Darshan: ಯಾರು ಈ ಪವಿತ್ರ ಗೌಡ, ಈಕೆಯ ಮೋಹದಲ್ಲಿ ದರ್ಶನ್ ಸಿಲುಕಿದ್ದು ಹೇಗೆ?

0
197
Darshan

Darshan

ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಒಂದೊಮ್ಮೆ ಆರೋಪ ಸಾಬೀತಾದರೆ ‘ಪ್ರೇಯಸಿಗಾಗಿ’ ಗಾಗಿ ಅಭಿಮಾನಿಯನ್ನೇ ಕೊಲ್ಲಿಸಿದ ನಟ ಎಂಬ ಅಪಖ್ಯಾತಿಗೆ ಪಾತ್ರವಾಗಲಿದ್ದಾರೆ. ಈಗ ಹೊರ ಬಿದ್ದಿರುವ ಮಾಹಿತಿಗಳ ಪ್ರಕಾರ ದರ್ಶನ್, ತಮ್ಮ ‘ಆಪ್ತೆ’ ಪವಿತ್ರಾಗಾಗಿಯೇ ರೇಣುಕಾ ಸ್ವಾಮಿಯ ಅಪಹರಣ ಮಾಡಿಸಿದ್ದರು ಎನ್ನಲಾಗುತ್ತಿದೆ. ಚಿತ್ರರಂಗದ ದರ್ಶನ್ ಆಪ್ತ ಬಳಗ ಹಾಗೂ ಅಭಿಮಾನಿಗಳು ದರ್ಶನ್ ಗೆ ಈ ಸ್ಥಿತಿ ಬಂದಿದ್ದು ‘ಅವಳಿಂದಲೇ’ ಎನ್ನುತ್ತಿದ್ದಾರೆ. ಅವಳು ಎಂದರೆ ಪವಿತ್ರಾ ಗೌಡ. ಅಂದಹಾಗೆ ಈ ಪವಿತ್ರಾ ಗೌಡ ಯಾರು? ಆಕೆಯ ಹಿನ್ನೆಲೆ ಏನು? ದರ್ಶನ್ ಈಕೆಯ ಮೋಹದಲ್ಲಿ ಸಿಲುಕಿದ್ದು ಹೇಗೆ?

ಪವಿತ್ರಾ ಬೆಂಗಳೂರೂನ ಜೆಪಿ‌ ನಗರದವರು. ಕಾಲೇಜು ದಿನಗಳಿಂದಲೂ ಬಣ್ಣದ ಲೋಕದ ಹುಚ್ಚು ಹತ್ತಿಸಿಕೊಂಡವರು. ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಸಹ ನಟಿಸಿದ್ದರು. ಶ್ರೀಮಂತ ಮನೆಯ ಹುಡುಗಿಯೇ ಆಗಿದ್ದ ಪವಿತ್ರಾ, ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಸಿಎ ಕಲಿತಿದ್ದಾರೆ. ಆ ಸಮಯದಲ್ಲಿ ಮಾಡೆಲಿಂಗ್ ನಲ್ಲಿ ಆಸಕ್ತಿ ಬೆಳೆಸಿಕೊಂಡ ಪವಿತ್ರಾ, ಬೆಂಗಳೂರಿನಲ್ಲಿ ನಡೆದ ಕೆಲವು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿ, ಗೆದ್ದಿದ್ದರು. ಆ ದಿನಗಳಲ್ಲಿಯೇ ಯುವಕನೊಬ್ಬನ ಪ್ರೀತಿಸಿದ್ದ ಪವಿತ್ರ ಆತನೊಂದಿಗೆ ವಿವಾಹವನ್ನೂ ಮಾಡಿಕೊಂಡು ಒಂದು ಹೆಣ್ಣು ಮಗುವಿಗೆ ಜನ್ಮ‌ ನೀಡಿದ್ದರು.

ಮಾಡೆಲ್ ಲೋಕದ ಥಳಕು-ಬಳುಕು ನೋಡಿದ್ದ ಪವಿತ್ರಾ, ಸಿನಿಮಾಗಳಲ್ಲಿ ನಟಿಸಲು ಯತ್ನಿಸಿದರು, ‘ಅಗಮ್ಯ’ ಹೆಸರಿನ ಸಿನಿಮಾಕ್ಕಾಗಿ ನಾಯಕಿಯನ್ನು ಹುಡುಕುತ್ತಿದ್ದ ಉಮೇಶ್ ಗೌಡ ಅವರ ಕಣ್ಣಿಗೆ ಬಿದ್ದು ನಾಯಕಿಯಾದರು. ರೌಡಿ ಜಯರಾಜ್ ಪುತ್ರ ಆ ಸಿನಿಮಾಕ್ಕೆ ನಾಯಕ. ಆ ಸಿನಿಮಾ ನೆಲಕಚ್ಚಿತು. ಅದಾದ ಬಳಿಕ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದರಾದರೂ ಯಾವುದೂ ಕೈ ಹಿಡಿಯಲಿಲ್ಲ.

https://samasthanews.com/darshan-arrest-what-developments-happen-on-june-12/

ಅವಕಾಶಗಳ ಹುಡುಕಾಟದಲ್ಲಿದ್ದಾಗ ಪವಿತ್ರಾರ ಗೆಳತಿ, ಕಾಸ್ಟೂಮ್ ಡಿಸೈನರ್ ಒಬ್ಬರು ಪರಿಚಯವಾದರು. ಆ ಕಾಸ್ಟೂಮ್ ಡಿಸೈನರ್ ಪತಿ ಕನ್ನಡ ಚಿತ್ರರಂಗದ ಜನಪ್ರಿಯ ಕೊರಿಯಾಗ್ರಫರ್ ಮತ್ತು ಸಿನಿಮಾ ನಿರ್ದೇಶಕ. ದರ್ಶನ್ ಗೆ ಆಪ್ತ ಸಹ ಆಗಿದ್ದರು. ಒಂದು ಪಾರ್ಟಿಯಲ್ಲಿ ಪವಿತ್ರಾ ಗೌಡಪ ಅವರನ್ನು ದರ್ಶನ್ ಗೆ ಪರಿಚಯ ಮಾಡಿಸಿದ್ದು ಆ ಕೊರಿಯಾಗ್ರಾಫರ್‌ ಮತ್ತು ಕಾಸ್ಟ್ಯೂಮ್ ಡಿಸೈನರ್ ದಂಪತಿ. ಅದೇ ಸಮಯದಲ್ಲಿ ದರ್ಶನ್ ‘ಜಗ್ಗುದಾದ’ ಸಿನಿಮಾ ಪ್ರಾರಂಭಿಸಲಿದ್ದರು ದರ್ಶ‌ನ್. ಆ ಸಿನಿಮಾದ ನಾಯಕಿ ಪಾತ್ರಕ್ಕೆ ಆಡಿಷನ್ ಸಹ ಕೊಟ್ಟಿದ್ದರು ಪವಿತ್ರಾ ಗೌಡ.

ದರ್ಶನ್-ಪವಿತ್ರಾರ ಪರಿಚಯ ಸ್ನೇಹಕ್ಕೆ ತಿರುಗಲು ಹೆಚ್ಚು ಸಮಯ ಹಿಡಿಯಲಿಲ್ಲ. 2017 ರಲ್ಲಿ ಮೊದಲ ಬಾರಿಗೆ ಪವಿತ್ರಾ ಗೌಡ, ದರ್ಶನ್ ಜೊತೆಗೆ ಆಪ್ತ ಫೋಟೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ವಿವಾದದ ಕಿಡಿ ಹತ್ತಿಸಿತ್ತು. 2011 ರಲ್ಲಿ ನಟಿಯೊಬ್ಬರೊಟ್ಟಿಗೆ ಆಪ್ತ ಸಂಬಂಧ ಹೊಂದಿ ಪತ್ನಿಯೊಟ್ಟಿಗೆ ಇದೇ ಕಾರಣಕ್ಕೆ ಜಗಳ ಮಾಡಿಕೊಂಡು ಜೈಲು ವಾಸ ಅನುಭವಿಸಿ ಬಂದಿದ್ದ ದರ್ಶನ್. ಈ ಬಾರಿ ಇಬ್ಬರನ್ನೂ ಜಾಗರೂಕತೆಯಿಂದ ‘ಹ್ಯಾಂಡಲ್’ ಮಾಡುತ್ತಿದ್ದರು.

ಇತ್ತೀಚೆಗೆ ಪವಿತ್ರಾ ಗೌಡ, ತಾವು ದರ್ಶನ್ ಜೊತೆ ವಿದೇಶ ಪ್ರವಾಸ ಹೋಗಿದ್ದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ದರ್ಶನ್ ರ ಪತ್ನಿ ವಿಜಯಲಕ್ಷ್ಮಿ ವಿರೋಧಿಸಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಅದಕ್ಕೆ ಪವಿತ್ರಾ ಪ್ರತ್ಯುತ್ತರವನ್ನೂ ಸಹ ಕೊಟ್ಟಿದ್ದರು. ಮಂಡ್ಯದಲ್ಲಿ ‘ಕಾಟೇರ’ ಸಿನಿಮಾ ಸಕ್ಸಸ್ ಮೀಟ್ ನಲ್ಲಿ ಈ ಬಗ್ಗೆ ಮಾತನಾಡಿದ್ದ ದರ್ಶನ್, ‘ಇವತ್ತು ಇವಳಿರ್ತಾಳೆ ನಾಳೆ ಅವಳಿರ್ತಾಳೆ’ ಎಂದಿದ್ದರು.

ಇತ್ತೀಚೆಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರನನ್ನು ವಿದೇಶಕ್ಕೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು ನಟ ದರ್ಶನ್. ಆ ಚಿತ್ರಗಳನ್ನು ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಎಲ್ಲವೂ ಸರಿ ಹೋಗಿದೆ, ಎಲ್ಲವೂ ಶಾಂತವಾಗಿ ಸಾಗುತ್ತಿದೆ ಎನ್ನುವಾಗಲೇ ಈಗ ಈ ಕೊಲೆ ನಡೆದಿದೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಪವಿತ್ರಾ ಗೌಡ ಬಿರುಕು ಮೂಡಿಸುತ್ತಿದ್ದಾರೆ ಎಂದು ಬೇಸರಗೊಂಡಿದ್ದ ಚಿತ್ರದುರ್ಗದ ದರ್ಶನ್ ಅಭಿಮಾನಿ ರೇಣುಕಾ ಸ್ವಾಮಿ, ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಆತನನ್ನು ಕರೆತಂದು ಹಲ್ಲೆ ಮಾಡಲಾಗಿದ್ದು, ಹೊಡೆದ ಹೊಡೆತಕ್ಕೆ ರೇಣುಕಾ ಸ್ವಾಮೊಯ ಜೀವವೇ ಹೋಗಿದೆ. ಈಗ ದರ್ಶನ್ ಆಪ್ತರು, ಅಭಿಮಾನಿಗಳು ದರ್ಶನ್ ಗೆ ಈ ಗತಿ‌ಬರಲು ಪವಿತ್ರಾನೆ ಕಾರಣ ಎಂದು ಅವರನ್ನು ನಿಂದಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here