SS Rajamouli
ರಾಜಮೌಳಿ ಭಾರತದ ನಂಬರ್ 1 ನಿರ್ದೇಶಕ. ಈ ವರೆಗೂ ಒಂದೇ ಒಂದು ಫ್ಲಾಪ್ ಸಿನಿಮಾ ನೀಡಿಲ್ಲ ಈ ವ್ಯಕ್ತಿ. ಅದು ಮಾತ್ರ ಈತನ ಸಾಧನೆ ಅಲ್ಲ, ತೆಲುಗು ಚಿತ್ರರಂಗ ಮಾತ್ರವಲ್ಲ ಇಡೀ ಭಾರತ ಚಿತ್ರರಂಗವನ್ನೇ ವಿಶ್ವದರ್ಜೆಗೆ ಏರಿಸಿದ ವ್ಯಕ್ತಿ ಇದೇ ರಾಜಮೌಳಿ. ರಾಜಮೌಳಿಯ ಸಿನಿಮಾದಲ್ಲಿ ನಟಿಸಲು ಹಾಲಿವುಡ್ ನಟರು ಸಹ ಕ್ಯೂ ನಲ್ಲಿ ನಿಂತಿದ್ದಾರೆ. ಅಂಥಹಾ ಮಹಾನ್ ನಿರ್ದೇಶಕ ರಾಜಮೌಳಿಯನ್ನೇ ಬ್ಯಾನ್ ಮಾಡಿತ್ತು ತೆಲುಗು ಚಿತ್ರರಂಗ. ಈ ಬಗ್ಗೆ ಸ್ವತಃ ರಾಜಮೌಳಿಯೇ ಮಾತನಾಡಿದ್ದಾರೆ.
ತಮ್ಮ ಹಳೆಯ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಾಜಮೌಳಿ, ‘ಬಾಹುಬಲಿ ಮೊದಲ ಭಾಗ ಚಿತ್ರೀಕರಣ ಮಾಡುವಾಗ ಬಜೆಟ್ ಬಹಳ ಕಷ್ಟವಿತ್ತು. ನಾವು ಹಗಲು ರಾತ್ರಿ ಕಷ್ಟ ಪಟ್ಟು, ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಚಿತ್ರೀಕರಣ ಮಾಡಬೇಕೆಂದು ಪ್ರಯತ್ನ ಮಾಡುತ್ತಿದ್ದೆವು. ಆ ಸಮಯಕ್ಕೆ ಸರಿಯಾಗಿ ಫೆಡರೇಷನ್ ನವರು ಸ್ಟ್ರೈಕ್ ಪ್ರಾರಂಭ ಮಾಡಿದರು. ನಮ್ಮನ್ನು ಚಿತ್ರೀಕರಣ ನಿಲ್ಲಿಸುವಂತೆ ಹೇಳಿದರು’ ಎಂದು ಹಳೆಯ ಘಟನೆ ನೆನಪು ಮಾಡಿಕೊಂಡಿದ್ದಾರೆ.
‘ನಮ್ಮ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದ ನೌಕರರೆಲ್ಲ ಕೆಲಸ ನಿಲ್ಲಿಸಿಬಿಟ್ಟರು. ನಾವು ಫೆಡರೇಷನ್ ಜೊತೆ ಜಗಳ ಮಾಡಿದೆವು. ನಿಯಮದ ಪ್ರಕಾರ ಬಂದ್ ಮಾಡುವ ಒಂದು ತಿಂಗಳ ಮುಂಚೆ ನೀವು ನೊಟೀಸ್ ಕೊಡಬೇಕು ಎಂದು. ಆದರೆ ಅವರ ನಮ್ಮ ಮಾತಿಗೆ ಮಾನ್ಯತೆ ಕೊಡದೆ ಬಂದ್ ಮಾಡಿದರು. ಚಿತ್ರೀಕರಣ ನಿಲ್ಲಿಸಲೇ ಬೇಕು ಎಂದರು’ ಎಂದಿದ್ದಾರೆ ರಾಜಮೌಳಿ.
‘ಆ ಸಮಯದಲ್ಲಿ ಸುಮಾರು ಇನ್ನೂರು ಜನ ಸೆಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ನಮ್ಮ ಖರ್ಚು ಸುಮಾರು 30 ಲಕ್ಷದ ವರೆಗೆ ಬರುತ್ತಿತ್ತು. ಸಿಬ್ಬಂದಿಯೆಲ್ಲ ಕೆಲಸ ನಿಲ್ಲಿಸಿದಾಗ ನಾವು ಬೇರೆ ಕಡೆಯಿಂದ ಜನರನ್ನು ಕರೆಸಿಕೊಂಡು ಶೂಟಿಂಗ್ ಶುರು ಮಾಡಿದೆವು. ಸಿನಿಮಾಕ್ಕೆ ಎಂದೂ ಕೆಲಸ ಮಾಡದವರನ್ನು ಸಹ ನಾವು ಸೇರಿಸಿಕೊಂಡೆವು. 200 ಜನರ ಬದಲಿಗೆ 100 ಜನ ಸೆಟ್ ನಲ್ಲಿರುತ್ತಿದ್ದರು. ಆದರೆ ಪ್ರತಿದಿನ ಅಂದುಕೊಂಡಂತೆ ಶೂಟಿಂಗ್ ನಡೆಯುತ್ತಿತ್ತು. ಖರ್ಚು ಸಹ ಕಡಿಮೆ ಆಯ್ತು. 30 ಲಕ್ಷದ ಬದಲಿಗೆ 15-17 ಲಕ್ಷ ಮಾತ್ರವೇ ಖರ್ಚಾಗುತ್ತಿತ್ತು’ ಎಂದಿದ್ದಾರೆ ರಾಜಮೌಳಿ.
Akkineni Nagarjuna: 65 ವರ್ಷವಾದರೂ ಯಂಗ್ ಆಗಿರುವುದು ಹೇಗೆ? ನಟ ನಾಗಾರ್ಜುನ ಬಿಚ್ಚಿಟ್ಟರು ಆರೋಗ್ಯದ ಗುಟ್ಟು
‘ಬಂದ್ ಇದ್ದರೂ ಸಿನಿಮಾ ಫೆಡರೇಷನ್ ನಲ್ಲಿ ಇಲ್ಲದವರನ್ನು ಕರೆದುಕೊಂಡು ಶೂಟಿಂಗ್ ಮಾಡಿದ್ದಕ್ಕೆ ನಮ್ಮ ಮೇಲೆ ನಿಷೇಧ ಹೇರಿದರು. ಸಾಕಷ್ಟು ಟೀಕೆ ಸಹ ಮಾಡಿದರು. ಆದರೆ ನಮಗೆ ಕೆಲಸ ಆಗಬೇಕಿತ್ತು. ಆಗುತ್ತಿದ್ದ ನಷ್ಟವನ್ನು ತಡೆಯಬೇಕಿತ್ತು’ ಎಂದಿದ್ದಾರೆ ರಾಜಮೌಳಿ. ಆ ಮೂಲಕ ತಮ್ಮ ಮೇಲೆ ತಮ್ಮದೇ ತೆಲುಗು ಚಿತ್ರರಂಗ ನಿಷೇಧ ಹೇರಿತ್ತು ಎಂದು ಹೇಳಿಕೊಂಡಿದ್ದಾರೆ.