T20 world Cup
ಟಿ20 ವಿಶ್ವಕಪ್ ನಲ್ಲಿ ಈಗಾಗಲೇ ಹಲವು ಅಚ್ಚರಿಯುತ ಫಲಿತಾಂಶಗಳು ಬಂದಿವೆ. ಯುಎಸ್‌ಎ ಪಾಕಿಸ್ತಾನವನ್ನು ಸೋಲಿಸಿದೆ. ಐರ್ಲೆಂಡ್ ತಂಡವನ್ನನು ಕೆನಡಾ ಸೋಲಿಸಿದೆ. ಇದೆಲ್ಲದಲಕ್ಕಿಂತಲೂ ಅಚ್ಚರಿಯ ಫಲಿತಾಂಶ ನಿನ್ನೆ (ಜೂನ್ 7) ತಡ ರಾತ್ರಿಯ ಪಂದ್ಯದಲ್ಲಿ ಬಂದಿದೆ. ದೈತ್ಯ ನ್ಯೂಜಿಲೆಂಡ್ ತಂಡದ ವಿರುದ್ಧ ಅಪ್ಘಾನಿಸ್ತಾನ ತಂಡ ಭಾರಿ ಅಂತರದ ಜಯ ಕಂಡಿದೆ. ಅಪ್ಘಾನಿಸ್ತಾನಕ್ಕೆ ಇದು ಈ ಪಂದ್ಯಾವಳಿಯ ಎರಡನೇ ಜಯವಾಗಿದ್ದು ಈಗ ಸಿ ಗುಂಪಿನಲ್ಲಿ ಟಾಪ್ ಸ್ಥಾನದಲ್ಲಿದೆ.
ಗಯಾನಾನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಆರಂಭ ಪಡೆದ ಅಫ್ಘಾನಿಸ್ತಾನ ಮೊದಲ ವಿಕೆಟ್‌ಗೆ 103 ರನ್ ಕಲೆ ಹಾಕಿತು. 41 ಬಾಲ್ ಗೆ 43 ರನ್ ಕಲೆ ಹಾಕಿದ್ದ ಇಬ್ರಾಹಿನ್ ಜದ್ರಾನ್ ಔಟ್ ಆದರು. ಬಳಿಕ ಬಂದ ಅಜ್ಮತ್ತುಲ್ಲ ಕೇವಲ 13 ಬಾಲ್ ಗೆ 22 ರನ್ ಭಾರಿಸಿದರು. ಆದರೆ ಅಫ್ಘಾನಿಸ್ತಾನ ಉತ್ತಮ ಮೊತ್ತ ಕಲೆ ಹಾಕುವಂತೆ ಮಾಡಿದ್ದು ಓಪನರ್ ಗುರ್ಬಾಜ್. ಅವರು ಕೇವಲ 56 ಚೆಂಡುಗಳಲ್ಲಿ 80 ರನ್ ಕಲೆ ಹಾಕಿ ಔಟ್ ಆದರು. 20 ಓವರ್‌ಗಳ ಮುಕ್ತಾಯಕ್ಕೆ ಅಫ್ಘಾನಿಸ್ತಾನ ಆರು ವಿಕೆಟ್ ನಷ್ಟಕ್ಕೆ 159 ರನ್ ಗಳನ್ನು ಕಲೆ ಹಾಕಿತು.
ರಾಹುಲ್ ದ್ರಾವಿಡ್ ಅವರನ್ನು ತಡೆಯಲು ಯತ್ನಿಸಿದೆ ಆದರೆ…: ರೋಹಿತ್ ಶರ್ಮಾ ಭಾವುಕ
ಗೆಲ್ಲಲು 160 ರನ್ ಗಳ ಗುರಿ ಪಡೆದು ಬ್ಯಾಟಿಂಗ್ ಗೆ ಇಳಿದ ನ್ಯೂಜಿಲೆಂಡ್ ಗೆ ಅಪ್ಘಾನಿಸ್ತಾನ ಆರಂಭಿಕ ಆಘಾತ ನೀಡಿತು. ಮೊದಲ ಓವರ್ ನ ಮೊದಲ ಚೆಂಡಿನಲ್ಲೇ ನ್ಯೂಜಿಲೆಂಡ್ ನ ಆರಂಭಿಕ ಬ್ಯಾಟ್ಸ್ ಮನ್ ಫಿನ್ ಆಲೆನ್, ಅಫ್ಘಾನ್ ನ ಎಡಗೈ ವೇಗಿ ಫಜಲ್ಲಕ್ ಫಾರೂಕಿಯ ಬಾಲಿಗೆ ಕ್ಲೀನ್ ಬೌಲ್ಡ್ ಆದರು. ಅದಾದ ಬಳಿಕ ನ್ಯೂಜಿಲೆಂಡ್ ನ ಯಾವೊಬ್ಬ ಬ್ಯಾಟ್ಸ್ ಮನ್ ಸಹ ಹೆಚ್ಚು ಸಮಯ ಸ್ಕ್ರೀಸ್ ನಲ್ಲಿ ನಿಲ್ಲಲೇ ಇಲ್ಲ. ಒಬ್ಬರ ಹಿಂದೊಬ್ಬರು ಪವಿಲಿಯನ್ ಗೆ ಪರೇಡ್ ಮಾಡಿದರು.
ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ ಹಾಗೂ ಬೌಲರ್ ಮ್ಯಾಟ್ ಹೆನ್ರಿ ಇಬ್ಬರೇ ಎರಡಂಕಿಯ ರನ್ ಹೊಡೆದಿದ್ದು, ಅದೂ ಒಬ್ಬರು 18 ಮತ್ತೊಬ್ಬರು 12 ಮಾತ್ರ. ಕೇವಲ 75 ರನ್ ಗಳಿಗೆ ನ್ಯೂಜಿಲೆಂಡ್ ತಂಡ ಆಲ್ ಔಟ್ ಆಯ್ತು. ಅಪ್ಘಾನಿಸ್ತಾನದ ಮೂವರು ಬೌಲರ್ ಗಳು ಎಲ್ಲ ಬ್ಯಾಟ್ಸ್ ಮನ್‌ಗಳ ವಿಕೆಟ್ ಕಬಳಿಸಿದರು. ರಷಿದ್ ಖಾನ್ 4 ಓವರ್ ಬೌಲಿಂಗ್ ಮಾಡಿ 17 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಅಪ್ಘಾನಿಸ್ತಾನದ ಎಡಗೈ ವೇಗಿ ಫಾರೂಕಿ ಕೇವಲ 3.2 ಓವರ್ ಬೌಲಿಂಗ್ ಮಾಡಿ 17 ರನ್ ನೀಡಿ 4 ವಿಕೆಟ್ ತೆಗೆದರು. ಇನ್ನು ನಬಿ 2 ವಿಕೆಟ್ ಪಡೆದರು. ಇದು ಟಿ 20 ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ನ ಅತ್ಯಂತ ಕಡಿಮೆ ಮೊತ್ತವಾಗಿದೆ.