Bengaluru
ಬೆಂಗಳೂರು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಭಾರತ ಮಾತ್ರವಲ್ಲದೆ ವಿಶ್ವದ ನಾನಾ ಮೂಲೆಗಳಿಂದ ಜನ ಇಲ್ಲಿಗೆ ಬರುತ್ತಾರೆ. ಇಲ್ಲಿನಿಂದಲೇ ಜಗತ್ತಿನ ವಿವಿಧ ದೇಶಗಳ ಗ್ರಾಹಕರ ಜೊತೆಗೆ ಸಂಬಹನ ನಡೆಸುತ್ತಾ ಕೆಲಸ ಮಾಡುತ್ತಾರೆ. ನ್ಯೂಯಾರ್ಕ್ ರೀತಿಯಲ್ಲಿ ಬೆಂಗಳೂರು ಸಹ 24 ಗಂಟೆಯೂ ಸಕ್ರಿಯವಾಗಿರುವ ನಗರ ಎನಿಸಿಕೊಳ್ಳುತ್ತಿದೆ. ಹಾಗಾಗಿ 24 ಗಂಟೆ ಕೆಲಸ ಮಾಡುವ ಸಿಬ್ಬಂದಿಗೆ 24 ಗಂಟೆ ಸೇವೆ ಒದಗಿಸಲು ನಗರದ ಹೋಟೆಲ್’ಗಳು ಬಾಗಿಲು ತೆರೆಯಲಿವೆ.
ಈಗಾಗಲೇ ನಗರದ ಹೋಟೆಲ್, ಬಾರ್, ರೆಸ್ಟೊರೆಂಟ್’ಗಳ ಮುಚ್ಚುವ ಅವಧಿಯನ್ನು ರಾತ್ರಿ 12 ಗಂಟೆಗೆ ವಿಸ್ತರಿಸಲಾಗಿದೆ. ಆದರೆ ದಿನದ 24 ಗಂಟೆಯೂ ಸೇವೆ ಒದಗಿಸುವುದು ನಗರದ ಜನರ ಹಿತಕ್ಕೆ ಹಾಗೂ ಉದ್ಯಮ ಎರಡಕ್ಕೂ ಸೂಕ್ತ ಎಂದು ಪರಿಗಣಿಸಿರುವ ಬೆಂಗಳೂರಿನ ಹೋಟೆಲಿಗರು, ದಿನದ 24 ಗಂಟೆಯೂ ಹೋಟೆಲ್ ಸೇವೆ ನೀಡಲು ಮುಂದಾಗಿದ್ದು, ಈ ಬಗ್ಗೆ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಲಿದ್ದಾರೆ.
ಅಸಲಿಗೆ, ಈಗಾಗಲೇ ಈ ಬಗ್ಗೆ ಸರ್ಕಾರ ಆದೇಶವೊಂದನ್ನು ಹೊರಡಿಸಿದ್ದು, 10 ಕ್ಕಿಂತಲೂ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ಹೋಟೆಲ್’ಗಳು ದಿನದ 24 ಗಂಟೆಯೂ ಹೋಟೆಲ್ ತೆರೆದಿದ್ದು, ಗ್ರಾಹಕರಿಗೆ ಸೇವೆ ಒದಗಿಸಬಹುದು ಎಂದು ಕಳೆದ ತಿಂಗಳೇ ಆದೇಶ ಹೊರಡಿಸಿದೆ. ಆದರೆ ನಗರದ ಕೆಲವು ಏರಿಯಾಗಳಲ್ಲಿ ಪೊಲೀಸರು, ಹೋಟೆಲ್’ಗಳು ದಿನದ 24 ಗಂಟೆ ಹೋಟೆಲ್ ತೆರೆಯಲು ಅವಕಾಶ ನೀಡದೆ ನಿಗದಿತ ಸಮಯದ ಬಳಿಕ ಹೋಟೆಲ್ ಬಾಗಿಲು ಹಾಕಿಸುತ್ತಿದ್ದಾರೆ.
ಇದರಿಂದ ಬೇಸರಗೊಂಡಿರುವ ಹೋಟೆಲ್ ಮಾಲೀಕರು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಲಿದ್ದೇವೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ರಾವ್ ಹೇಳಿದ್ದಾರೆ. ಸರ್ಕಾರ ಕಳೆದ ತಿಂಗಳು ಹೊರಡಿಸಿರುವ ಆದೇಶವನ್ನು ಈಗಾಗಲೇ ಪೊಲೀಸ್ ಕಚೇರಿಗೆ ಕಳಿಸಲಾಗಿದೆ. ಹಾಗಿದ್ದರೂ ಸಹ ಕೆಲವು ಕಡೆ ಪೊಲೀಸರು ಹೋಟೆಲ್ ಮಾಲೀಕರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ನಾವು ಪೊಲೀಸ್ ಆಯುಕ್ತರ ಬಳಿ ದೂರು ನೀಡಲಿದ್ದೇವೆ ಎಂದಿದ್ದಾರೆ.
ISRO: ಅನ್ಯಗ್ರಹ ಜೀವಿಗಳು ಇವೆಯೇ? ಇಸ್ರೋ ಅಧ್ಯಕ್ಷ ಹೇಳುವುದೇನು?
ನಗರದ ಎಲ್ಲ ಹೋಟೆಲ್’ಗಳು ದಿನದ 24 ಗಂಟೆ ಸೇವೆ ಒದಗಿಸಲು ಸಾಧ್ಯವಿಲ್ಲ. ಸಿಬ್ಬಂದಿ ಕೊರತೆ, ಗ್ರಾಹಕರ ಕೊರತೆಯಿಂದಾಗಿ ಹಲವು ಹೋಟೆಲ್’ಗಳು ರಾತ್ರಿ ವೇಳೆ ಸೇವೆ ಸ್ಥಗಿತಗೊಳಿಸಲಿವೆ. ಆದರೆ ಕೆಲವು ಹೋಟೆಲ್’ಗಳು ಸೇವೆ ನೀಡಲಿವೆ. ಅಂಥಹಾ ಕೆಲ ಹೋಟೆಲ್’ಗಳಿಗಾದರೂ ಪೊಲೀಸರು ಅವಕಾಶ ನೀಡಬೇಕಿದೆ’ ಎಂದಿದ್ದಾರೆ.