Corruption in Jail
ಕೊಲೆ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿಸುವ ನಟ ದರ್ಶನ್’ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆರೋಪಿ ದರ್ಶನ್, ಇತರೆ ಕೆಲವು ಆರೋಪಿಗಳ ಜೊತೆ ಕೂತು ಜೈಲಿನಲ್ಲಿ ಸಿಗರೇಟು ಸೇದುತ್ತಾ, ಕಾಫಿ ಹೀರುತ್ತಾ ಕುರ್ಚಿಯೊಂದರ ಮೇಲೆ ಕುಳಿತಿರುವ ಚಿತ್ರ ವೈರಲ್ ಆಗಿ ಕೋಲಾಹಲವನ್ನೇ ಸೃಷ್ಟಿಸಿದೆ.
ಇಂದು ಈ ವಿಷಯವಾಗಿ ಮಾಧ್ಯಮಗಳ ಬಳಿ ಮಾತನಾಡಿರುವ ಸಂಸದೆ ಸುಮಲತಾ ಸಹ, ಜೈಲಿನಲ್ಲಿ ಇದೆಲ್ಲ ಮಾಮೂಲು. ಹಣ ಇದ್ದವರಿಗೆ ಸಕಲ ಸವಲತ್ತುಗಳು ಸಹ ಅಲ್ಲಿ ಸಿಗುತ್ತವೆ ಎಂಬುದು ಗುಟ್ಟೇನೂ ಅಲ್ಲ. ಜೈಲು ವ್ಯವಸ್ಥೆಯ ಲೋಪವಿದು ಎಂದಿದ್ದಾರೆ.
ಹಾಗಾದರೆ ಹಣ ಇದ್ದವರಿಗೆ ಜೈಲಿನಲ್ಲಿ ಏನು ಬೇಕಾದರೂ ಸಿಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಹೌದು ಎಂಬ ಉತ್ತರವೇ ಸಿಗುತ್ತದೆ. ಹೊರಗಿನ ಸಮಾಜದಲ್ಲಿ ಸೊಗುವ ಬಹುತೇಕ ‘ಲಕ್ಷುರಿ’ ಎಂದು ಪರಿಗಣಿಸಲಾಗುವ ವಸ್ತುಗಳು ಜೈಲಿನ ಒಳಗೆ ಸಹ ಸಿಗುತ್ತವೆ. ಆದರೆ ಬೆಲೆ ದುಬಾರಿಯಷ್ಟೆ.
2019 ರ ಸಮಯದಲ್ಲಿ ಲಂಚದ ಪ್ರಕರಣವೊಂದರಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ವ್ಯಕ್ತಿಯೊಬ್ಬರು ಹೇಳಿರುವಂತೆ ಜೈಲಿನಲ್ಲಿ ಸಾಕಷ್ಟು ಸವಲತ್ತುಗಳು ಸಿಗುತ್ತವೆ. ವಿಶೇಷವಾಗಿ ಸಿಗರೇಟುಗಳಂತೂ ಸಾಕಷ್ಟು ಸಿಗುತ್ತವೆ. ಆದರೆ ಬೆಲೆ ಹೆಚ್ಚು. ಮದ್ಯ ಕೆಲ ವ್ಯಕ್ತಿಗಳಿಗೆ ಮಾತ್ರವೇ ಸಿಗುತ್ತದೆ. ಮದ್ಯ ಸೇವನೆಯಿಂದ ಒಳಗಿರುವ ಆರೋಪಿಗಳು, ಖೈದಿಗಳ ನಡುವೆ ಜಗಳ ನಡೆಯುವ ಸಾಧ್ಯತೆ ಹೆಚ್ಚು ಇರುತ್ತದೆ ಆದ್ದರಿಂದ ಅಲ್ಲಿನ ಸಿಬ್ಬಂದಿ ಮದ್ಯ ಸರಬರಾಜಿನ ವಿಷಯದಲ್ಲಿ ತುಸು ಕಠಿಣ ವಾಗಿರುತ್ತಾರಂತೆ.
ಸಿಗರೇಟು, ತಂಬಾಕು ಉತ್ಪನ್ನಗಳು ಸುಲಭವಾಗಿ ಸಿಗುತ್ತವೆ. ಆದರೆ ತುಸು ದುಬಾರಿ. ಹೊರಗಿರುವ ಬೆಲೆಗಿಂತಲೂ ಮೂರು ಪಟ್ಟು-ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನಗಳು ಮಾರಾಟ ಆಗುತ್ತವಂತೆ. ಇನ್ನು ಅಡುಗೆ ವಿಷಯವಾಗಿಯೂ ಅಷ್ಟೆ ತುಸು ಹೆಚ್ಚು ಹಣ ನೀಡಿದರೆ ನಿಮಗೆ ಇಷ್ಟವಾದ ಅಡುಗೆ ಸಹ ಬೇಯಿಸಿ ಹಾಕುತ್ತಾರಂತೆ. ವಾರ ಪೂರ್ತಿ ನಾನ್ ವೆಜ್ ತಿನ್ನುವ ಅವಕಾಶವೂ ಇದೆ. ಆದರೆ ಹಣ ಇರಬೇಕಷ್ಟೆ.
ಇನ್ನು ಮೊಬೈಲ್ ಫೋನ್ ಕರೆಗಳು ಮಾಡಲು ಸಹ ಹಣ ಕೊಡಬೇಕಾಗುತ್ತದೆ. ಮೊಬೈಲ್ ಫೋನ್ ಉಳ್ಳವರಿಗೆ ಹಣ ಕೊಟ್ಟು ಇಂತಿಷ್ಟು ನಿಮಿಷ ಎಂಬಂತೆ ಹೊರಗಿನವರೊಂದಿಗೆ ಮಾತನಾಡಬಹುದಾಗಿರುತ್ತದೆ ಎನ್ನುತ್ತಾರೆ ಆ ಮಾಜಿ ಆರೋಪಿ. ಕೆಲವು ವಿಐಪಿ, ವಿವಿಐಪಿ ಆರೋಪಿಗಳಿಗೆ ಟಿವಿ, ಪ್ರಿಡ್ಜ್ ವ್ಯವಸ್ಥೆಗಳೂ ಸಹ ಈ ಮೊದಲು ಸಿಕ್ಕಿದ್ದಿದೆ.
Darshan: ದರ್ಶನ್ರ ಜೈಲಿನ ಚಿತ್ರ ಹೊರಬಂದಿದ್ದು ಹೇಗೆ? ಆ ಫೋಟೊ ತೆಗೆದಿದ್ದು ಯಾರು?
ಒಳಗೆ ಮಾರಾಟವಾಗುವ ಈ ಸಿಗರೇಟು ಇನ್ನಿತರೆ ಉತ್ಪನ್ನಗಳನ್ನು ಪೊಲೀಸರು ಅಥವಾ ಇತರೆ ಸಿಬ್ಬಂದಿ ನೇರವಾಗಿ ಮಾರಾಟ ಮಾಡುವುದಿಲ್ಲ, ಬದಲಿಗೆ ಅಲ್ಲಿರುವ ಕೈದಿಗಳೇ ಮಾರಾಟ ಮಾಡುತ್ತಾರೆ. ಆದರೆ ಯಾರಿಗೆ ಏನು? ಎಷ್ಟು ತಲುಪಿಸಬೇಕೋ ಅದನ್ನು ತಲುಪಿಸಿದ ಬಳಿಕವೇ ಈ ವ್ಯವಹಾರ ಚೊಕ್ಕವಾಗಿ ನಡೆಯುತ್ತದೆ. ಹಿರಿಯ ಕೈದಿಗಳು ಹೊರಗೆ ಹೋಗಿ ಬೇಕಾದ ವಸ್ತುಗಳನ್ನು ಕೊಂಡು ತರುವ ‘ವ್ಯವಸ್ಥೆ’ ಮೊದಲಿತ್ತಂತೆ. ಆದರೆ ಹೀಗೆ ಹೊರಗೆ ಹೋಗಿದ್ದ ಕೈದಿಯೊಬ್ಬ ಕಾಣೆಯಾಗಿ ಪೊಲೀಸರಿಗೆ ತಲೆನೋವು ತಂದಿದ್ದ. ಆ ಬಳಿಕ ವ್ಯವಸ್ಥೆ ಬದಲಾಯ್ತು ಎನ್ನಲಾಗುತ್ತದೆ.
ಈ ಹಿಂದೆ ಐಪಿಎಸ್ ಅಧಿಕಾರಿ ರೂಪ, ಜೈಲಿನ ಅವ್ಯವಸ್ಥೆ ಬಗ್ಗೆ ದನಿ ಎತ್ತಿದ್ದು ನೆನಪಿರಬಹುದು. ಆದರೆ ಆ ಬಳಿಕ ರೂಪ ಅವರಿಗೆ ವರ್ಗಾವಣೆ ‘ಸನ್ಮಾನ’ ಸಹಿಸಬೇಕಾಯ್ತು. ಈಗ ಮತ್ತೆ ಸರ್ಕಾರ ದರ್ಶನ್ ಪ್ರಕರಣದಲ್ಲಿ 9 ಸಿಬ್ಬಂದಿಯನ್ನು ಅಮಾನತ್ತು ಮಾಡಿದೆ. ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದೆ. ಪ್ರಕರಣದಲ್ಲಿ ಮುಂದೇನಾಗುತ್ತದೆ ಕಾದು ನೋಡಬೇಕಿದೆ.