Zomato Founder
‘ಹಳ್ಳದ ಕಡೆಗೆ ನೀರು ಹರಿವುದು, ಹಣವಂತರಿಗೆ ಹಣ ದೊರಕುವುದು’ ಎಂದು ಅಣ್ಣಾವ್ರ ಸಿನಿಮಾದ ಹಾಡೊಂದಿದೆ. ಹಾಗೆಯೇ ಈಗಾಗಲೇ ಲಕ್ಷಾಂತರ ಕೋಟಿ ಮೌಲ್ಯದ ಕಂಪೆನಿ, ಆಸ್ತಿ ಹೊಂದಿರುವ ಭಾರತದ ಉದ್ಯಮಿಯೊಬ್ಬರು ಕೆಲವೇ ಗಂಟೆಗಳಲ್ಲಿ 1600 ಕೋಟಿ ರೂಪಾಯಿ ಹಣ ಗಳಿಸಿದ್ದಾರೆ. ಆ ಉದ್ಯಮಿ ಮತ್ಯಾರೂ ಅಲ್ಲ ಫೂಡ್ ಡೆಲಿವರಿ ಸಂಸ್ಥೆ ಜೊಮ್ಯಾಟೋದ ಮಾಲೀಕ ದೀಪೇಂದರ್ ಘೋಯಲ್.
ಇತ್ತೀಚೆಗಷ್ಟೆ ಜೊಮ್ಯಾಟೊ ಸಂಸ್ಥೆಯ ತ್ರೈಮಾಸಿಕ ವರದಿ ಬಿಡುಗಡೆ ಆಯ್ತು. ಸಂಸ್ಥೆ ಈ ತ್ರೈಮಾಸಿಕದಲ್ಲಿ 253 ಕೋಟಿ ಲಾಭ ಗಳಿಸಿರುವುದಾಗಿ ಘೋಷಿಸಿದೆ. ಅಲ್ಲದೆ ಮುಂದಿನ ತ್ರೈಮಾಸಿಕದಲ್ಲಿ ಈ ಮೊತ್ತ ದುಪ್ಪಟ್ಟಾಗುವ ಸಾಧ್ಯತೆ ಇದೆ. ತ್ರೈಮಾಸಿಕ ವರದಿ ಹೊರ ಬೀಳುತ್ತಿದ್ದಂತೆ ಕಂಪೆನಿಯ ಷೇರುಗಳ ಮೌಲ್ಯ ಹಠಾತ್ತನೆ ಏರಿಕೆ ಕಂಡಿವೆ. ಕೇವಲ ಎರಡು ದಿನದಲ್ಲಿ ಕಂಪೆನಿಯ ಷೇರಿನ ಮೌಲ್ಯ 19 % ಏರಿಕೆ ಆಗಿದ್ದು, ಶುಕ್ರವಾರದ ಅಂತ್ಯಕ್ಕೆ ಜೊಮ್ಯಾಟೊದ ಒಂದು ಷೇರಿನ ಬೆಲೆ 262 ರೂಪಾಯಿಗಳಾಗಿದೆ.
ಜೊಮ್ಯಾಟೊದ ಸಹ ಸಂಸ್ಥಾಪಕರಾಗಿರುವ ದೀಪೇಂದ್ರ ಘೋಯಲ್ ಜೊಮ್ಯಾಟೊದ 4.19% ಅಂದರೆ 36 ಕೋಟಿ ಷೇರುಗಳನ್ನು ಹೊಂದಿದ್ದು ಸೋಮವಾರ ಒಂದೇ ದಿನ ಕೆಲವೇ ಗಂಟೆಗಳಲ್ಲಿ ಈ ಷೇರುಗಳ ಮೌಲ್ಯ 1600 ಕೋಟಿ ಏರಿಕೆಯಾಗಿದೆ. ಅಲ್ಲಿಗೆ ಈಗ ದೀಪೇಂದರ್ ಘೋಯಲ್ ಬಳಿ ಇರಿವ ಜೊಮ್ಯಾಟೊದ ಷೇರುಗಳ ಒಟ್ಟು ಮೌಲ್ಯ ಸುಮಾರು 10 ಸಾವಿರ ಕೋಟಿಗಳನ್ನು ದಾಟಿದೆ. ಜೊಮ್ಯಾಟೊನಲ್ಲಿ ಹೂಡಿಕೆ ಮಾಡಿರುವ ಇನ್ಫೋ ಎಡ್ಜ್ ಇಂಡಿಯಾ ಸಂಸ್ಥೆಯ ಷೇರು ಮೌಲ್ಯ 32 ಸಾವಿರ ಕೋಟಿಯನ್ನು ದಾಟಿದೆ.
Swiggy: ಸಸ್ಯಹಾರಿಗಳಾಗಿಬಿಟ್ಟರೆ ಬೆಂಗಳೂರಿಗರು, ಜೊಮ್ಯಾಟೊ ಹೇಳುತ್ತಿರುವುದೇನು?
ಮೊದಲ ತ್ರೈಮಾಸಿಕ ವರದಿಯಲ್ಲಿ 48 ಕೋಟಿ ನಷ್ಟದಲ್ಲಿದ್ದ ಸಂಸ್ಥೆ ಮೂರನೇ ವರದಿ ವೇಳೆಗೆ 253 ಕೋಟಿ ಲಾಭ ಪಡೆದುಕೊಂಡಿದ್ದು, ತನ್ನ ಸೇವೆಯನ್ನು ವಿದೇಶಗಳಲ್ಲಿಯೂ ವಿಸ್ತರಿಸುವ ಮೂಲಕ ಮುಂದಿನ ತ್ರೈಮಾಸಿಕದ ವೇಳೆಗೆ ಲಾಭದ ಮೊತ್ತವನ್ನು ದುಪ್ಪಟ್ಟು ಮಾಡುವ ಆಲೋಚನೆಯಲ್ಲಿದೆ. ಇದರ ಜೊತೆಗೆ ಗೋವಾ, ಪಂಜಾಬ್, ಹರಿಯಾಣ, ಕೇರಳ ಇನ್ನೂ ಕೆಲ ರಾಜ್ಯಗಳಲ್ಲಿ ಶೀಘ್ರವೇ ಮದ್ಯ ಸರಬರಾಜನ್ನು ಸಹ ಜೊಮ್ಯಾಟೊ ಶೀಘ್ರವೇ ಆರಂಭಿಸಲಿದ್ದು, ಈ ಬಗ್ಗೆ ಕೆಲವು ರಾಜ್ಯಗಳೊಟ್ಟಿಗೆ ಚರ್ಚೆ ಜಾರಿಯಲ್ಲಿದೆ. ಸದ್ಯಕ್ಕೆ ಷೇರು ಹೂಡಿಕೆದಾರರಿಗೆ ಜೊಮ್ಯಾಟೊ ಉತ್ತಮ ಹೂಡಿಕೆ ಆಪ್ಷನ್ ಆಗಬಲ್ಲದು.