The Rameshwaram cafe
ಕಳೆದ ಕೆಲ ವರ್ಷದಿಂದ ಏಕಾ ಏಕಿ ಜನಪ್ರಿಯವಾಗಿದೆ ಬೆಂಗಳೂರಿನ ‘ದಿ ರಾಮೇಶ್ವರಂ ಕೆಫೆ’. ಗುಣಮಟ್ಟದ ಆಹಾರ, ಗುಣಮಟ್ಟದ ಗ್ರಾಹಕ ಸೇವೆಯಿಂದ ಪ್ರತಿದಿನ ಸಾವಿರಗಳ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ತಿಂಗಳಿಗೆ 4 ಕೋಟಿ ವ್ಯವಹಾರ ಮಾಡುವ ಈ ಹೋಟೆಲ್ ನ ಬಗ್ಗೆ ಯೂಟ್ಯೂಬ್ ನಲ್ಲೊ ಕೇಸ್ ಸ್ಟಡಿಗಳೆ ಇವೆ. ಈ ಹೋಟೆಲ್ ನಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೆಲ್ಲದರ ನಡುವೆ ರಾಮೇಶ್ವರಂ ಕೆಫೆಯ ಮಾಲೀಕ ರಾಘವೇಂದ್ರ ರಾವ್ ಕ್ಷಮೆ ಕೇಳಿದ್ದಾರೆ.
ಆಗಿದ್ದಿಷ್ಟೆ, ‘ದಿ ರಾಮೇಶ್ವರಂ ಕೆಫೆ’ ತೆಲಂಗಾಣದ ಹೈದರಾಬಾದ್ ನಲ್ಲಿ ಹೊಸ ಬ್ರ್ಯಾಂಚ್ ಸ್ಥಾಪಿಸಿ ಅಲ್ಲಿಯೂ ಒಳ್ಳೆ ಬ್ಯುಸಿನೆಸ್ ನಡೆಸುತ್ತಿತ್ತು. ಆದರೆ ಇತ್ತೀಚೆಗೆ ಹೈದರಾಬಾದ್ ಆಹಾರ ಸುರಕ್ಷತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆಗ ಹೋಟೆಲ್ ನಲ್ಲಿ ಅವಧಿ ಮುಗಿದ ಹಾಲು, ಮೊಸರಿನ ಪ್ಯಾಕೇಟ್ ಗಳು ಲಭ್ಯವಾಗಿದ್ದವು. ಕಳಪೆ ಗುಣಮಟ್ಟದ ಕೆಲವು ತರಕಾರಿ, ದಿನಸಿ ಪದಾರ್ಥಗಳು ಪತ್ತೆಯಾಗಿದ್ದವು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ, ಸಾಮಾಜಿಕ ಜಾಲತಾಣದಲ್ಲಿ ‘ದಿ ರಾಮೇಶ್ವರಂ ಕೆಫೆ’ ಟೀಕೆಗೆ ಗುರಿಯಾಗಿತ್ತು.
ಇದೇ ಕಾರಣಕ್ಕೆ ‘ದಿ ರಾಮೇಶ್ವರಂ ಕೆಫೆ’ಯ ಮಾಲೀಕ ರಾಘವೇಂದ್ರ ರಾವ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಗ್ರಾಹಕರ ಕ್ಷಮೆ ಕೇಳಿದ್ದಾರೆ. ಈಗ ಆಗಿರುವ ತಪ್ಪನ್ನು ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಗರೂಕತೆಯಿಂದ ಸೇವೆ ನಿಒಡುವುದಾಗಿ ಹೇಳಿದ್ದಾರೆ. ತಾವು ಅಬ್ದುಲ್ ಕಲಾಂರ ಆದರ್ಶಗಳನ್ನಿಟ್ಟುಕೊಂಡು ಉದ್ಯಮ ನಡೆಸುತ್ತಿದ್ದು, ನಮ್ಮ ಗುರಿ ಅಂತರಾಷ್ಟ್ರೀಯ ಮಟ್ಟದ್ದಾಗಿದೆ. ಹೀಗಿರುವಾಗ ಇಂಥಹಾ ಸಣ್ಣ ಪುಟ್ಟ ತಪ್ಪುಗಳು ಸಹ ಆಗಬಾರದಿತ್ತು, ಆದರೆ ಕಣ್ತಪ್ಪಿನಿಂದ ಹೀಗಾಗಿದೆ ಎಂದಿದ್ದಾರೆ.
ನಾವು ಅಡುಗೆಯಲ್ಲಿ ಅತ್ಯುತ್ತಮ ಗುಣಮಟ್ಟದ (ಪ್ರೀಮಿಯಂ) ವಸ್ತುಗಳನ್ನೇ ಬಳಸುತ್ತ ಬಂದಿದ್ದೇವೆ. ಈಗ ನಡೆದಿರುವುದನ್ನು ನಾನು ಹಾಗೂ ನನ್ನ ತಂಡ ಪಾಠವಾಗಿ ಸ್ವೀಕರಿಸಲಿದೆ. ಇನ್ನು ಮುಂದೆ ನಮ್ಮ ಯಾವುದೇ ಹೆಜ್ಜೆಯಲ್ಲಿ ತಪ್ಪಿಲ್ಲದಂತೆ ನಾವು ನೋಡಿಕೊಳ್ಳಲಿದ್ದೇವೆ’ ಎಂದಿದ್ದಾರೆ ರಾಘವೇಂದ್ರ ರಾವ್.