Rishab Shetty
ರಿಷಬ್ ಶೆಟ್ಟಿ ಒಂದೇ ಸಿನಿಮಾದಿಂದ ಪ್ಯಾಬ್ ಇಂಡಿಯಾ ಸ್ಟಾರ್ ಆಗಿದ್ದಾರೆ. ‘ಕಾಂತಾರ’ ಸಿನಿಮಾ ಊಹೆಗೂ ಮೀರಿ ಯಶಸ್ಸು ಕೊಟ್ಟಿದ್ದು ರಿಷಬ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಅನ್ನಾಗಿ ಮಾಡಿದೆ. ಇದೀಗ ‘ಕಾಂತಾರ 2’ ಸಿನಿಮಾದ ಶೂಟಿಂಗ್ ನಲ್ಲಿರುವ ರಿಷಬ್, ‘ಕಾಂತಾರ 2’ ಸಿನಿಮಾ ಅನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಆದರೆ ಅವರದ್ದೆ ಒಂದು ಹೇಳಿಕೆ ಈಗ ಅವರಿಗೆ ಮುಳುವಾಗುವಂತಿದೆ.
ತಮ್ಮ ನಿರ್ಮಾಣದ ‘ಲಾಫಿಂಗ್ ಬುದ್ಧ’ ಸಿನಿಮಾದ ಪ್ರಚಾರಕ್ಕೆ ಬಂದಿದ್ದ ರಿಷಬ್ ಶೆಟ್ಟಿ, ‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿ ಪ್ರಶಸ್ತಿಗಳನ್ನು ಪಡೆದಿವೆ’ ಎಂದಿದ್ದರು. ರಿಷಬ್ ರ ಈ ಹೇಳಿಕೆಗೆ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಹಿಂದಿ ಸಿನಿಮಾ ವೀಕ್ಷಕರು ಹಾಗೂ ಉತ್ತರ ಭಾರತದ ಕೆಲವು ಸಿನಿಮಾ ವಿಮರ್ಶಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಭಾರತೀಯ ಸಿನಿಮಾ ಮತ್ತು ಟಿವಿ ನಿರ್ದೇಶಕರ ಸಂಘದ ಅಧ್ಯಕ್ಷ ಅಶೋಕ್ ಪಂಡಿತ್ ಈ ಬಗ್ಗೆ ಮಾತನಾಡಿದ್ದು, ‘ಯಾರೇ ಆಗಲಿ ಇನ್ನೊಬ್ಬರ ಬಗ್ಗೆ, ಇನ್ನೊಂದು ಚಿತ್ರರಂಗದ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಬಾಲಿವುಡ್ ನ ನಟ-ನಟಿಯರು ಅಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿನವರು ಇಲ್ಲಿ ಕೆಲಸ ಮಾಡುತ್ತಾರೆ. ದಕ್ಷಿಣದವರು ತಮ್ಮ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಇಲ್ಲಿ ಬಿಡುಗಡೆ ಮಾಡುತ್ತಾರೆ. ಒಬ್ಬರಿಗೊಬ್ಬರು ಸಹಾಯ ಬೇಕಾಗುತ್ತದೆ’ ಎಂದು ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದ್ದಾರೆ.
ಹಿರಿಯ ನಟ ಚಂಕಿ ಪಾಂಡೆ ಈ ಬಗ್ಗೆ ಮಾತನಾಡಿದ್ದು, ರಿಷಬ್ ಶೆಟ್ಟಿಯವರ ಹೇಳಿಕೆಯನ್ನು ಒಪ್ಪಿಲ್ಲ. ಬಾಲಿವುಡ್ ಸಿನಿಮಾಗಳು ಮೊದಲಿನಿಂದಲೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತಲೇ ಬಂದಿವೆ. ನಾನು ಹೊರದೇಶಗಳಿಗೆ ಹೋದಾಗೆಲ್ಲ ಅಲ್ಲಿನ ಭಾರತೀಯರು, ಬಾಲಿವುಡ್ ಸಿನಿಮಾಗಳ ಮೂಲಕ ಭಾರತವನ್ನು ನೋಡುತ್ತಿರುವುದಾಗಿ ಹೇಳುತ್ತಾರೆ’ ಎಂದಿದ್ದಾರೆ. ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ ಸಹ, ‘ಇದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವಂಥಹಾ ಹೇಳಿಕೆ. ಇದನ್ನು ಒಪ್ಪಲಾಗದು. ಆದರೆ ರಿಷಬ್ ಬಾಲಿವುಡ್ ಮೇಲಿನ ಅಗೌರವದಿಂದ ಹೀಗೆ ಹೇಳಿಕೆ ನೀಡಿಲ್ಲ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.
ಇನ್ನು ಜಾಹೀರಾತು ಕ್ಷೇತ್ರದ ದಿಗ್ಗಜ ಪ್ರಹ್ಲಾದ್ ಕಕ್ಕರ್ ಮಾತನಾಡಿ, ‘ಭಾರತೀಯ ಸಿನಿಮಾಗಳು ಭಾರತವನ್ನು ಸರಿಯಾಗಿ ಬಿಂಬಿಸಿಲ್ಲ, ಆ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದು ಯಾರಾದರೂ ಹೇಳಿದರೆ ಆ ವ್ಯಕ್ತಿ ತನ್ನನ್ನು ತಾವು ಬಹಳ ಮುಖ್ಯ ಎಂದು ಭಾವಿಸಿದ್ದಾನೆಂದು ಅರ್ಥ. ಬಾಲಿವುಡ್, ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಇತ್ತೀಚೆಗೆ ಸಹ ‘ಲಾಪತಾ ಲೇಡೀಸ್’ ರೀತಿಯ ಅತ್ಯುತ್ತಮ ಸಿನಿಮಾಗಳನ್ನು ಬಾಲಿವುಡ್ ನಿರ್ಮಿಸಿದೆ ಎಂದಿದ್ದಾರೆ.
Darshan Thoogudeepa: ರೇಣುಕಾ ಸ್ವಾಮಿ ಪ್ರಕರಣ: ದರ್ಶನ್ ಗೆ ಎದುರಾಯ್ತು ಗಂಭೀರ ಸಂಕಷ್ಟ
ಒಟ್ಟಾರೆಯಾಗಿ, ರಿಷಬ್ ಶೆಟ್ಟಿಯವರ ‘ಬಾಲಿವುಡ್’ ಹೇಳಿಕೆಗೆ ಬಾಲಿವುಡ್ ನಿಂದ ಹಾಗೂ ಬಾಲಿವುಡ್ ಪ್ರಿಯರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಇದು ಅವರ ‘ಕಾಂತಾರ 2’ ಸಿನಿಮಾದ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದೇ ಕಾದು ನೋಡಬೇಕಿದೆ.