Personal Finance: ಹಣ ಗಳಿಸಲು, ಉಳಿಸಲು ಈ ಗುಣಗಳು ನಿಮ್ಮಲ್ಲಿ ಇರಲೇ ಬೇಕು

0
168
Personal Finance

Personal Finance

ಆರ್ಥಿಕ ಸಬಲತೆ ಅತ್ಯಂತ ಅವಶ್ಯಕ. ದಿನೇ ದಿನೇ ಏರುತ್ತಿರುವ ದರಗಳ ನಡುವೆ ಹಣ ಗಳಿಸುವುದು, ಉಳಿಸುವುದು ಎರಡೂ ಸಹ ಕಷ್ಟವೇ ಆಗಿಬಿಟ್ಟಿದೆ‌. ಆದರೆ ಕೆಲವು ಗುಣಗಳನ್ನು ಬೆಳೆಸಿಕೊಂಡರೆ ಈಗ ಇರುವುದಕ್ಕಿಂತಲೂ ಉತ್ತಮವಾದ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು. ವಿಶೇಷವಾಗಿ ಭವಿಷ್ಯದಲ್ಲಿ ಶ್ರೀಮಂತರಾಗಲು ಕೆಲವು ಆರ್ಥಿಕ ಶಿಸ್ತುಗಳನ್ನು ಪಾಲಿಸಲೇ ಬೇಕಿದೆ.

ಅನವಶ್ಯಕ ಖರ್ಚಿಗೆ ಕಡಿವಾಣ

ಅನಗತ್ಯ ಖರ್ಚು ಅತ್ಯಂತ ಅಪಾಯಕಾರಿ. ಅದರಲ್ಲೂ ಕಡಿಮೆ ಆದಾಯ ಅಥವಾ ಸಂಬಳ ಹೊಂದಿರುವವರಿಗಂತೂ ಅನಗತ್ಯ ಖರ್ಚು ಶಾಪವಾಗಿ ಪರಿಣಮಿಸುತ್ತದೆ. ಅನಗತ್ಯ ಖರ್ಚು ಕಡಿಮೆ ಮಾಡಲು ದೊಡ್ಡ ಯೋಜನೆಯೆಲ್ಲ ಬೇಕಾಗಿಲ್ಲ, ಇಚ್ಛಾಶಕ್ತಿ ಸಾಕು. ಉದಾಹರಣೆಗೆ ಹೇಳಬೇಕೆಂದರೆ ಹೊರಗೆ ಊಟ ಮಾಡುವ ಬದಲಿಗೆ ಬಾಕ್ಸ್ ತೆಗೆದುಕೊಂಡು ಹೋಗುವುದು. ಇಷ್ಟದ ದೊಡ್ಡ ಕಾರು ಖರೀದಿ ಮಾಡುವ ಬದಲು ಸಣ್ಣ ಕಾರು ಖರೀದಿ ಮಾಡುವುದು. ಹೀಗೆ ಖರ್ಚು ಕಡಿಮೆ ಮಾಡಲು ಹಲವು ದಾರಿಗಳಿರುತ್ತವೆ. ಅವನ್ನು ಆಯ್ಕೆ ಮಾಡಿಕೊಳ್ಳುವ ಆತ್ಮಸ್ಥೈರ್ಯ ಇರಬೇಕಷ್ಟೆ.

ಆರ್ಥಿಕ ಗುರಿಗಳನ್ನು ಇಟ್ಟುಕೊಳ್ಳಿ

ವರ್ಷದಿಂದ ವರ್ಷಕ್ಕೆ ಕೆಲವು ಗುರಿಗಳನ್ನು ಇಟ್ಟುಕೊಳ್ಳಿ. ಈ ವರ್ಷ ಇಷ್ಟು ಹಣ ಉಳಿಸದ್ದೀನಿ ಅಥವಾ ಗಳಿಸಿದ್ದೀನಿ. ಮುಂದಿನ ವರ್ಷಕ್ಕೆ ಇಷ್ಟು ಗಳಿಸುತ್ತೀನಿ ಅಥವಾ ಉಳಿಸುತ್ತೀನಿ ಅಥವಾ ಹೂಡಿಕೆ ಮಾಡುತ್ತೀನಿ ಎಂಬ ಗುರಿಗಳನ್ನು ಹಾಕಿಕೊಳ್ಳಿ. ಬಹಳ ದೊಡ್ಡ ಅಥವಾ ಅಸಾಧ್ಯವಾದ ಗುರಿಗಳನ್ನು ಹಾಕಿಕೊಳ್ಳಬೇಡಿ, ಅದು ಕೈಗೂಡದೇ ಇದ್ದಾಗ ಆಗುವ ನಿರಾಸೆಯಿಂದ ನೀವು ಆರ್ಥಿಕ ಶಿಸ್ತನ್ನೇ ಕೈ ಬಿಟ್ಟು ಬಿಡುವ ಅಪಾಯ ಇರುತ್ತದೆ. ಕಾರ್ಯಸಾಧುವಾದ ಗುರಿಗಳನ್ನಷ್ಟೆ ಹಾಕಿಕೊಂಡು, ಅದರ ಈಡೇರಿಕೆಗೆ ಸತತ ಪ್ರಯತ್ನ ಮಾಡಿ.

ನಿಮಗೆ ನೀವೆ ಬಜೆಟ್ ಹಾಕಿಕೊಳ್ಳಿ

ಮೊದಲು ನಿಮ್ಮ ಖರ್ಚುಗಳನ್ನೆಲ್ಲ ಬರೆದಿಡಿ. ಬಳಿಕ ನಿಮಗೆ ನೀವೆ ಒಂದು ಬಜೆಟ್ ಹಾಕಿಕೊಳ್ಳಿ. ಪ್ರದಿ ತಿಂಗಳು ನಾನು ಇಂಥಹದ್ದಕ್ಕೆ ಇಷ್ಟು ಖರ್ಚು ಮಾಡುತ್ತೇನೆ ಎಂದು ನಿಶ್ಚಯಿಸಿ. ಯಾವುದಕ್ಕೆ ಹೆಚ್ಚು ಖರ್ಚಾಗುತ್ತಿದೆ ಗಮನಿಸಿ ಅಲ್ಲಿ ಹಣ ಉಳಿಸಲು ಪ್ರಯತ್ನಿಸಿ. ಹಾಕಿಕೊಂಡಿರುವ ಬಜೆಟ್ ಗೆ ಅನುಗುಣವಾಗಿಯೇ ನಡೆದುಕೊಳ್ಳಲು ಪ್ರಯತ್ನಿಸಿ.

ಮೊದಲು ಹೂಡಿಕೆ ನಂತರ ಖರ್ಚು

ಬಂದ ಸಂಬಳ ಅಥವಾ ಆದಾಯವನ್ನೆಲ್ಲ ಖರ್ಚು ಮಾಡಬೇಡಿ. ಮೊದಲು ದಿನನಿತ್ಯದ ಅಗತ್ಯಕ್ಕೆ ಅಂದರೆ ಬಾಡಿಗೆ, ದಿನಸಿ, ಪೆಟ್ರೋಲ್, ಮೊಬೈಲ್ ಗೆ ಬೇಕಾದ ಹಣ ಎತ್ತಿಟ್ಟುಕೊಳ್ಳಿ. ಉಳಿದ ಹಣದಲ್ಲಿ 90% ಹೂಡಿಕೆ ಮಾಡಿ, ಆ ಬಳಿಕ ಉಳಿದ 10% ಹಣವನ್ನು ವೈಯಕ್ತಿಕ ಕಾರಣಗಳಿಗೆ ಖರ್ಚು ಮಾಡಿ. ಮೊದಲು ಖರ್ಚು ಮಾಡಿ ಉಳಿದ ಹಣವನ್ನು ಹೂಡಿಕೆ ಮಾಡುವುದು ಬೇಡ.

ಜಾಣತನದ ಹೂಡಿಕೆ ಮಾಡಿ

ಹೂಡಿಕೆ ವಿಚಾರದಲ್ಲಿ ಸಾಕಷ್ಟು ಎಚ್ಚರದಿಂದ ಇರಿ. ಯಾವುದೇ ಕಡಿಮೆ ಸಮಯದ ಅಂದರೆ ವರ್ಷದಲ್ಲಿ ಹಣ ಡಬಲ್ ಎನ್ನುವಂಥಹಾ ಸ್ಕೀಂನಲ್ಲಿ ಹೂಡಿಕೆ ಮಾಡಬೇಡಿ. ಲಾಂಗ್ ಟರ್ಮ್ ಹೂಡಿಕೆ ಮಾಡಿ. ಹೂಡಿಕೆ ಹಳತಾದಷ್ಟು ಮರಳಿ‌ಬರುವ ಹಣದ ಗಂಟು ದೊಡ್ಡದಾಗುತ್ತದೆ. ಹೂಡಿಕೆ ಮಾಡುವ ಮುನ್ನ ಪರಿಶೀಲನೆ ಮಾಡಿ, ವಿಚಾರಿಸಿ, ಸಲಹೆ ಪಡೆದು ಹೂಡಿಕೆ ಮಾಡಿ.

ಅಪ್ ಡೇಟೆಡ್ ಆಗಿರಿ

ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್, ಚಿನ್ನದ ಮಾರುಕಟ್ಟೆ, ರಾಜಕೀಯ ಸ್ಥಿತಿ ಗತಿ, ದೇಶದ ಜಿಡಿಪಿ, ಒಟ್ಟಾರೆ ಬ್ಯುಸಿನೆಸ್ ಅವಕಾಶಗಳು ಹೀಗೆ ಎಲ್ಲ ವಿಷಯಗಳ ಬಗ್ಗೆ ಕಣ್ಣಿಟ್ಟಿರಿ, ನಿಮ್ಮನ್ನು ನೀವು ಜ್ಞಾನವಂತರನ್ನಾಗಿ ಮಾಡಿಕೊಳ್ಳಿ. ಇದರಿಂದ ಮೋಸ ಹೋಗುವುದು ತಪ್ಪುತ್ತದೆ. ಹೂಡಿಕೆಯ ಅವಕಾಶಗಳು ಗೋಚರಿಸುತ್ತವೆ.

ಸಾಲ ಪಡೆಯುವಾಗ ಎಚ್ಚರ

ಸಾಲದ ವಿಷಯದಲ್ಲಿ ಎಚ್ಚರಿಕೆ ಇರಲಿ. ಬ್ಯಾಂಕ್, ಸಹಕಾರ ಸಂಘ ಈ ರೀತಿಯ ಸಂಸ್ಥೆಗಳಿಂದಲೇ ಸಾಲ ಪಡೆಯಿರಿ. ಖಾಸಗಿ ವ್ಯಕ್ತಿ ಅಥವಾ ಫೈನ್ಯಾನ್ಸ್ ಕಂಪೆನಿಗಳಿಂದ ಸಾಲ ಪಡೆಯುವುದಾದರೆ ಕಡಿಮೆ ಬಡ್ಡಿ ಮನನ ಮೊತ್ತ ಇದ್ದರಷ್ಟೆ ಸಾಲ ಪಡೆಯಿರಿ. ಸಾಲ ಪಡೆಯುವ ಮುನ್ನ ಸಾಲ ಹೇಗೆ ತೀರಿಸಬೇಕು, ಇಎಂಐ ಹೇಗೆ ಕಟ್ಟಬೇಕು ಎಂಬ ನೀಲನಕ್ಷೆ ನಿಮ್ಮ ಬಳಿ ಇರಲಿ. ಇಲ್ಲವಾದರೆ ಸಾಲ ಬೇಡವೇ ಬೇಡ.

SIP: ಹೂಡಿಕೆ ಮಾಡಿ ಮರೆತೇ ಹೋಗಿದ್ದ ಹಣದಿಂದ ಕೋಟ್ಯಧಿಪತಿಯಾದ!

ವಿಮೆಗಳನ್ನು ಮಾಡಿಸಿ

ಎಷ್ಟೇ ಜಾಣತನದಿಂದ ಹೂಡಿಕೆ ಮಾಡಿ, ಶಿಸ್ತಿನಿಂದ ಉಳಿತಾಯ ಮಾಡಿದರು ಎದುರಾಗುವ ಕೆಲವು ತುರ್ತು ಪರಿಸ್ಥಿತಿಗಳು ಎಲ್ಲವನ್ನೂ ಹಾಳು ಮಾಡಿ ಬಿಡುತ್ತವೆ. ಹಾಗಾಗಿ ಆರೋಗ್ಯ ವಿಮೆ ಮತ್ತು ಜೀವ ವಿಮೆ ಮಾಡಿಸಿಕೊಳ್ಳಿ. ವಿಮೆಯನ್ನು ಖರ್ಚು ಎಂದಲ್ಲದೆ ಹೂಡಿಕೆ ಎಂದೇ ಗುರುತಿಸಿ. ವಿಮೆ ಖರೀದಿಸುವಾಗಲೂ ಸಹ ಪರಿಶೀಲಿಸಿ, ಅಧ್ಯಯನ ನಡೆಸಿ, ಸಲಹೆ ಪಡೆದು ಹೂಡಿಕೆ ಮಾಡಿ.

LEAVE A REPLY

Please enter your comment!
Please enter your name here