Bengaluru Startup
ಬೆಂಗಳೂರು ಅವಕಾಶಗಳ ಆಗಾರ. ಹಲವು ರೀತಿಯ ಉದ್ಯೋಗಾವಕಾಶಗಳು, ಹಲವು ರೀತಿಯ ಉದ್ಯಮ ಅವಕಾಶಗಳು ಬೆಂಗಳೂರಿನಲ್ಲಿದೆ. ವಿಶ್ವದ ಸ್ಟಾರ್ಟ್ ಅಪ್ ರಾಜಧಾನಿಯೂ ಆಗಿದೆ ಬೆಂಗಳೂರು. ಇಂದು ದೇಶದ ಹಲವು ಟಾಪ್ ಸಂಸ್ಥೆಗಳು ಪ್ರಾರಂಭವಾಗಿರುವುದು ಬೆಂಗಳೂರಿನಲ್ಲಿ. ಹಲವು ಅತ್ಯುತ್ತಮ ಸ್ಟಾರ್ಟ್ಅಪ್ಗಳ ಜೊತೆಗೆ ಕೆಲವು ಕೇವಲ ಹಣ ಮಾಡುವ ಉದ್ದೇಶದಿಂದಲೇ ಪ್ರಾರಂಭವಾದ ಸ್ಟಾರ್ಟ್ ಅಪ್ಗಳು ಸಹ ಬೆಂಗಳೂರಿನಲ್ಲಿವೆ. ನಗರದಲ್ಲಿ ಕಂಪೆನಿಯೊಂದು ಮರತಬ್ಬಿಕೊಳ್ಳಲು 1500 ರೂಪಾಯಿ ಪಡೆಯುತ್ತಿದೆ!
ಟ್ರೋವ್ ಎಕ್ಸ್ಪೀರಿಯನ್ಸ್ ಹೆಸರಿನ ಸಂಸ್ಥೆಯೊಂದು ಬೆಂಗಳೂರಿನಲ್ಲಿ ಹೊಸ ‘ಬ್ಯುಸಿನೆಸ್’ ಆರಂಭಿಸಿದೆ. ‘ಫಾರೆಸ್ಟ್ ಬಾತಿಂಗ್ ಎಕ್ಸ್ಪೀರಿಯನ್ಸ್’ (ಅರಣ್ಯ ಸ್ನಾನದ ಅನುಭವ) ಹೆಸರಿನಲ್ಲಿ ಮರಗಳನ್ನು ತಬ್ಬಿಕೊಳ್ಳುವ ಇವೆಂಟ್ ಅನ್ನು ಆಯೋಜಿಸಿರುವ ಸಂಸ್ಥೆ 1500 ರೂಪಾಯಿ ಶುಲ್ಕವನ್ನು ವಿಧಿಸಿದೆ. ಟ್ರೋವ್ ಎಕ್ಸ್ಪೀರಿಯನ್ಸ್ ಸಂಸ್ಥೆ ಈ ಇವೆಂಟ್ ಅನ್ನು ಆಯೋಜನೆ ಮಾಡಿರುವುದು ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ. ಉಚಿತ ಪ್ರವೇಶವಿರುವ ಕಬ್ಬನ್ ಪಾರ್ಕ್ಗೆ ಹೋಗಿ ಮರ ತಬ್ಬಿಕೊಳ್ಳಲು ಟ್ರೋವ್ ಎಕ್ಸ್ಪೀರಿಯನ್ಸ್ ಗೆ 1500 ರೂಪಾಯಿ ಹಣ ಕೊಡಬೇಕು!
http://ಬೆಂಗಳೂರಿನ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಡೀಲ್: ಭಾರಿ ಮೊತ್ತಕ್ಕೆ ಸೈಟ್ ಸೇಲ್
ಸಂಸ್ಥೆಯ ವೆಬ್ಸೈಟ್ನಲ್ಲಿ ಈ ಇವೆಂಟ್ ಬಗ್ಗೆ ಜಾಹೀರಾತು ಇದ್ದು, ‘ಮೌನವಾಗಿ, ಆತ್ಮಯುಕ್ತವಾಗಿ ಅರಣ್ಯದಲ್ಲಿ ನಡೆಯುತ್ತಾ, ಮತ್ತೆ ಪ್ರಕೃತಿಯೊಡನೆ ಬೆರೆಯಲು ಈ ಇವೆಂಟ್ಗೆ ಸೇರಿಕೊಳ್ಳಿ’ ಎಂದು ಬರೆಯಲಾಗಿದೆ. ಮರಗಳ, ಅರಣ್ಯದ ಕೆಲವು ಚಿತ್ರಗಳನ್ನು ಸಹ ಹಂಚಿಕೊಳ್ಳಲಾಗಿದೆ. ನಗರದಲ್ಲಿ ನಮ್ಮ ಜೀವನ ಬಹಳ ಒತ್ತಡಮಯವಾಗಿದೆ. ನಮ್ಮನ್ನು ನಾವು ಕಂಡುಕೊಳ್ಳಲು ಸಮಯವೇ ಇಲ್ಲದಂತಾಗಿದೆ. ಎಲ್ಲ ರೀತಿಯ ಜಂಜಡಗಳಿಂದ, ಅರಚಾಟಗಳಿಂದ ದೂರಾಗಿ ನಿನ್ನ ಧ್ವನಿಯನ್ನು ನೀವೇ ಕೇಳಿಸಿಕೊಳ್ಳಯವುದು ಸವಾಲಿನ ವಿಷಯ. ಶಿರಿನ್ ಓಕು ಎಂಬ ಜಪಾನಿನ ಅರಣ್ಯ ಮಜ್ಜನ ಪದ್ಧತಿಯು ಒತ್ತಡದಿಂದ ದೂರಾಗುವ ಒಂದೊಳ್ಳೆ ವಿಧಾನ. ಮೌನವಾಗಿ, ಆತ್ಮಯುಕ್ತವಾಗಿ ಅರಣ್ಯದಲ್ಲಿ ನಡೆಯುತ್ತಾ, ಮತ್ತೆ ಪ್ರಕೃತಿಯೊಡನೆ ಬೆರೆಯಲು ಇದೊಂದು ಸುವರ್ಣ ಅವಕಾಶ’ ಎಂದು ಸಂಸ್ಥೆ ಪ್ರಚಾರ ಮಾಡುತ್ತಿದೆ.
ಟ್ರೋವ್ ಎಕ್ಸ್ಪೀರಿಯನ್ಸ್ ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಹಲವರು ಈ ಇವೆಂಟ್ ಅನ್ನು ‘ಸ್ಕ್ಯಾಮ್’ (ಮೋಸ) ಎಂದು ಕರೆದಿದ್ದಾರೆ. ಕಬ್ಬನ್ ಪಾರ್ಕ್ ಅನ್ನು ಅರಣ್ಯ ಎಂದು ಕರೆದಿರುವ ಬಗ್ಗೆ ವ್ಯಂಗ್ಯ ಮಾಡಲಾಗುತ್ತಿದೆ. ರಜೆ ದಿನ ಕಬ್ಬನ್ ಪಾರ್ಕ್ನಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುತ್ತಾರೆ. ಅಲ್ಲಿ ಮೌನವನ್ನು ಹುಡುಕುವುದು ಹೇಗೆಂದು ಸಹ ಕೆಲವರು ಪ್ರಶ್ನೆ ಮಾಡಿದ್ದಾರೆ.