Odisha:  ಜೊತೆಯಲ್ಲಿದ್ದೇ ನವೀನ್ ಪಟ್ನಾಯಕ್ ಗೆ ಸೋಲುಣಿಸಿದ ತಮಿಳುನಾಡು ಮಾಜಿ ಐಎಎಸ್ ಪಾಂಡಿಯನ್

0
130
Odisha

Odisha

ಒಡಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿ ಸಿಎಂ ಪಟ್ನಾಯಕ್ ವಿಶ್ವ ದರ್ಜೆಯ ಕ್ರೀಡಾಂಗಣ ಒಂದನ್ನು ನಿರ್ಮಿಸಿದ್ದಾರೆ, ಇಲ್ಲಿ ಹಲವಾರು ಅಂತರಾಷ್ಟ್ರೀಯ ಕ್ರೀಡಾಕೂಟಗಳು ಆಯೋಜನೆಗೊಂಡಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾ ಪಟುಗಳು ಪ್ರತಿ ದಿನ ಇಲ್ಲಿ ಅಭ್ಯಾಸ ಮಾಡುತ್ತಾರೆ. ಆದರೆ ಪ್ರತಿ ದಿನ ಬೆಳಿಗ್ಗೆ ಒಂದು ಗಂಟೆ ಕಾಲ ಈ ಕ್ರೀಡಾಂಗಣವೇ ಬಂದ್ ಆಗುತ್ತದೆ, ಅದಕ್ಕೆ ಕಾರಣ ಪಾಂಡಿಯನ್. ಏಕೆಂದರೆ ಬೆಳಿಗ್ಗೆ ಪಾಂಡಿಯನ್ ಇದೇ ಕ್ರೀಡಾಂಗಣದಲ್ಲಿ ಜಾಗಿಂಗ್ ಮಾಡುತ್ತಾನೆ. ಈತ ಜಾಗಿಂಗ್ ಮಾಡುವ ವೇಳೆಗೆ ಸರಿಯಾಗಿ ಭದ್ರೆತಯವರು ಇಡೀ ಕ್ರೀಡಾಂಗಣದಲ್ಲಿರುವವರನ್ನೆಲ್ಲ ಹೊರಗೆ ಕಳಿಸಿ ಟ್ರಾಕ್ ಕ್ಲಿಯರ್ ಮಾಡುತ್ತಾರೆ. ಈ ವಿಷಯ ಗೊತ್ತಿಲ್ಲದ ಮಾಧ್ಯಮದವನಿಲ್ಲ, ಆದರೆ ಇದೆಲ್ಲ ವರದಿಯೇ ಆಗುತ್ತಿರಲಿಲ್ಲ ಅದಕ್ಕೆ ಕಾರಣ ಪಾಂಡಿಯನ್.

ಈ‌ ಮಟ್ಟಿಗೆ ಹವಾ ಹೊಂದಿದ್ದಾನೆಂದರೆ ಈ ವ್ಯಕ್ತಿ ಪ್ರಬಲ‌ ಸಚಿವನೋ ಅಥವಾ ಒಡಿಸ್ಸಾ ಸಿಎಂ ನವೀನ್ ಪಟ್ನಾಯಕ್ ಕುಟುಂಬದವನೋ ಇರಬೇಕೆಂಬ ಅನುಮಾನ ಮೂಡಬಹುದು. ಆದರೆ ಪಾಂಡಿಯನ್ ಸಚಿವ ಅಲ್ಲ, ಕನಿಷ್ಟ ಶಾಸಕ, ಸಂಸದರೂ ಅಲ್ಲ. ಮೂಲತಃ ಈತ ಒಡಿಸ್ಸಾದವರೇ ಅಲ್ಲ. ಬದಲಿಗೆ ತಮಿಳುನಾಡಿನವರು. ಮಾಜಿ ಐಎಎಸ್ ಅಧಿಕಾರಿಯಾಗಿರುವ ಪಾಂಡಿಯನ್, ನವೀನ್ ಪಟ್ನಾಯಕ್ ಗೆ ಅತ್ಯಂತ ಖಾಸಾ. ಪಾಂಡಿಯನ್  ಹೆಸರು ಕೇಳದ ಒರಿಸ್ಸಾದ ಜನರಿಲ್ಲ. ಆದರೆ ಈತ ಒರಿಸ್ಸಾದವನಲ್ಲ, ಆದರೆ ಈತನ ಒಪ್ಪಿಗೆ ಇಲ್ಲದೆ ಒಡಿಸ್ಸಾದ ಸರ್ಕಾರ ಒಂದಿಂಚೂ ಸಹ ಕದಲುತ್ತಿರಲಿಲ್ಲ. ಆದರೆ ಈಗ ಈತನಿಂದಲೇ ಒಡಿಸ್ಸಾದಲ್ಲಿ ನವೀನ್ ಪಟ್ನಾಯಕ್‌ ಪಕ್ಷ ಬಿಜೆಡಿ ಸೋತಿದೆ, ಕಳೆದ ಐದು ಬಾರಿ ಸಿಎಂ ಆಗಿ ಯಶಸ್ವಿ ಸಿಎಂ ಅನಿಸಿಕೊಂಡಿದ್ದ ನವೀನ್ ಗೆ ಸೋಲಾಗಿದೆ. ಇದಕ್ಕೆ ಎಲ್ಲರ ಬೊಟ್ಟು ಪಾಂಡಿಯನ್ ಕಡೆ ತಿರುಗಿವೆ.

2000 ದಿಂದ 2023 ರ ವರೆಗೆ ಐಎಎಸ್ ಅಧಿಕಾರಿ ಆಗಿ ಕಾರ್ಯ ನಿರ್ವಹಿಸಿರುವ ಪಾಂಡಿಯನ್, ಕಳೆದ 12 ವರ್ಷಗಳಿಂದ ಒಡಿಸ್ಸಾ ಸಿಎಂ ನವೀನ್ ಪಟ್ನಾಯಕ್ ರ ಆಪ್ತ ಕಾರ್ಯದರ್ಶಿ ಆಗಿದ್ದರು‌. ಪಟ್ನಾಯಕ್ ರನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಂಡಿದ್ದ ಪಾಂಡಿಯನ್ ಒಪ್ಪಿಗೆ ಇಲ್ಲದೆ ಯಾರೂ ಸಹ ನವೀನ್ ರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ‌ ಚುನಾವಣೆ ಪ್ರಚಾರದ ಪ್ರತಿ ಪೋಸ್ಟರ್ ಹೋಲ್ಡಿಂಗ್ ನಲ್ಲೂ ಪಾಂಡಿಯನ್ ಫೋಟೊ. ತನಗೆ ತಾನು ಪ್ರಚಾರ ಕೊಟ್ಟುಕೊಳ್ಳಲು ಪಕ್ಷದ ನೂರಾರು‌  ಕೋಟಿ ಹಣವನ್ನು ಪಾಂಡಿಯನ್‌ ಖರ್ಚು ಮಾಡಿದ್ದ.

ಕಳೆದ ವರ್ಷವಷ್ಟೆ ಐಎಎಸ್ ಕೆಲಸಕ್ಕೆ ರಾಜೀನಾಮೆ ನೀಡಿ ಬಿಜೆಡಿಯ ಸದಸ್ಯತ್ವ ತೆಗೆದುಕೊಂಡಿದ್ದ ಪಾಂಡಿಯನ್, ನವೀನ್ ಪಟ್ನಾಯಕ್ ರ ಸಿಎಂ ಸ್ಥಾನಕ್ಕೆ ಉತ್ತರಾಧಿಕಾರಿ ಎನ್ನಲಾಗಿತ್ತು ಹಾಗಾಗಿಯೇ ಪಕ್ಷದಲ್ಲಿ ಏನೂ ಅಲ್ಲದಿದ್ದ ಪಾಂಡಿಯನ್ ತನಗೆ ತಾನು ಅಷ್ಟು ಪ್ರಚಾರ ಕೊಟ್ಟುಕೊಂಡಿದ್ದ. ಆದರೆ ಮತದಾರ ಎಲ್ಲ‌ ಲೆಕ್ಕಾಚಾರ ಉಲ್ಟಾ ಮಾಡಿದ್ದಾನೆ. ಬಿಜೆಡಿ ಸೋಲು ಕಂಡಿದೆ, ಅದೂ ಎರಡು ದಶಕಗಳಲ್ಲಿ ಮೊದಲ ಬಾರಿಗೆ ಸೋಲು ಕಂಡಿದ್ದು, ಆರನೇ ಬಾರಿ‌ ಸಿಎಂ ಆಗಬೇಕಿದ್ದ ನವೀನ್ ಪಟ್ನಾಯಕ್ ಕುರ್ಚಿ ಬಿಟ್ಟು ಕೆಳಗೆ ಇಳಿದಿದ್ದಾರೆ.

ಬಿಜೆಡಿಯ ಈ ಚುನಾವಣಾ ಸೋಲಿಗೆ ಪಾಂಡಿಯನ್ ಕಾರಣ ಎನ್ನಲಾಗುತ್ತಿದೆ. ಆತನೇ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದ. ಬಿಜೆಡಿಗೆ 40 ತಾರಾ ಪ್ರಚಾರಕರಿದ್ದರೂ ಸಹ ಪಾಂಡಿಯನ್ ಹಾಗೂ ನವೀನ್ ಪಟ್ನಾಯಕ್ ಮಾತ್ರವೇ ಪ್ರಚಾರ ಮಾಡಿದ್ದರು. ಯಾವೊಬ್ಬ ಸ್ಥಳೀಯ ನಾಯಕನಿಗೂ ಅವಕಾಶ ಕೊಡಲಿಲ್ಲ. ಈಗ ಬಿಜೆಡಿ ಸೋಲುಂಡಿದೆ.

ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಪಾಂಡಿಯನ್ ಒರಿಸ್ಸಾದಿಂದ ಕಾಣೆ ಆಗಿದ್ದಾರೆ. ಸದಾ ಸಿಎಂ ನವೀನ್ ಪಟ್ನಾಯಕ್ ನೆರಳಾಗಿ ಜೊತೆಯಲ್ಲೇ ಇರುತ್ತಿದ್ದ ಪಾಂಡಿಯನ್, ಫಲಿತಾಂಶದ ಬಳಿಕ ನಡೆದ ಯಾವುದೇ ಸಭೆಯಲ್ಲಿ ಭಾಗಿಯಾಗಲಿಲ್ಲ. ಬಿಜೆಡಿಯ ಕೆಲವು ನಾಯಕರು ಸಹ ಸೋಲಿಗೆ ಪಾಂಡಿಯನ್ ಕಾರಣ ಎಂದು ಬಹಿರಂಗವಾಗಿ ಹೇಳಲು ಆರಂಭಿಸಿದ್ದಾರೆ. ಪಾಂಡಿಯನ್, ಒರಿಸ್ಸಾ ಬಿಟ್ಟು ಪಲಾಯನ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೆ ತಾನೇ ಅವರ ಮೊದಲ ಗುರಿ ಆಗುತ್ತೇನೆಂಬ ನಂಬಿಕೆಯಿಂದಲೇ ಪಾಂಡಿಯನ್ ಪರಾರಿಯಾಗಿದ್ದಾರೆ. ಆದರೆ ನೂತನ ಆಡಳಿತ ಪಕ್ಷ ಬಿಜೆಪಿ, ಈಗಾಗಲೇ ಪಾಂಡಿಯನ್ ವಿರುದ್ಧ ಕ್ರಮಕ್ಕೆ ಆಂತರಿಕ ಯೋಜನೆ ಹಾಕಿಕೊಂಡಿದ್ದು, ಪಾಂಡಿಯನ್ ನ ಹಳೆಯ ಭ್ರಷ್ಟಾಚಾರ, ಅನಾಚಾರಗಳನ್ನೆಲ್ಲ ಹೊರಗೆಳೆದು, ಪಾಂಡಿಯನ್ ಅನ್ನು ಜೈಲಿಗಟ್ಟಲು ಸಿದ್ಧವಾಗಿದೆ.

LEAVE A REPLY

Please enter your comment!
Please enter your name here