Site icon Samastha News

Real Estate: ಬೆಂಗಳೂರಲ್ಲಿ ಎಕರೆ ಜಾಗಕ್ಕೆ 169 ಕೋಟಿ, ಖರೀದಿಸಿದ್ದು ಯಾರು? ಮಾರಿದ್ಯಾರು?

Real Estate

Real Estate

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದರ ಗಗನಕ್ಕೇರಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ, ಆದರೆ ಎಕರೆ ಭೂಮಿಗೆ ಎಷ್ಟು ಬೆಲೆ? ಇತ್ತೀಚೆಗೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಡೀಲ್ ಒಂದು ನಡೆದಿದೆ. 1.27 ಎಕರೆ ಭೂಮಿ ಬರೋಬ್ಬರಿ 169 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಇಷ್ಟು ದೊಡ್ಡ ಮೊತ್ತದ ಬೆಲೆ ಕೊಟ್ಟು ಭೂಮಿ ಖರೀದಿ ಮಾಡಿರುವುದು ದೇಶದ ಹೆಮ್ಮೆಯ ಆರೋಗ್ಯ ಸಂಸ್ಥೆಗಳಲ್ಲಿ ಒಂದಾದ ನಾರಾಯಣ ಹೃದಯಾಲಯ.

ದಕ್ಷಿಣ ಬೆಂಗಳೂರಿನ ಬೇಗೂರು ಹೋಬಳಿ ಬಳಿಯಲ್ಲಿ 1.2 ಎಕರೆ ಜಮೀನನ್ನು ನಾರಾಯಣ ಹೃದಯಾಲಯ ಖರೀದಿ ಮಾಡಿದೆ. ಇಷ್ಟು ಮೊತ್ತಕ್ಕೆ ಬರೋಬ್ಬರಿ 169 ಕೋಟಿ ರೂಪಾಯಿ ನೀಡಿದೆ ನಾರಾಯಣ ಹೃದಯಾಲಯ. 169 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿರುವ ಸ್ಥಳ 52,272 ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ವಿಶಾಲ ಜಾಗವನ್ನು ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರು ನಾರಾಯಣ ಹೃದಯಾಲಯಕ್ಕೆ ಮಾರಾಟ ಮಾಡಿದ್ದಾರೆ. ಈ ವಹಿವಾಟಿನಲ್ಲಿ ಪ್ರತಿ ಒಂದು ಚದರ ಅಡಿ ಜಾಗಕ್ಕೆ 32,331 ರೂಪಾಯಿಗಳಿಗೆ ಮಾರಾಟವಾಗಿದೆ. ಮಾರ್ಚ್ 31 ರಂದು ಈ ವಹಿವಾಟು ನಡೆದಿರುವುದಾಗಿ ದಾಖಲೆಗಳಲ್ಲಿ ನೊಂದಣಿ ಆಗಿದೆ.

ಬೆಂಗಳೂರಿನ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಡೀಲ್: ಭಾರಿ ಮೊತ್ತಕ್ಕೆ ಸೈಟ್ ಸೇಲ್

ವೈದ್ಯ ಮತ್ತು ಉದ್ಯಮಿ ದೇವಿ ಶೆಟ್ಟಿ ಅವರು 2000 ರಲ್ಲಿ ನಾರಾಯಣ ಹೃದಯಾಲಯ ಪ್ರಾರಂಭ ಮಾಡಿದ್ದರು. ಈ ಸಂಸ್ಥೆಯು ಈಗ ಭಾರತದ ಅತ್ಯುತ್ತಮ ಹೃದಯ ಚಿಕಿತ್ಸೆ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತ ಮಾತ್ರವಲ್ಲದೆ ಹೊರದೇಶಗಳಲ್ಲಿಯೂ ಘಟಕಗಳನ್ನು ಹೊಂದಿದೆ. ಭಾರತದಾದ್ಯಂತ 18 ಬ್ರ್ಯಾಂಚ್‍ ಗಳನ್ನು ಈ ಆಸ್ಪತ್ರೆ ಒಳಗೊಂಡಿದೆ. ಇದೀಗ ಬೇಗೂರಿನ ಸಮೀಪ ಹೊಸ ಆಸ್ಪತ್ರೆಯೊಂದನ್ನು ಸ್ಥಾಪಿಸಲು ನಾರಾಯಣ ಹೃದಯಾಲಯ ಮುಂದಾಗಿದೆ.

ಬೆಂಗಳೂರಿನ ಹೃದಯ ಭಾಗ, ಬೆಂಗಳೂರಿನ ಪೂರ್ವ ಭಾಗವಾದ ವೈಟ್‍‍ಫೀಲ್ಡ್ ಇನ್ನಿತರೆ ಕಡೆಗಳಲ್ಲಿ ಬೆಲೆಗಳು ಈಗಾಗಲೇ ಗಗನಕ್ಕೇರಿವೆ. ಅಲ್ಲೆಲ್ಲ ಒಂದು ಎಕರೆ ಜಾಗಕ್ಕೆ 300 ಕೋಟಿ ವರೆಗೂ ನೀಡಬೇಕಾಗುತ್ತದೆ. ಆದರೆ ಇತ್ತೀಚೆಗೆ ಬೆಂಗಳೂರಿನ ಹೊರವಲಯ ಎಂದು ಕರೆಯಲಾಗುವ ಯಲಹಂಕ, ಬೇಗೂರು ಕಡೆಗಳಲ್ಲಿಯೂ ಭೂಮಿಯ ಬೆಲೆ ಗಗನಕ್ಕೇರಿದೆ. ಕೆಲವು ದಿನಗಳ ಹಿಂದೆ ಕೋರಮಂಗಲದಲ್ಲಿ ಸೈಟ್ ಒಂದು 67.50 ಕೋಟಿ ರೂಪಾಯಿಗಳಿಗೆ ಮಾರಾಟವಾಗಿತ್ತು. ಕೋರಮಂಗಲದಲ್ಲಿ 10 ಸಾವಿರ ಚದರ ಅಡಿಯ ಸೈಟ್‍‍ಗೆ ಬರೋಬ್ಬರಿ 67.50 ಕೋಟಿ ಹಣವನ್ನು ಉದ್ಯಮಿ ಅಜಿತ್ ಇಸಾಕ್ ನೀಡಿದ್ದರು. ಈ ರಿಯಲ್ ಎಸ್ಟೇಟ್ ಡೀಲ್ ಸಹ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

Exit mobile version