್ರಾಣಿಯಂತೆ ಇದ್ದಲ್ಲೆ ಇರಬೇಕಾಗುತ್ತದೆ. ಇದೇ ಕಾರಣಕ್ಕೆ ಇದನ್ನು ಸ್ಲಾತ್ ವೈರಸ್ ಎಂದು ಕರೆಯಲಾಗುತ್ತಿದೆ.