Darshan
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ತಿಂಗಳುಗಳೇ ಆಗಿದೆ. ದರ್ಶನ್ಗೆ ಜೈಲು ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಏಕಾಂಗಿತನ ಕಾಡುತ್ತಿದೆ ಎಂಬೆಲ್ಲ ಸುದ್ದಿಗಳು ಹೊರಗೆ ಹರಿದಾಡಿದ್ದವು. ಆದರೆ ಈಗ ವೈರಲ್ ಆಗಿರುವ ಚಿತ್ರದಲ್ಲಿ ನಟ ದರ್ಶನ್ ಆರಾಮವಾಗಿದ್ದಾರೆ. ಜೈಲಿನಲ್ಲಿ ಅವರಿಗೆ ರಾಜಾತಿಥ್ಯ ದೊರೆಯುತ್ತಿದೆ. ಸಮಯಕ್ಕೆ ಸರಿಯಾಗಿ ಊಟ-ಉಪಚಾರಗಳು ಮಾತ್ರವಲ್ಲ, ಸಿಗರೇಟು, ಕಾಫಿ ಎಲ್ಲವೂ ಸಿಗುತ್ತಿದೆ. ಒಳ್ಳೆಯ ‘ಕಂಪೆನಿ’ ಸಹ ದೊರೆತಿದೆ. ಇಷ್ಟೆಲ್ಲ ಸಿಕ್ಕವರಿಗೆ ರಾತ್ರಿಯಾಗುತ್ತಿದ್ದಂತೆ ಎಣ್ಣೆಯೂ ಸಿಗುತ್ತಿರಬಹುದೇನೋ.
ಈ ಎಲ್ಲ ಚರ್ಚೆಗೆ ಕಾರಣವಾಗಿರುವುದು ಜೈಲಿನಿಂದ ಲೀಕ್ ಆಗಿರುವ ದರ್ಶನ್ರ ಚಿತ್ರ. ನಟ ದರ್ಶನ್ ಇತರೆ ಕೆಲವು ರೌಡಿಶೀಟರ್ಗಳ ಜೊತೆಗೆ ಕುರ್ಚಿಯ ಮೇಲೆ ಕುಳಿತುಕೊಂಡು ಒಂದು ಕೈಯಲ್ಲಿ ಕಾಫಿ ಕಪ್ ಇನ್ನೊಂದು ಕೈಯಲ್ಲಿ ಸಿಗರೇಟು ಸೇದುತ್ತಾ, ರೌಡಿಗಳೊಟ್ಟಿಗೆ ಹರಟುತ್ತಾ ನಗುತ್ತಾ ಕೂತಿರುವ ಚಿತ್ರ ಇದೀಗ ವೈರಲ್ ಆಗಿದೆ. ಈ ಚಿತ್ರ ವೈರಲ್ ಆಗುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದ್ದು, 10 ಮಂದಿ ಕಾರಾಗೃಹ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಸ್ವತಃ ಗೃಹ ಸಚಿವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದರ್ಶನ್ ಅನ್ನು ಬೇರೆ ಕಾರಾಗೃಹಕ್ಕೆ ಶಿಫ್ಟ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದೆಲ್ಲಕ್ಕೂ ಕಾರಣವಾದ ಆ ಫೋಟೊವನ್ನು ತೆಗೆದಿರುವುದು ಯಾರು? ಮೊದಲು ಬಂದ ವರದಿಯ ಪ್ರಕಾರ, ಇತ್ತೀಚೆಗೆ ಸಿಐಡಿ ತಂಡವೊಂದು ಜೈಲಿಗೆ ಪರಿಶೀಲನೆಗೆ ಹೋದಾಗ ಈ ಚಿತ್ರವನ್ನು ತೆಗೆದಿದ್ದರು ಎನ್ನಲಾಗಿತ್ತು. ಆದರೆ ಅದು ಸುಳ್ಳು ಎನ್ನಲಾಗಿದೆ. ಬದಲಿಗೆ ಕಾರಾಗೃಹದಲ್ಲಿರುವ ಕೈದಿಯೇ ಒಬ್ಬ ಈ ಚಿತ್ರವನ್ನು ತೆಗೆದಿದ್ದಾನಂತೆ ಅದೂ ತನ್ನ ಬಳಿ ಇರುವ ಫೋನ್ನಿಂದ!
Darshan: ರೇಣುಕಾ ಸ್ವಾಮಿ ಪ್ರಕರಣ: ಹಿಂದೆ ಸರಿದ ದರ್ಶನ್ ಪರ ವಕೀಲ, ಮುಂದೇನು?
ಜೈಲಿನಲ್ಲಿ ಫೋನುಗಳ ಬಳಕೆಗೆ ನಿಷೇಧವಿದೆ. ಅಲ್ಲಿರುವ ಭದ್ರತಾ ಸಿಬ್ಬಂದಿಗೂ ಸಹ ಫೋನು ಬಳಕೆ ಮೇಲೆ ಸಾಕಷ್ಟು ರೀತಿಯ ನಿರ್ಬಂಧಗಳು ಇವೆ. ಇಷ್ಟೆಲ್ಲ ಇದ್ದರೂ ಜೈಲಿನ ಒಳಗೆ ಫೋನುಗಳು ಸಾಕಷ್ಟು ಜನರ ಬಳಿ ಇರುತ್ತವೆ ಎನ್ನಲಾಗಿದೆ. ಅಂದಹಾಗೆ ದರ್ಶನ್, ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ, ನಾಗರಾಜ್ ಅವರುಗಳು ಒಟ್ಟಿಗೆ ಕೂತು ಸಿಗರೇಟು ಸೇದುತ್ತಿರುವ ಚಿತ್ರವನ್ನು ತೆಗೆದಿರುವುದು ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ರೌಡಿ ವೇಲು ಎಂಬಾತ.
ರೌಡಿ ವೇಲು, ವಿಲ್ಸನ್ ಗಾರ್ಡನ್ ನಾಗನ ಸಹಚರನೇ ಆಗಿದ್ದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದಾನೆ. ಆತ ಅಕ್ರಮವಾಗಿ ಮೊಬೈಲ್ ಫೋನ್ ಇರಿಸಿಕೊಂಡಿದ್ದಾನೆ. ಆತನೇ ಈ ಚಿತ್ರ ತೆಗೆದು, ಯಾರೋ ಹೊರಗಿನವರಿಗೆ ಕಳಿಸಿದ್ದಾನಂತೆ. ಹೀಗೆ ಕಳಿಸಿದ ಚಿತ್ರ ವೈರಲ್ ಆಗಿದ್ದು, ಇದೀಗ ಮಾಧ್ಯಮಗಳ ಕೈಗೆ ಸಿಕ್ಕಿದೆ. ಫೋಟೊ ಹೊರಹೋಗಿರುವ ಸುದ್ದಿ ತಿಳಿಯುತ್ತಿದ್ದಂತೆ ರೌಡಿ ವೇಲು ಮೇಲೆ ವಿಲ್ಸನ್ ಗಾರ್ಡನ್ ನಾಗ ಮತ್ತು ಇನ್ನಿತರೆ ಸಹಚರರು ಚೆನ್ನಾಗಿ ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿಯೂ ಇದೆ.
ಇನ್ನು ದರ್ಶನ್, ವ್ಯಕ್ತಿಯೊಬ್ಬನಿಗೆ ವಿಡಿಯೋ ಕಾಲ್ ಮಾಡಿದ ಚಿತ್ರ ಹರಿದಾಡುತ್ತಿದೆ. ಅದೂ ಸಹ ಸಹ ಕೈದಿಗಳು ಯಾರೋ ತಮ್ಮ ಗೆಳೆಯರಿಗೆ ದರ್ಶನ್ ಕೈಯಿಂದ ವಿಡಿಯೋ ಕಾಲ್ ಮಾಡಿಸಿ ವಿಶ್ ಮಾಡಿಸಿದ್ದರಂತೆ. ಆ ವ್ಯಕ್ತಿ, ದರ್ಶನ್ ತಮಗೆ ವಿಡಿಯೋ ಕಾಲ್ ಮಾಡಿರುವ ಸ್ಕ್ರೀನ್ ಶಾಟ್ ತೆಗೆದುಕೊಂಡು ವಾಟ್ಸ್ಆಪ್ ಸ್ಟೇಟಸ್ಗೆ ಇಟ್ಟುಕೊಂಡಿದ್ದನಂತೆ! ಈಗ ಆ ಫೋಟೊ ಸಹ ಸಖತ್ ವೈರಲ್ ಆಗಿದೆ.