Royal Enfield
ರಾಯಲ್ ಎನ್’ಫೀಲ್ಡ್ ಎನ್ನುತ್ತಲೆ ನೆನಪಿಗೆ ಬರುವುದು ಬುಲೆಟ್ ಬೈಕ್ ಗಳು. ಬುಲೆಟ್ ಗಳ ಮೂಲಕ ಇಡೀ ದೇಶದಲ್ಲೇ ಹೊಸ ಕ್ರಾಂತಿಯನ್ನೇ ಮಾಡಿಬಿಟ್ಟಿತು ರಾಯಲ್ ಎನ್ ಫೀಲ್ಡ್. ಈಗಲೂ ಸಹ ರಾಯಲ್ ಎನ್’ಫೀಲ್ಡ್ ತನ್ನ ಬುಲೆಟ್ ಬೈಕ್ ಗಳಿಂದಲೇ ಜನಪ್ರಿಯ. ಆದರೆ ರಾಯಲ್ ಎನ್ ಫೀಲ್ಡ್ ಈಗ ಬುಲೆಟ್ ಬೈಕುಗಳಿಗೆ ಗುಡ್ ಬೈ ಹೇಳಲು ರೆಡಿಯಾದಂತಿದೆ. ಹಾಗೆಂದು ಬೈಕ್ ನಿರ್ಮಾಣವನ್ನೇ ನಿಲ್ಲಿಸುತ್ತಿಲ್ಲ ಬದಲಿಗೆ ಬೇರೆ ಮಾದರಿಯ ಬೈಕ್ ನಿರ್ಮಾಣದತ್ತ ಗಮನ ಹರಿಸುತ್ತಿದೆ.
ರಾಯಲ್ ಎನ್ ಫೀಲ್ಡ್, ಹಿಮಾಲಯನ್ ಬೈಕ್ ಹೊರತು ಪಡಿಸಿ ಉಳಿದ ಎಲ್ಲವನ್ನೂ ಬುಲೆಟ್ ಮಾದರಿ ಬೈಕ್ ಸೆಗ್ಮೆಂಟ್ ನಲ್ಲಿಯೇ ಬಿಡುಗಡೆ ಮಾಡಿತ್ತು, ಇತ್ತೀಚೆಗೆ ಬಂದ ಹಂಟರ್, ಸಂಪೂರ್ಣ ಬುಲೆಟ್ ಅಲ್ಲದಿದ್ದರೂ ಡಿಸೈನ್ ಅನ್ನು ಬುಲೆಟ್ ಬೈಕುಗಳಿಂದಲೇ ತೆಗೆದುಕೊಂಡಿತ್ತು. ಆದರೆ ಈಗ ರಾಯಲ್ ಎನ್ ಫೀಲ್ಡ್ ಹೊಸ ಮಾದರಿಯ ಬೈಕುಗಳೊಂದಿಗೆ ಮಾರುಕಟ್ಟೆಗೆ ಬರಲು ತಯಾರಾಗಿದೆ.
ಇದೀಗ ರಾಯಲ್ ಎನ್ ಫೀಲ್ಡ್, ಬಜಾಜ್ ಪಲ್ಸರ್, ಟ್ರಯಂಫ್ ಸ್ಕ್ರ್ಯಾಂಬ್ಲರ್, ಹೀರೋ, ಡ್ಯೂಕ್ ಬೈಕುಗಳಿಗೆ ಪ್ರತಿ ಸ್ಪರ್ಧೆ ಒಡ್ಡಲು, ‘ಬೈಕ್’ ಸೆಗ್ಮೆಂಟ್ ಹಾಗೂ ಅಡ್ವೇಂಚರ್ ಟೂರಿಸ್ಟ್ ಸೆಗ್ಮೆಂಟ್ ಅಡಿಯಲ್ಲಿ ಬೈಕುಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ರಾಯಲ್ ಎನ್ ಫೀಲ್ಡ್ ‘ಗೊರಿಲ್ಲ 450’ ಬೈಕು ಬಿಡುಗಡೆಗೆ ಸಿದ್ಧವಾಗಿದ್ದು, (ಕೆಲವೆಡೆ ಬಿಡುಗಡೆ ಆಗಿದೆ) ಈ ಬೈಕು ತುಸು ಡ್ಯೂಕ್ ಹಾಗೂ ಪಲ್ಸರ್ ಬೈಕ್ ಅನ್ನು ಹೋಲುವಂತಿದೆ. ಗೊರಿಲ್ಲ 450 ಬೈಕ್ ನ ಬೆಲೆ 2.40 ಲಕ್ಷ ರೂಪಾಯಿ ಇರಲಿದೆ.
ಇನ್ನು ರಾಯಲ್ ಎನ್ ಫೀಲ್ಡ್ ನ ಅಡ್ವೇಂಚರ್ ಟೂರಿಸ್ಟ್ ಸೆಗ್ಮೆಂಟ್ ನ ಹಿಮಾಲಯನ್ ಬೈಕ್ ನ ಹೊಸ ಆವೃತ್ತಿಯನ್ನು ಸಹ ಬಿಡುಗಡೆ ಮಾಡಲು ಸಜ್ಜಾಗಿದ್ದು ಈ ಹೊಸ ಆವೃತ್ತಿ ಬೈಕ್ 2.85 ಲಕ್ಷ ರೂಪಾಯಿಗೆ ಸಿಗಲಿದೆ.
Micro Car: ಬೈಕಿನ ಬೆಲೆಗೆ ಬೈಕಿನಂಥಹುದೇ ಕಾರು, ಬೆಂಗಳೂರಿನಲ್ಲೇ ತಯಾರು
ರಾಯಲ್ ಎನ್ ಫೀಲ್ಡ್ ನ ಸಿಗ್ನೇಚರ್ ಬೈಕ್ ಗಳಾದ ಬುಲೆಟ್ 350, ಕ್ಲಾಸಿಕ್ 350, ಮಿಟಿಯೋರ್ ಇನ್ನಿತರೆ ಬೈಕುಗಳ ನಿರ್ಮಾಣವನ್ನು ನಿಧಾನಕ್ಕೆ ಕಡಿಮೆ ಮಾಡುವ ಯೋಚನೆಯಲ್ಲಿದೆ ರಾಯಲ್ ಎನ್ ಫೀಲ್ಡ್. ಹಾಗೂ ಯುವಕರನ್ನು ಹೆಚ್ಚಾಗಿ ಸೆಳೆಯುತ್ತಿರುವ ಅಡ್ವೇಂಚರ್ ಟೂರಿಸ್ಟ್, ಡರ್ಟ್ ಬೈಕ್, ಅರ್ಬನ್ ಬೈಕ್ ಸೆಗ್ಮೆಂಟ್ ಮೇಲೆ ಹೆಚ್ಚು ಗಮನ ಹರಿಸಲಿದೆ.