Site icon Samastha News

Cricket: ವಿನೋದ್ ಕಾಂಬ್ಳಿ ಏಕೆ ಸಚಿನ್ ರೀತಿ ಯಶಸ್ವಿ ಕ್ರಿಕೆಟಿಗ ಆಗಲಿಲ್ಲ: ರಾಹುಲ್ ದ್ರಾವಿಡ್ ಕೊಟ್ಟರು ಉತ್ತರ

Cricket

Cricket

ಸಚಿನ್ ತೆಂಡೂಲ್ಕರ್ ಎಳೆ ವಯಸ್ಸಿನಲ್ಲಿಯೇ ಅತ್ಯುತ್ತಮ ಬ್ಯಾಟ್ಸ್​ಮ್ಯಾನ್ ಆಗಿ ಹೆಸರು ಮಾಡಿದ್ದರು. ಆದರೆ ಅವರೊಟ್ಟಿಗೆ ಅವರಂಥೆ ಬ್ಯಾಟಿಂಗ್ ಮಾಡಬಲ್ಲ ಮತ್ತೊಬ್ಬ ಬಾಲಕ ಇದ್ದರು, ಅದುವೇ ವಿನೋದ್ ಕಾಂಬ್ಳಿ. ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಇಬ್ಬರೂ ಒಟ್ಟಿಗೆ ಕ್ರಿಕೆಟ್ ತರಬೇತಿ ಪಡೆದವರು, ಇಬ್ಬರಿಗೂ ಒಬ್ಬರೇ ಗುರು. ಇಬ್ಬರೂ ಸೇರಿ ಸ್ಕೂಲ್ ಕ್ರಿಕೆಟ್​ನಲ್ಲಿ ದಾಖಲೆಯ 1000 ರನ್ ಭಾರಿಸಿದ್ದರು. ಆ ದಿನ ಸಚಿನ್​ಗಿಂಗಲೂ ಕಾಂಬ್ಳಿ ಹೆಚ್ಚು ರನ್ ಹೊಡೆದಿದ್ದರು. ಸಚಿನ್​ರಂತೆಯೇ ವಿನೋದ್ ಕಾಂಬ್ಳಿ ಸಹ ಪ್ರತಿಭಾವಂತ ಬ್ಯಾಟ್ಸ್​ಮ್ಯಾನ್ ಆದರೆ ಸಚಿನ್​ರಂತೆ ಕಾಂಬ್ಳಿ ಯಶಸ್ವಿಯಾಗಲಿಲ್ಲ ಏಕೆ? ದ್ರಾವಿಡ್ ಕೊಟ್ಟಿದ್ದಾರೆ ಉತ್ತರ.

ಕ್ರಿಕೆಟ್​ನಲ್ಲಿ ನಾವು ಪ್ರತಿಭೆ ಎಂಬುದನ್ನು ಕೇವಲ ಬಾಲ್​ ಅನ್ನು ಬೌಂಡರಿಗೆ ಹೇಗೆ ಅಟ್ಟಬಲ್ಲ ಎಂಬ ಒಂದು ಕೋನದಿಂದ ಮಾತ್ರವೇ ನೋಡುತ್ತೇವೆ. ಚೆಂಡನ್ನು ಚೆನ್ನಾಗಿ ಹೊಡೆಯುವುದು ಪ್ರತಿಭೆ ಎಂಬುದು ನಿಜ, ಆದರೆ ಅದೊಂದೆ ಪ್ರತಿಭೆಯಲ್ಲ, ಒಬ್ಬ ಅತ್ಯದ್ಭುತ ಅಂತರಾಷ್ಟ್ರೀಯ ಕ್ರಿಕೆಟಿಗ ಆಗಲು ಒಳ್ಳೆಯ ಬ್ಯಾಟ್ಸ್​ಮ್ಯಾನ್ ಆಗಿದ್ದರೆ ಸಾಲದು, ಅವನಲ್ಲಿ ಇನ್ನೂ ಹಲವು ಪ್ರತಿಭೆಗಳು ಇರಬೇಕಾಗುತ್ತದೆ’ ಎಂದಿದ್ದಾರೆ ರಾಹುಲ್ ದ್ರಾವಿಡ್.

‘ಚೆಂಡನ್ನು ಚೆನ್ನಾಗಿ ಹೊಡೆಯುತ್ತಾನೆ, ಬೌಂಡರಿಗಟ್ಟುತ್ತಾನೆ ಎಂಬುದು ಮಾತ್ರವೇ ಪ್ರತಿಭೆ ಅಲ್ಲ. ನಾನು ನೋಡಿದಂತೆ ವಿನೋದ್ ಕಾಂಬ್ಳಿ ಅದ್ಭುತವಾದ ಬಾಲ್ ಹಿಟರ್, ಎಂಥಹಾ ಬೌಲರ್​ಗಳಿಗೂ ಅವರು ಸುಲಭವಾಗಿ ಬೌಂಡರಿ ಭಾರಿಸುತ್ತಿದ್ದರು. ನನಗೆ ಚೆನ್ನಾಗಿ ನೆನಪಿದೆ. ರಾಜ್​ಕೋಟ್​ನಲ್ಲಿ ನಡೆದ ರಣಜಿ ಪಂದ್ಯವೊಂದರಲ್ಲಿ ವಿನೋದ್ ಹೇಗೆ ಆಡಿದ್ದರೆಂದರೆ ಅನಿಲ್ ಕುಂಬ್ಳೆ ಹಾಕಿದ ಮೊದಲ ಬಾಲನ್ನೆ ಎತ್ತಿ ಸಿಕ್ಸರ್ ಹೊಡೆದಿದ್ದರು. ನಾನಂತೂ ಶಾಕ್ ಆಗಿಬಿಟ್ಟಿದ್ದೆ. ಆ ದಿನ ಜಾವಗಲ್ ಶ್ರೀನಾತ್, ಅನಿಲ್ ಕುಂಬ್ಳೆ ಅಂಥಹಾ ಬೌಲರ್​ಗಳನ್ನು ಎದುರಿಸಿ ವಿನೋದ್ ಕಾಂಬ್ಳಿ 150 ರನ್ ಹೊಡೆದಿದ್ದರು. ಆದರೆ ವಿನೋದ್​ಗೆ ಒಳ್ಳೆಯ ಅಂತರಾಷ್ಟ್ರೀಯ ಆಟಗಾರ ಎನಿಸಿಕೊಳ್ಳಲು ಆಗಲಿಲ್ಲ. ಅದಕ್ಕೆ ಬೇರೆ ಕಾರಣಗಳಿವೆ’ ಎಂದಿದ್ದರು ದ್ರಾವಿಡ್.

Ambani family wedding: ಭಾರತದ ಶ್ರೀಮಂತ ಮದುವೆಗೆ ದೊರಕಿತು ಚಾಲನೆ, ಅಂಬಾನಿ ಕುಟುಂಬದಲ್ಲಿ ಸಂಭ್ರಮ

‘ಪ್ರತಿಭೆ ಎಂದರೆ ಬಾಲ್​ ಅನ್ನು ದಂಡಿಸುವುದು ಮಾತ್ರವೇ ಅಲ್ಲ, ಶಿಸ್ತಿನಿಂದ ವರ್ತಿಸುವುದು, ಆಟಕ್ಕೆ, ಇತರೆ ಆಟಗಾರರಿಗೆ ಗೌರವ ಕೊಡುವುದು, ಪ್ರತಿದಿನ ತಪ್ಪದೇ ಅಭ್ಯಾಸ ಮಾಡುವುದು, ಎಂಥಹಾ ಸಂದರ್ಭದಲ್ಲಿಯೂ ಧೈರ್ಯ ಕಳೆದುಕೊಳ್ಳದೇ ಇರುವುದು, ಆಟವನ್ನು ಸದಾ ಪ್ರೀತಿಸುವುದು, ಗೌರವಿಸುವುದು, ತಾಳ್ಮೆಯಿಂದ ಇರುವುದು ಇವೆಲ್ಲವೂ ಸಹ ಪ್ರತಿಭೆಗಳೇ. ಒಬ್ಬ ಬ್ಯಾಟ್ಸ್​ಮ್ಯಾನ್​ಗೆ ಕೇವಲ ಬಾಲ್​ ಅನ್ನು ಹೊಡೆಯುವ ಪ್ರತಿಭೆ ಮಾತ್ರವೇ ಇದ್ದರೆ ಆತ ಒಳ್ಳೆಯ ಆಟಗಾರ ಎನಿಸಿಕೊಳ್ಳಲಾರ, ಆತನಿಗೆ ಮೇಲೆ ಹೇಳಿದ ಇತರೆ ಪ್ರತಿಭೆಗಳು ಸಹ ಇರಬೇಕಾಗುತ್ತದೆ. ಸಚಿನ್ ತೆಂಡೂಲ್ಕರ್​ಗೆ ಆ ಎರಡೂ ಪ್ರತಿಭೆಗಳು ಇದ್ದವು ಹಾಗಾಗಿ ಅವರು ದೊಡ್ಡ ಕ್ರಿಕೆಟಿಗ ಎನಿಸಿಕೊಂಡರು ಆದರೆ ವಿನೋದ್ ಕಾಂಬ್ಳಿಗೆ ಅದು ಇರಲಿಲ್ಲ ಹಾಗಾಗಿ ಸಚಿನ್ ರೀತಿ ದೊಡ್ಡ ಆಟಗಾರ ಆಗಲಿಲ್ಲ’ ಎಂದಿದ್ದಾರೆ ದ್ರಾವಿಡ್.

ವಿನೋದ್ ಕಾಂಬ್ಳಿ ಭಾರತದ ಅತ್ಯುತ್ತಮ ಎಡಗೈ ಬ್ಯಾಟ್ಸ್​ಮ್ಯಾನ್ ಆಗಿದ್ದರು. ಅದ್ಭುತವಾದ ಬ್ಯಾಟಿಂಗ್ ಪ್ರತಿಭೆ ಅವರಲ್ಲಿತ್ತು. ಆದರೆ ಅವರಲ್ಲಿ ಶಿಸ್ತು ಇರಲಿಲ್ಲ. ಭಾರತ ತಂಡಕ್ಕೆ ಆಯ್ಕೆ ಆಗಿ ಹಣ, ಜನಪ್ರಿಯತೆ ಬರುತ್ತಿದ್ದಂತೆ ಅವರ ವರ್ತನೆ ಬದಲಾಗಿತ್ತು. ಶಿಸ್ತು ಕಳೆದುಕೊಂಡಿದ್ದರು. ಅದು ಅವರ ಆಟದ ಮೇಲೂ ಪರಿಣಾಮ ಬೀರಿತ್ತು. ಕೆಲವು ವಿವಾದಗಳಲ್ಲಿಯೂ ವಿನೋದ್ ಕಾಂಬ್ಳಿ ಹೆಸರು ಕೇಳಿ ಬಂತು. ಕೊನೆಗೆ ಅವರನ್ನು ತಂಡದಿಂದ ಕೈಬಿಡಲಾಯ್ತು. ಸಚಿನ್, ಕಾಂಬ್ಳಿ ಒಟ್ಟಿಗೆ ಒಂದೇ ಮೈದಾನದಲ್ಲಿ, ಒಬ್ಬರೇ ಗುರುಗಳ ಬಳಿ ಆಟ ಕಲಿಯಲು ಆರಂಭಿಸಿದರು. ಸಚಿನ್ ವಿಶ್ವ ಕಂಡ ಅತ್ಯುತ್ತಮ ಆಟಗಾರ ಎನಿಸಿಕೊಂಡರು. ವಿನೋದ್ ಕಾಂಬ್ಳಿಯನ್ನು ಇಂದು ನೆನಪಿಸಿಕೊಳ್ಳುವವರು ಸಹ ಯಾರೂ ಇಲ್ಲ.

Exit mobile version