Site icon Samastha News

Tata Car: ಕಡಿಮೆಯಾಗುತ್ತಿದೆ ಟಾಟಾ ಜನಪ್ರಿಯತೆ, ಕಾರುಗಳ ಮಾರಾಟದಲ್ಲಿ ಇಳಿಕೆ

Tata Car

Tata Car

ಇಂಡಿಕಾ, ಟಾಟಾ ಸುಮೊ ಇವೇ ಮೊದಲಾದ ‘ಟ್ಯಾಕ್ಸಿ’ ಮಾದರಿ‌ಕಾರುಗಳಿಗೆ ಸೀಮಿತವಾಗಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದ ಟಾಟಾ ಮೋಟರ್ಸ್ ಕೆಲ ವರ್ಷದ ಹಿಂದೆ ಬೌನ್ಸ್ ಬ್ಯಾಕ್ ಮಾಡಿತ್ತು. ನೆಕ್ಸಾನ್, ಪಂಚ್ ಇನ್ನಿತರೆ ಕಾರುಗಳ ಮೂಲಕ ಹೊಸ ಭರವಸೆ ಮೂಡಿಸಿತ್ತು. ಆದರೆ ಇತ್ತೀಚೆಗೆ ಟಾಟಾ ಕಾರುಗಳ ಜನಪ್ರಿಯತೆ ಮತ್ತೆ ಕುಗ್ಗಲು ಪ್ರಾರಂಭಿಸಿದಂತಿದೆ‌ ಟಾಟಾ ಕಾರುಗಳ ಮಾರಾಟದಲ್ಲಿ ಇಳಿಕೆ ಕಂಡು ಬಂದಿದೆ.

ಈತ್ತೀಚೆಗಿನ ವರ್ಷಗಳಲ್ಲಿ ನೆಕ್ಸಾನ್ ಮತ್ತು ಪಂಚ್ ಕಾರುಗಳನ್ನು ಟಾಟಾ ಅತ್ಯಧಿಕವಾಗಿ ಮಾರಾಟ ಮಾಡಿತ್ತು. ಸರಿಯಾದ ಬೆಲೆ, ಭಾರತೀಯ ರಸ್ತೆಗಳಿಗೆ ಒಗ್ಗುವ ಹಾಗೂ ಭಾರತೀಯರಿಗೆ ತೃಪ್ತಿ ತರುವ ಮೈಲೇಜ್ ಅನ್ನು ಹೊಂದಿದ್ದ ಈ ಕಾರುಗಳು ಕಳೆದ ಕೆಲ ವರ್ಷಗಳಲ್ಲಿ ಬಿಸಿ ದೋಸೆಯಂತೆ ಬಿಕರಿಯಾದವು. ಆದರೆ ಇತ್ತೀಚೆಗೆ ಇದೇ ಕಾರುಗಳ ಮಾರಾಟದಲ್ಲಿ ತೀವ್ರ ಇಳಿಕೆ ಕಂಡು ಬಂದಿದೆ.

ಆಗಸ್ಟ್ ತಿಂಗಳ ಕಾರು ಮಾರಾಟ ಪಟ್ಟಿಯಲ್ಲಿ ಟಾಟಾ ಪಂಚ್ ಐದನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಕೆಲ ತಿಂಗಳಿನಿಂದಲೂ ಪಂಚ್ ಉತ್ತಮ ಸ್ಥಾನದಲ್ಲಿತ್ತು. ಆಗಸ್ಟ್ ತಿಂಗಳಲ್ಲಿ 15,643 ಪಂಚ್ ಕಾರುಗಳು ಮಾರಾಟವಾಗಿವೆ. ಕಳೆದ ವರ್ಷ ಆಗಸ್ಟ್ ನಲ್ಲಿ ಇದಕ್ಕಿಂತಲೂ ಕಡಿಮೆ ಪಂಚ್ ಕಾರುಗಳು ಮಾರಾಟವಾಗಿದ್ದವು. ಆದರೆ ಈ ವರ್ಷ ಒಟ್ಟಾರೆ ಕಾರು ಮಾರಾಟ ಹೆಚ್ಚಾಗಿದೆ. ಸರಾಸರಿ ಲೆಕ್ಕ ಹಾಕಿದರೆ ಪಂಚ್ ಮಾರಾಟ ಕಡಿಮೆ ಆಗಿದೆ.

ಇನ್ನು ಟಾಟಾದ ನೆಕ್ಸಾನ್ ಕಾರುಗಳ ಮಾರಾಟವಂತೂ ತೀವ್ರವಾಗಿ ಕುಸಿದಿದೆ. ಪಟ್ಟಿಯಲ್ಲಿ ನೆಕ್ಸಾನ್ 10ನೇ ಸ್ಥಾನಕ್ಕೆ ಕುಸಿದಿದೆ. ಆಗಸ್ಟ್ ತಿಂಗಳಲ್ಲಿ ಒಟ್ಟು 8049 ಟಾಟಾ ನೆಕ್ಸಾನ್ ಕಾರುಗಳಷ್ಟೆ ಮಾರಾಟವಾಗಿದೆ. ಅದಕ್ಕೂ ಹಿಂದಿನ ತಿಂಗಳಲ್ಲಿ 12289 ನೆಕ್ಸಾನ್ ಕಾರುಗಳು ಮಾರಾಟಗೊಂಡಿದ್ದವು. ನೆಕ್ಸಾನ್ ಸಹ ಜುಲೈ ತಿಂಗಳಲ್ಲಿ 6ನೇ ಸ್ಥಾನದಲ್ಲಿತ್ತು. ಒಂದೇ ತಿಂಗಳಲ್ಲಿ ಹತ್ತನೇ ಸ್ಥಾನಕ್ಕೆ ಕುಸಿದಿದೆ.

Mantri Developers: ಮಂತ್ರಿ ಮಾಲೀಕನ ವಿರುದ್ಧ ಜಾಮೀನು‌ರಹಿತ ವಾರೆಂಟ್

ಟಾಟಾ ಸಂಸ್ಥೆಯ ಎಲ್ಲ ಕಾರುಗಳ ಮಾರಾಟದಲ್ಲಿಯೂ ಸಹ ಕುಸಿತ ಉಂಟಾಗಿದೆ‌‌. ಕಳೆದ ವರ್ಷ ಆಗಸ್ಟ್ ನಲ್ಲಿ ಆಗಿದ್ದ ಸೇಲ್ಸ್ ನ ಲೆಕ್ಕ ಹಿಡಿದರೆ ಟಾಟಾ ಸಂಸ್ಥೆಯ ಸೇಲ್ಸ್ ನಲ್ಲಿ 3% ಕಡಿತವಾಗಿದೆ.  ಈಗ ಟಾಟಾ ಸಂಸ್ಥೆ ಕರ್ವ್ ಗಾಡಿಯನ್ನು ಹೊರತಂದಿದ್ದು, ಈ ಹೊಸ ಕಾರು ಟಾಟಾದ ಸೇಲ್ಸ್ ಹೆಚ್ಚುವಂತೆ ಮಾಡುತ್ತದೆಯೇ ಕಾದು ನೋಡಬೇಕಿದೆ.

Exit mobile version