Success story
ಯಾರಾದರೂ ಐಶಾರಾಮಿ ಕಾರಿನಲ್ಲಿ ಹೋಗುವುದು ಕಂಡಾಗ ಅಥವಾ ಆಳು-ಕಾಳು ಇಟ್ಟುಕೊಂಡು, ಐಶಾರಾಮಿ ಮನೆಯಲ್ಲಿ ವಾಸಿಸುವುದು ಕಂಡಾಗ ಸಾಮಾನ್ಯವಾಗಿ ಜನ ಹೇಳುವ ಮಾತು ‘ಅದೃಷ್ಟವಂತ’ ಎಂದು. ಆದರೆ ಅದು ನಿಜಕ್ಕೂ ಅದೃಷ್ಟ ಮಾತ್ರ ಆಗಿರುವುದಿಲ್ಲ, ಅದು ಆ ವ್ಯಕ್ತಿಯ ಕನಿಷ್ಟ ಪಕ್ಷ ಆತನ ಹಿಂದಿನ ತಲೆಮಾರಿನ ಶ್ರಮ ಆಗಿರುತ್ತದೆ. ಶ್ರೀಂತರ ನಗರ ದುಬೈನ ನಂಬರ್ 1 ಶ್ರೀಮಂತ ಭಾರತೀಯ ರಿಜ್ವಾನ್ ಸಾಜನ್ ಅವರ ಐಶಾರಾಮಿ ಕಾರು, ಬಂಗಲೆ ನೋಡಿ ಜನ ಹೀಗೆಯೇ ಹೇಳುತ್ತಾರೆ. ಆದರೆ ಅದರ ಹಿಂದಿರುವ ಶ್ರಮವನ್ನು ಗುರುತಿಸುವವರ ಸಂಖ್ಯೆ ಕಡಿಮೆ.
ರಿಜ್ವಾನ್ ಜನಿಸಿದ್ದು ಮುಂಬೈನ ಬಡ ಕುಟುಂಬದಲ್ಲಿ. ಬಡ ಆದರೆ ದೊಡ್ಡ ಕುಟುಂಬ. ಹಾಗಾಗಿ ಓದಿನ ಜೊತೆಗೆ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುವುದು ಅನಿವಾರ್ಯ ಆಗಿತ್ತು. ಹಾಗಾಗಿ ತೀರ ಸಣ್ಣ ವಯಸ್ಸಿನಲ್ಲಿಯೇ ಪೇಪರ್ ಹಾಕುವುದು, ಹಾಕು ಹಾಕುವುದು ಇನ್ನಿತರೆ ದಿನಗೂಲಿ ಕೆಲಸಗಳನ್ನು ಮಾಡಲು ಆರಂಭಿಸಿದರು ರಿಜ್ವಾನ್.
1981 ರಲ್ಲಿ ರಿಜ್ವಾನ್ ದುಬೈಗೆ ಹೋದರು. ಅವರ ನೆಂಟರೊಬ್ಬರು ಪ್ರಾರಂಭ ಮಾಡಿದ್ದ ಕಟ್ಟಡ ನಿರ್ಮಾಣ ವಸ್ತುಗಳ ಮಾರಾಟದ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಅವಶ್ಯಕತೆ ಇತ್ತು. ಇದೇ ಕಾರಣಕ್ಕೆ ದುಬೈಗೆ ಹೋದ ರಿಜ್ವಾನ್, ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಆರಂಭಿಸಿದರು. ಆದರೆ ಶ್ರಮಜೀವಿ, ಜಾಣನೂ ಆಗಿದ್ದ ರಿಜ್ವಾನ್, ಮಾಲೀಕನ ಕೃಪೆಗೆ ಪಾತ್ರವಾಗಿ, ಅಂಗಡಿಯ ಎಲ್ಲ ಆಗು-ಹೋಗುಗಳ ಮೇಲೆ ಗಮನ ಇರಿಸುವ ಸೂಪರ್ ವೈಸರ್ ಮಾದರಿಯ ಹುದ್ದೆಗೆ ಏರಿದರು. ಆ ಮೂಲಕ ಕಟ್ಟಡ ನಿರ್ಮಾಣ ಕ್ಷೇತ್ರದ ಒಳ-ಹೊರಗು ತಿಳಿದುಕೊಳ್ಳಲು ರಿಜ್ವಾನ್’ಗೆ ಸಾಧ್ಯವಾಯ್ತು.
ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುತ್ತಿರುವಾಗಲೇ 1991 ರಲ್ಲಿ ಗಲ್ಫ್ ಯುದ್ಧ ಪ್ರಾರಂಭವಾಯ್ತು. ಆಗ ಅನಿವಾರ್ಯವಾಗಿ ದುಬೈ ಬಿಟ್ಟು ಭಾರತಕ್ಕೆ ಬಂದರು ರಿಜ್ವಾನ್. ಮುಬೈಗೆ ಬಂದ ರಿಜ್ವಾನ್, ಇಲ್ಲೇ ಕೂತು ಬ್ಯುಸಿನೆಸ್ ಮಾಡುವ ಯೋಜನೆ ಹಾಕತೊಡಗಿದರು. ಆದರೆ ಗಲ್ಪ್ ಯುದ್ಧ ಬೇಗನೆ ಮುಗಿದ ಕಾರಣ 1993 ರಲ್ಲಿ ದುಬೈಗೆ ಮರಳಿದ್ದೆ ತಮ್ಮದೇ ಒಡೆತನದ ದನುಬೆ ಗ್ರೂಪ್ ಪ್ರಾರಂಭ ಮಾಡಿದರು. ಆರಂಭದಲ್ಲಿ ಸಣ್ಣ ಕಟ್ಟಡ ನಿರ್ಮಾಣ ವಸ್ತು ಮಾರಾಟ ಅಂಗಡಿಯಾಗಿದ್ದ ಇದು 2019 ರ ವೇಳೆಗೆ ಗಲ್ಫ್ ರಾಷ್ಟ್ರಗಳ ಅತ್ಯಂತ ದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆಯಾಗಿಬಿಟ್ಟಿತು.
Beer: ಕರ್ನಾಟಕಕ್ಕೆ ಕಾಲಿಟ್ಟ ಮತ್ತೊಂದು ಬಿಯರ್ ಕಂಪೆನಿ, ಬೆಲೆ ಎಷ್ಟು?
ಕಟ್ಟಡ ನಿರ್ಮಾಣ ಕಂಪೆನಿಯಾಗಿದ್ದ ದನುಬೆ ಗ್ರೂಪ್ ಆ ನಂತರದಲ್ಲಿ ಇಂಟೀರಿಯರ್ ಡೆಕೋರೇಷನ್, ಆರ್ಕಿಟೆಕ್ಚರ್, ರಿಯಲ್ ಎಸ್ಟೇಟ್ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ತನ್ನ ವ್ಯಾಪ್ತಿ ವಿಸ್ತರಿಸಿತು. ಮಾತ್ರವಲ್ಲದೆ ಯುಎಇ ಮಾತ್ರವಲ್ಲದೆ ಇತರೆ ದೇಶಗಳಲ್ಲಿಯೂ ತನ್ನ ಸೇವೆಯನ್ನು ವಿಸ್ತರಿಸಿ ಹೋದಲ್ಲೆಲ್ಲ ತನ್ನ ಸೇವೆ, ಗುಣಮಟ್ಟದಿಂದಾಗಿ ಹೆಸರು ಮಾಡುತ್ತಲೇ ಸಾಗಿತು. ಈಗ ರಿಜ್ವಾನ್’ರ ಆಸ್ತಿ ಮೌಲ್ಯ ಸುಮಾರು 1.2 ಬಿಲಿಯನ್ ಡಾಲರ್, ರೂಪಾಯಿ ಲೆಕ್ಕದಲ್ಲಿ ಸರಿ ಸುಮಾರು 21 ಸಾವಿರ ಕೋಟಿ ರೂಪಾಯಿಗಳು.