Ranya Rao
14.20 ಕೋಟಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಮುಂದಿನ ಕೆಲವು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ. ನಟಿಯ ಚಿನ್ನ ಸಾಗಣೆ ಪ್ರಕರಣದ ತನಿಖೆ ನಡೆದಷ್ಟು ಹಲವು ಆಘಾತಕಾರಿ ವಿಷಯಗಳು ಹೊರ ಬೀಳುತ್ತಿವೆ. ನಟಿ ರನ್ಯಾ, ಅಂತರಾಷ್ಟ್ರೀಯ ಮಾಫಿಯಾ ಸಿಂಡಿಕೇಟ್ ಗೆ ಸೇರಿದವರು ಎಂಬ ಗುಮಾನಿಯನ್ನು ತನಿಖಾಧಿಕಾರಿಗಳು ಇತ್ತೀಚೆಗೆ ವ್ಯಕ್ತಪಡಿಸಿದ್ದರು. ಇದೀಗ ನಟಿ ರನ್ಯಾ ಹಿಂದೆ ಕೆಲ ಪ್ರಭಾವಿ ರಾಜಕಾರಣಿಗಳು ಇರುವುದು ಬೆಳಕಿಗೆ ಬಂದಿದೆ.
ಬಿಜೆಪಿ ಆರೋಪಿಸುತ್ತಿರುವಂತೆ, ನಟಿ ರನ್ಯಾ ಅನ್ನು ಡಿಆರ್ಐ ಅಧಿಕಾರಿಗಳು ಬಂಧನಕ್ಕೆ ಒಳಪಡಿಸುತ್ತಿದ್ದಂತೆ. ರನ್ಯಾ, ಪ್ರಸ್ತುತ ಸರ್ಕಾರದಲ್ಲಿರುವ ಕೆಲ ಪ್ರಭಾವಿ ಸಚಿವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದರಂತೆ. ಪೊಲೀಸ್ ಇಲಾಖೆಯ ಕೆಲ ಪ್ರಮುಖ ಅಧಿಕಾರಿಗಳನ್ನೂ ಸಹ ಸಂಪರ್ಕ ಮಾಡುವ, ಅವರ ಮೂಲಕ ವಶೀಲಿಬಾಜಿ ನಡೆಸಿ ಪ್ರಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಸಹ ಮಾಡಿದ್ದರಂತೆ.
Ranya Rao: ಚಿನ್ನ ಕಳ್ಳಸಾಗಣೆ ಮಾಡಿ ಅರೆಸ್ಟ್ ಆಗಿರುವ ನಟಿ ರನ್ಯಾ ಯಾರ ಮಗಳು ಗೊತ್ತೆ?
ಆದರೆ ನಿನ್ನೆ ಹೊರಬಿದ್ದಿರುವ ಹೊಸ ವಿಷಯದ ಪ್ರಕಾರ, ನಟಿ ರನ್ಯಾಗೆ ಕಳೆದ ಸರ್ಕಾರದ ಅವಧಿಯಲ್ಲಿ ಅಂದರೆ ಬಿಜೆಪಿ ಅವಧಿಯಲ್ಲಿ 12 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಕೆಐಎಡಿಬಿ ವತಿಯಿಂದ ನಟಿ ರನ್ಯಾಗೆ 12 ಎಕರೆ ಜಮೀನು ಮಂಜೂರಾಗಿದೆ. ಬಿಜೆಪಿಯ ಮುರುಗೇಶ್ ನಿರಾಣಿ ಅವರು ಕೈಗಾರಿಕಾ ಸಚಿವರಾಗಿದ್ದಾಗ ಈ ಜಮೀನು ಮಂಜೂರಾಗಿದೆ. ಇದನ್ನು ಪ್ರಮುಖವಾಗಿ ಇರಿಸಿಕೊಂಡು ಕಾಂಗ್ರೆಸ್ನವರು ಬಿಜೆಪಿಯವರ ಮೇಲೆ ಆರೋಪ ಮಾಡುತ್ತಿದ್ದು, ಬಿಜೆಪಿಯ ಪ್ರಭಾವಿಗಳು ರನ್ಯಾ ಹಿಂದೆ ಇದ್ದಾರೆ ಎಂದು ಆರೋಪಿಸಿದ್ದಾರೆ.
ರನ್ಯಾ ಸಿಕ್ಕಿ ಬಿದ್ದಿದ್ದು ಹೇಗೆ?
ನಟಿ ರನ್ಯಾ ರಾವ್, ದುಬೈನಿಂದ ತಂದ ಚಿನ್ನವನ್ನು ಕಮೀಷನ್ ಆಧಾರದ ಮೇಲೆ ಇಲ್ಲಿನ ಚಿನ್ನದ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರಂತೆ. ಆದರೆ ಕೆಲವು ಚಿನ್ನದ ವ್ಯಾಪಾರಿಗಳು ತಮಗೂ ಚಿನ್ನ ನೀಡುವಂತೆ ಕೇಳಿದ್ದಾಗ ನಟಿ ರನ್ಯಾ ಆಗುವುದಿಲ್ಲ ಎಂದಿದ್ದರಂತೆ. ಕೆಲವರಿಗೆ ಅವಮಾನ ಸಹ ಮಾಡಿದ್ದರಂತೆ. ಇದರಿಂದ ಕೋಪಗೊಂಡ ಕೆಲ ಚಿನ್ನದ ವ್ಯಾಪಾರಿಗಳು ದೆಹಲಿಯ ಡಿಆರ್ಐ ಅಧಿಕಾರಿಗಳಿಗೆ ರನ್ಯಾ ಬಗ್ಗೆ ಮಾಹಿತಿ ಲೀಕ್ ಮಾಡಿದ್ದಾರೆ. ರನ್ಯಾರ ಚಲನವಲನ ಗಮನಿಸಿದ ಡಿಆರ್ಐ ಅಧಿಕಾರಿಗಳು ಬೆಂಗಳೂರಿನಲ್ಲಿ ಆಕೆಯನ್ನು ಬಂಧಿಸಿದ್ದರು. ನಟಿಯಿಂದ 14 ಕೋಟಿ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿತ್ತು.