ಸಾಮಾಜಿಕ ಜಾಲತಾಣಗಳಲ್ಲಿಯೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಆಪ್ ಇದೀಗ ಭಾರತವನ್ನು ಬಿಟ್ಟು ಹೋಗುವುದಾಗಿ ‘ಬೆದರಿಕೆ’ ಹಾಕಿದೆ. ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಂ, ಟಿಕ್ಟಾಕ್ ಇನ್ಯಾವುದೇ ಸಾಮಾಜಿಕ ಜಾಲತಾಣಗಳಿಗಿಂತಲೂ ಹೆಚ್ಚಿನ ಬಳಕೆದಾರರನ್ನು ವಿಶ್ವದಾದ್ಯಂತ ವಾಟ್ಸ್ಆಪ್ ಹೊಂದಿದೆ. ಭಾರತದಲ್ಲಿಯೂ ಸಹ ವಾಟ್ಸ್ಆಪ್ ಅತ್ಯಂತ ಜನಪ್ರಿಯ ಹಾಗೂ ಬೇಡಿಕೆಯ ಸಂವಹನ ಆಪ್ ಆಗಿದೆ. ಆದರೆ ಈಗ ವಾಟ್ಸ್ಆಪ್ ಭಾರತ ಬಿಟ್ಟು ಹೊರಡುವ ಮಾತನ್ನಾಡಿದೆ. ವಾಟ್ಸ್ಆಪ್ ತನ್ನ ಹೇಳಿಕೆ ಬಗ್ಗೆ ಗಂಭೀರವಾಗಿದೆ.
ಕಳೆದ ಕೆಲ ವರ್ಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಮಾಹಿತಿ ಸೋರಿಕೆ ಹಾಗೂ ಬಳಕೆದಾರರ ಮಾಹಿತಿ ಸಂಗ್ರಹ ಮಾಡುವ ಬಗ್ಗೆ ದೂರುಗಳು ಚರ್ಚೆಗಳು ವಿಶ್ವಮಟ್ಟದಲ್ಲಿ ಎದ್ದಿದ್ದವು. ಅದರಂತೆ ವಾಟ್ಸ್ಆಪ್ ಕೆಲವು ಹೊಸ ಪ್ರೈವಸಿ ಪಾಲಿಸಿಗಳನ್ನು ತಂದಿತ್ತು. ವ್ಯಕ್ತಿಗಳಿಬ್ಬರ ನಡುವೆ ವಾಟ್ಸ್ಆಪ್ ಚಾಟ್ ಅನ್ನು ಇನ್ಸ್ಕ್ರಿಪ್ಟ್ ಮಾಡುವ ಅವಕಾಶವನ್ನು ಸಹ ಪರಿಚಯಿಸಿತ್ತು. ಈ ಆಯ್ಕೆಯಿಂದ ಬಳಕೆದಾರರ ಮಾಹಿತಿ ಮತ್ತು ಸಂಭಾಷಣೆ ಗೌಪ್ಯವಾಗಿರುತ್ತಿತ್ತು. ಆದರೆ ಹೊಸ ಕಾನೂನಿನಂತೆ ಕೆಲವು ವಿಶೇಷ ಸಂದರ್ಭದಲ್ಲಿ ಇಬ್ಬರು ಬಳಕೆದಾರರ ನಡುವೆ ನಡೆದಿರುವ ಸಂಭಾಷಣೆ ಮಾಹಿತಿಯನ್ನು ಬಹಿರಂಪಡಿಸಲು ಸಂಬಂಧಿತ ಇಲಾಖೆ ಕೇಳಿದರೆ ವಾಟ್ಸ್ಆಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣ ಅಥವಾ ಆಪ್ಗಳು ಕೊಡಬೇಕಿತ್ತು. ಈ ಹೊಸ ಕಾನೂನನ್ನು ವಾಟ್ಸ್ಆಪ್, ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದೆ.
ಮೊಬೈಲ್ ಕೊಳ್ಳುವ ಮುನ್ನ ತುಸು ತಡೆಯಿರಿ, ಈ ಹೊಸ ತಂತ್ರಜ್ಞಾನಗಳಿಗಾಗಿ ಕಾಯಿರಿ
ವಾಟ್ಸ್ಆಪ್ ಸಂಸ್ಥೆಯ ಪರ ವಾದ ಮಂಡಿಸಿದ ವಕೀಲ ತೇಜಸ್ ಕರಿಯಾ, ‘ಒಂದೊಮ್ಮೆ ನಮಗೆ ನಮ್ಮ ನಿಯಮಗಳನ್ನು ಮುರಿಯಲು ಹೇಳಿದರೆ ಒಂದು ಜವಾಬ್ದಾರಿಯುತ ಸಂಸ್ಥೆಯಾಗಿ ನಮಗೆ ಅದು ಸಾಧ್ಯವಿಲ್ಲ. ನಾವು (ವಾಟ್ಸ್ಆಪ್) ಹೊರಗೆ ಹೋಗಬೇಕಾಗುತ್ತದೆ’ ಎಂದಿದ್ದಾರೆ. ವಾಟ್ಸ್ಆಪ್ ಬಳಕೆದಾರರ ಗೌಪ್ಯತೆಯು ನಮ್ಮ ಸಂಸ್ಥೆಯ ಪ್ರಮುಖ ಮೌಲ್ಯವಾಗಿದೆ ಮತ್ತು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಯ್ಕೆಯು ಗೌಪ್ಯತೆಯನ್ನು ಕಾಪಾಡಲು ಪ್ರಮುಖವಾದ ಹೆಜ್ಜೆ ಅದನ್ನು ಹಿಂದೆ ಇಡಲಾಗದು. ಬಳಕೆದಾರರು ವಾಟ್ಸ್ಆಪ್ ಅನ್ನು ನಂಬುವುದೇ ಅವರ ಸಂದೇಶವನ್ನು ಇನ್ಯಾರೂ ಸಹ ನೋಡಲಾರರು ಎಂಬ ಕಾರಣಕ್ಕೆ ಎಂದಿದೆ ವಾಟ್ಸ್ಆಪ್.
ವಾಟ್ಸ್ಆಪ್ಗೆ ವಿರುದ್ಧವಾಗಿ ವಾದ ಮಂಡಿಸಿದ ಭಾರತ ಸರ್ಕಾರದ ವಕೀಲರು, ಯಾವುದೇ ಅಪಾಯಕಾರಿ, ಹಿಂಸೆಗೆ ಪ್ರೇರೇಪಣೆ ನೀಡುವ ಸಂದೇಶಗಳನ್ನು ಹರಿಯ ಬಿಡುತ್ತಿರುವ ಮೂಲವನ್ನು ಪತ್ತೆ ಹಚ್ಚಲು ಸಂದೇಶಗಳನ್ನು ಮೂರನೇ ವ್ಯಕ್ತಿ (ಸಂಸ್ಥೆ ಅಥವಾ ಸರ್ಕಾರ) ಓದಲೇ ಬೇಕಾಗುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಾಮಾಜಿಕ ಜಾಲತಾಣಗಳು ಜವಾಬ್ದಾರಿ ಹೊರಬೇಕಾಗುತ್ತದೆ. ಆನ್ಲೈನ್ ಭದ್ರತೆ ಒದಗಿಸಲು ಸಾಮಾಜಿಕ ಜಾಲತಾಣ ಸಂಸ್ಥೆಗಳು ಕೈಜೋಡಿಸಬೇಕಿದೆ ಎಂದಿದ್ದಾರೆ. ಈಗ ತರ ಹೊರಟಿರುವ ನಿಯಮದ ಉದ್ದೇಶ, ಅಶಾಂತಿ ಉಂಟು ಮಾಡುವವರನ್ನು ಹುಡುಕುವುದೇ ಆಗಿದೆ. ಅಂಥಹವರ ಮೂಲ ಹುಡುಕಿ ಕಾನೂನಿನ ಅಡಿಗೆ ತರುವುದೇ ಆಗಿದೆ ಎಂದಿದ್ದಾರೆ.