Site icon Samastha News

Bellary Jail: ಬಳ್ಳಾರಿ ಜೈಲಿಗೆ ದರ್ಶನ್, ಈ ಜೈಲಿನ ವಿಶೇಷತೆ ಏನು? ಯಾರ್ಯಾರೆಲ್ಲ ಈ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದಾರೆ.  

Bellary Jail

Bellary Jail

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಈಗ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಸ್ವೀಕರಿಸಿ, ಕೆಲವು ನಿಯಮಗಳನ್ನು ಉಲ್ಲಂಘಿಸಿದ ಕಾರಣ ಅವರನ್ನು ಬಳ್ಳಾರಿ ಕೇಂದ್ರ ಕಾರಾಗ್ರಹಕ್ಕೆ ಸ್ಥಳಾಂತರ ಮಾಡಲಾಗಿದೆ.

ಅಂದಹಾಗೆ ನಟ ದರ್ಶನ್ ಈಗ ಸೇರಿಕೊಂಡಿರುವ ಬಳ್ಳಾರಿ ಜೈಲಿಗೆ ವಿಶೇಷ ಇತಿಹಾಸ ಇದೆ. ಈ ಜೈಲು ನಿರ್ಮಾಣವಾಗಿ 100 ಕ್ಕೂ ಹೆಚ್ಚು ವರ್ಷಗಳಾಗಿವೆ. 1872 ರಲ್ಲಿ ಬ್ರಿಟೀಷರು ಈ ಕಾರಾಗ್ರಹ ನಿರ್ಮಾಣ ಮಾಡಿಸಿದರು. ಆರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಜೈಲಿಗೆ ಹಾಕಲಾಗುತ್ತಿತ್ತು. ಆ ನಂತರ 1942 ರ ಎರಡನೇ ವಿಶ್ವಯುದ್ಧ ಸಮಯದಲ್ಲಿ ವಿದೇಶಿ ಯುದ್ಧ ಕೈದಿಗಳನ್ನು ಸಹ ಇದೇ ಜೈಲಿನಲ್ಲಿ ಇಡಲಾಗಿತ್ತು. ಅಂದಹಾಗೆ ವಿದ್ಯುತ್ ಬೇಲಿಗಳನ್ನು ಹೊಂದಿದ್ದ ಆಗಿನ ಮದ್ರಾಸ್ ಪ್ರಾಂತ್ಯದ ಏಕೈಕ ಜೈಲು ಇದಾಗಿತ್ತು.

ಇನ್ನು ಹಲವು ಮಹನೀಯರು ಈ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದಾರೆ. ಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾದ ರಾಜಾಜಿ, ಕಾಮರಾಜ್ ನಾಡರ್, ಪೊಟ್ಟಿ ಶ್ರೀರಾಮುಲು, ಸಂಜೀವ ರೆಡ್ಡಿ, ಬೆಜವಾಡ ಗೋಪಾಲ ರೆಡ್ಡಿ, ಇವಿ ರಾಮಸ್ವಾಮಿ ನಾಯ್ಕರ್, ಅಳಗೇಶನ್, ಬುಲುಸು ಸಾಂಬ, ಟೀಕೂರು ಸುಬ್ರಹ್ಮಣ್ಯಂ, ಭಗತ್ ಸಿಂಗ್ ರ ಹಲವು ಅನುಯಾಯಿಗಳು, ಕರ್ನಾಟಕದ ಹಲವು ಸ್ವಾತಂತ್ರ್ಯ ಹೋರಾಟಗಾರರು ಸಹ ಈ ಜೈಲಿನಲ್ಲಿ ದಿನಗಳನ್ನು ಕಳೆದಿದ್ದಾರೆ. ದ್ರಾವಿಡ ಚಳುವಳಿಯ ಅಣ್ಣಾ ದೊರೈ ಸಹ ಇದೇ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದಾರೆ.

ಮಹಾತ್ಮಾ ಗಾಂಧಿ ಅವರು ಎರಡು ಭಾರಿ ಈ ಜೈಲಿಗೆ ಭೇಟಿ ನೀಡಿದ್ದರು. ಬಾಲ ಗಂಗಾಧರ ತಿಲಕರು, ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರುಗಳು ಸಹ ಈ ಜೈಲಿಗೆ ಭೇಟಿ ನೀಡಿದ್ದರು. ಇನ್ನು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದಾಗ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ ಅವರುಗಳನ್ನು ಇದೇ ಜೈಲಿನಲ್ಲಿ ಇಡಲಾಗಿತ್ತು.

Corruption in Jail: ಜೈಲಿನಲ್ಲಿ ಏನೇನು ಸಿಗುತ್ತದೆ? ಯಾವುದರ ಬೆಲೆ ಎಷ್ಟು?

600 ಜನರನ್ನು ಇಡಬಹುದಾದ ಈ ಜೈಲಿನಲ್ಲಿ ಈಗ 382 ಜನ ಕೈದಿಗಳಿದ್ದಾರೆ. ಕುಖ್ಯಾತ ಕಳ್ಳ ಸಿಂಗ್ಲಿ ಬಸ್ಯಾ ಇದೇ ಜೈಲಿನಲ್ಲಿದ್ದ. ಹಿಂದೂ ಕಾರ್ಯಕರ್ತರಾದ ಪ್ರವೀಣ್ ಪೂಜಾರಿ, ಹರ್ಷ ಅವರನ್ನು ಕೊಲೆ ಮಾಡಿರುವ ಆರೋಪಿಗಳು ಸಹ ಈಗ ಇದೇ ಜೈಲಿನಲ್ಲಿದ್ದಾರೆ. ಈಗ ದರ್ಶನ್ ಸಹ ಈ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ಹೋಲಿಸಿದರೆ ಕಡಿಮೆ ಸೌಲಭ್ಯಗಳಿರುವ ಜೈಲು ಇದು. ಜೊತೆಗೆ ಬಳ್ಳಾರಿ ಬಿಸಿಲ ನಾಡಿನ ನಗರಿ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರಾಮದ ಜೀವನ ಮಾಡುತ್ತಿದ್ದ ದರ್ಶನ್ ಈ ಜೈಲಿನಲ್ಲಿ ಹೇಗೆ ದಿನ ದೂಡಲಿದ್ದಾರೆ ಕಾದು ನೋಡಬೇಕಿದೆ.

Exit mobile version