Bangladesh
ನೆರೆಯ ರಾಷ್ಟ್ರ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಮಾತ್ರವಲ್ಲದೆ ತನ್ನ ಸಹೋದರಿಯ ಜೊತೆಗೆ ದೇಶ ಬಿಟ್ಟು ಪರಾರಿಯಾಗಿ ‘ಸುರಕ್ಷಿತ ಸ್ಥಳ’ ಸೇರಿಕೊಂಡಿದ್ದಾರಂತೆ ಶೇಕ್ ಹಸೀನಾ. ಬಾಂಗ್ಲಾದೇಶದಲ್ಲಿ ತಿಂಗಳುಗಳಿಂದ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆ ಬೆನ್ನಲ್ಲೆ ಶೇಕ್ ಹಸೀನಾ ಈ ನಿರ್ಧಾರ ಕೈಗೊಂಡಿದ್ದು, ಹಸೀನಾ ರಾಜೀನಾಮೆ ಹಿಂದೆ ಸೇನೆಯ ಪ್ರಬಲ ಬೆದರಿಕೆಯೂ ಇದೆ.
ಬಾಂಗ್ಲಾದೇಶದಲ್ಲಿ ಮೀಸಲಾತಿ ರದ್ದತಿ ಕೋರಿ ಕಳೆದ ಕೆಲ ತಿಂಗಳುಗಳಿಂದಲೂ ತೀವ್ರ ಹಿಂಸಾತ್ಮಕ ಹೋರಾಟ ನಡೆಯುತ್ತಿದೆ. ಲಕ್ಷಾಂತರ ಕೋಟಿ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ದೇಶದ ಸುಮಾರು 50% ಸರ್ಕಾರಿ ಆಸ್ತಿಗಳನ್ನು ಪ್ರತಿಭಟನಾಕಾರರು ಧ್ವಂಸ ಮಾಡಿದ್ದಾರೆ. ನೂರಾರು ಮಂದಿ ಜೀವವನ್ನೂ ಕಳೆದುಕೊಂಡಿದ್ದಾರೆ. ಪ್ರತಿಭಟನಾಕಾರರು ಶೇಕ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿದ್ದರು. ಆದರೆ ಶೇಕ್ ಹಸೀನ ರಾಜೀನಾಮೆ ನೀಡಿರಲಿಲ್ಲ. ಬಳಿಕ ಸೇನೆ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ, ಶೇಕ್ ಹಸೀನಾಗೆ 45 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಸೇನೆಯ ಈ ಬೆದರಿಕೆಗೆ ಕೊನೆಗೂ ಜಗ್ಗಿದ ಶೇಕ್ ಹಸೀನ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನ್ನ ಸಹೋದರಿಯೊಟ್ಟಿಗೆ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ.
ಬಾಂಗ್ಲಾದೇಶದ ಸರ್ಕಾರಿ ಉದ್ಯೋಗ ಹಾಗೂ ಇತರೆಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಕುಟುಂಬದವರಿಗೆ 50% ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ವ್ಯಕ್ತಿಯ ಮೊಮ್ಮಗ, ಮರಿಮೊಮ್ಮಗನಿಗೂ ಅನ್ವಯವಾಗುತ್ತದೆ. ಈ ಮೀಸಲಾತಿಯನ್ನು ಬಾಂಗ್ಲಾದ ಯುವಕರು ತೀವ್ರವಾಗಿ ವಿರೋಧಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ನೀಡಲಾಗಿರುವ ಮೀಸಲಾತಿಯನ್ನು ತೆಗೆಯುವಂತೆ ಜೂನ್ ತಿಂಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.
Bangladesh: ಹೊತ್ತಿ ಉರಿಯುತ್ತಿದೆ ಬಾಂಗ್ಲಾದೇಶ, ಕಾರಣವೇನು?
ಬಾಂಗ್ಲಾದ ರಾಜಧಾನಿ ಢಾಕಾ ಸೇರಿದಂತೆ ಹಲವು ಕಡೆಗಳಲ್ಲಿ ಈ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿತು, ರೈಲುಗಳಿಗೆ ಬೆಂಕಿ ಹಚ್ಚಲಾಯ್ತು, ಸರ್ಕಾರಿ ಕಚೇರಿಗಳಿಗೆ ಬೆಂಕಿ ಇಡಲಾಯ್ತು. ಸರ್ಕಾರವೂಸಹ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಹಾಗೂ ಸೈನ್ಯದ ಬಲ ಬಳಸಿತು. ಇದರಿಂದಾಗಿ ಸುಮಾರು 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ಈಗ ಶೇಕ್ ಹಸೀನ ರಾಜೀನಾಮೆ ನೀಡಿದ್ದು, ಸೈನ್ಯವು ದೇಶದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ.