Site icon Samastha News

Bangladesh: ಹೊತ್ತಿ ಉರಿಯುತ್ತಿದೆ ಬಾಂಗ್ಲಾದೇಶ, ಕಾರಣವೇನು? 

Bangladesh

Bangladesh

Bangladesh

ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ. ದೇಶದ ಯುವಕರು ಕೈಯಲ್ಲಿ ಆಯುಧಗಳನ್ನು ಹಿಡಿದು ರಸ್ತೆಗೆ ಇಳಿದಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ದೇಶದ ಎಲ್ಲ ವಿಶ್ವವಿದ್ಯಾಲಯಗಳಿಗೆ ಬಾಕಿಲು ಹಾಕಿಸಲಾಗಿದೆ. ಎಲ್ಲ ಟಿವಿ ಚಾನೆಲ್ ಗಳನ್ನು ಮುಚ್ಚಿಸಲಾಗಿದೆ. ದೇಶದಲ್ಲಿ ನಡೆದಿರುವ ಹಿಂಸಾಚಾರದಲ್ಲಿ 40 ಕ್ಕೂ ಹೆಚ್ಚು ಮಂದಿ ಅಸುನೀಗಿದ್ದು, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನೆಯಿಂದಾಗಿ ಸಾವಿರಾರು ಕೋಟಿ ಆಸ್ತಿ ನಷ್ಟವಾಗಿದೆ. ಪ್ರತಿಭಟನೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸರ್ಕಾರ ಏನೂ ಮಾಡದ ಸ್ಥಿತಿ ತಲುಪಿದೆ. ಆದರೆ ಬಾಂಗ್ಲಾದೇಶದ ಯುವಕರು ಇಷ್ಟು ಹಿಂಸಾತ್ಮಕ ಪ್ರತಿಭಟನೆಗೆ ಇಳಿಯಲು ಕಾರಣವೇನು? ತಿಳಿಯೋಣ ಬನ್ನಿ.

1971 ರಲ್ಲಿ ಇಂದಿರಾ ಗಾಂಧಿಯ ದಿಟ್ಟ ನಿರ್ಣಯದಿಂದ, ಭಾರತೀಯ ಸೇನೆಯ ಕೆಚ್ಚೆದೆಯ ಹೋರಾಟದಿಂದ ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದುಕೊಂಡಿತು. ಅದೇ ವರ್ಷ ಬಾಂಗ್ಲಾದೇಶ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಘೋಷಣೆ ಮಾಡಿತು. ಆ ಮೀಸಲಾತಿಯೇ ಈಗ ಬಾಂಗ್ಲಾದೇಶ ಹೊತ್ತಿ ಉರಿಯುವಂತೆ ಮಾಡಿದೆ. ಭಾರತದಲ್ಲಿ ಮೀಸಲಾತಿಗಾಗಿ ಅಗಾಗ್ಗೆ ಹೋರಾಟಗಳು ನಡೆಯುತ್ತಿರುತ್ತವೆ ಆದರೆ ಬಾಂಗ್ಲಾದೇಶದಲ್ಲಿ ಈಗ ಮೀಸಲಾತಿಯ ವಿರುದ್ಧ ಹೋರಾಟ ನಡೆಯುತ್ತಿದೆ.

ಭಾರತದಂತೆ ಬಾಂಗ್ಲಾದೇಶದಲ್ಲಿಯೂ ಸಹ ಸರ್ಕಾರಿ ಉದ್ಯೋಗಗಳ ಸಂಖ್ಯೆ ಬಹಳ ಕಡಿಮೆ (ಜನಸಂಖ್ಯೆ ಸರಾಸರಿ ಪ್ರಕಾರ). ಆದರೆ ಬಾಂಗ್ಲಾದೇಶವು ಸರ್ಕಾರಿ ಉದ್ಯೋಗಕ್ಕೆ 55% ಮೀಸಲಾತಿ ನೀಡಿದೆ. ಇದರಿಂದಾಗಿ ದೇಶದ ಬಹುತೇಕ ಯುವಕರಿಗೆ ಸರ್ಕಾರಿ ಉದ್ಯೋಗಗಳು ಸಿಗುತ್ತಿಲ್ಲ. ದೇಶದ ಹಲವು ಪ್ರತಿಭಾವಂತ ಯುವಕರೇ ಖಾಸಗಿ ಸಂಸ್ಥೆಗಳಲ್ಲಿ ಅಲ್ಪ ಸಂಬಳಕ್ಕೆ ಕೆಲಸ ಮಾಡುವಂತಾಗಿದೆ. ಹಾಗಾಗಿಯೇ ದೇಶದ ಯುವಕರು ಈಗ ಈ 56% ಉದ್ಯೋಗ ಮೀಸಲಾತಿ ವಿರುದ್ಧ ಸಿಡಿದು ನಿಂತಿದ್ದಾರೆ.

Bengaluru Airport: ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಂತಿಮ ಪಟ್ಟಿಯಲ್ಲಿ ಆರು ಸ್ಥಳಗಳು

ಬಾಂಗ್ಲಾದೇಶ ಘೋಷಿಸಿದ್ದ 56% ಮೀಸಲಾತಿಯಲ್ಲಿ 30% ಮೀಸಲಾತಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಕುಟುಂಬದವರು ಹಾಗೂ ಅವರ ಸಂಬಂಧಿಕರಿಗೆ ನೀಡಲಾಗಿದೆ. ದೇಶದ ಯುವಕರಿಗೆ ಈ ಮೀಸಲಾತಿ ಮೇಲೆ ಆಕ್ರೋಶ ಮೂಡಲು ಮುಖ್ಯ ಕಾರಣವೇ ಇದು. 10% ಮಹಿಳಾ ಮೀಸಲಾತಿ ನೀಡಲಾಗಿದೆ. 10% ಮೀಸಲಾತಿಯನ್ನು ಹಿಂದುಳಿದ ಜಿಲ್ಲೆಗಳ ಜನರಿಗೆ ನೀಡಲಾಗಿದೆ. 5% ಮೀಸಲಾತಿಯನ್ನು ಹಿಂದುಳಿದ ಜನಾಂಗದವರಿಗೆ ಹಾಗೂ 1% ಅನ್ನು ಅಂಗವಿಕರಿಗೆ ನೀಡಲಾಗಿದೆ.

ಬಾಂಗ್ಲಾದೇಶದ ಯುವಕರು ಪ್ರಮುಖವಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಸಂಬಂಧಿಕರಿಗೆ ನೀಡಲಾಗಿರುವ ಮೀಸಲಾತಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. 2018 ರಲ್ಲಿಯೂ ದೇಶದ ಯುವಕರು ಇದೇ ರೀತಿಯಾಗಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ಆಗ ಪ್ರತಿಭಟನೆಗೆ ಮಣಿದಿದ್ದ ಸರ್ಕಾರ 56% ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದು ಮಾಡಿತ್ತು. ಆ ನಂತರ ಪ್ರತಿಭಟನೆ ಶಾಂತವಾಯ್ತು.

ಆದರೆ ಇದೇ ತಿಂಗಳು ಬಾಂಗ್ಲಾದೇಶದ ಉನ್ನತ ನ್ಯಾಯಾಲಯ, ಈ ಹಿಂದೆ ಇದ್ದ 56% ಮೀಸಲಾತಿಯನ್ನು ಮತ್ತೆ ತರುವಂತೆ ಆದೇಶಿಸಿದೆ. ಇದು ದೇಶದ ಯುವಕರನ್ನು ಮತ್ತೆ ಕೆರಳಿಸಿದೆ. ಹಾಗಾಗಿ ಅವರು ಪ್ರತಿಭಟನೆಗೆ ಇಳಿದಿದ್ದಾರೆ. ‘ನಾವು 26% ಮೀಸಲಾತಿ ಒಪ್ಪುತ್ತೇವೆ ಆದರೆ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ನೀಡಲಾಗುತ್ತಿರುವ 30% ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದಿದ್ದಾರೆ.

Exit mobile version