Chandan Shetty
ಸೆಲೆಬ್ರಿಟಿ ಜೋಡಿಯಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇತ್ತೀಚೆಗಷ್ಟೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ದಂಪತಿಗಳಾಗಿದ್ದ ಇವರು ತಮ್ಮ ದಾಂಪತ್ಯವನ್ನು ಅಂತ್ಯಗೊಳಿಸಿದ್ದಾರೆ. ಇಬ್ಬರೂ ಪರಸ್ಪರ ಗೌರವಿಂದ ವಿಚ್ಛೇದನ ಪಡೆದು ದೂರಾಗಿದ್ದಾರೆ. ವಿಚ್ಛೇದನಕ್ಕೆ ಕಾರಣ ಏನೆಂಬುದನ್ನು ವಿವರಿಸಿಲ್ಲ. ಅದು ಅವರ ವೈಯಕ್ತಿಕ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ, ಕೆಲವು ಮೇನ್ ಸ್ಟ್ರೀಮ್ ಮಾಧ್ಯಮಗಳಲ್ಲಿ ಇವರಿಬ್ಬರ ವಿಚ್ಛೇದನಕ್ಕೆ ಕಾರಣಗಳು ಎಂದು ಕೆಲವು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ. ಇನ್ನು ಕೆಲವು ಸೋ ಕಾಲ್ಡ್ ಬಿಗ್‌ಬಾಸ್ ಸೆಲೆಬ್ರಿಟಿಗಳು ಇವರಿಬ್ಬರ ವಿಚ್ಛೇದನಕ್ಕೆ ಅಕ್ರಮ ಸಂಬಂಧದ ಒಗ್ಗರಣೆ ಹಾಕಿ ಖುಷಿ ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ತಮ್ಮ ಚಾರಿತ್ರ್ಯವಧೆಯಿಂದ ಬೇಸರಗೊಂಡು ಅದಕ್ಕೆ ಸ್ಪಷ್ಟನೆ ನೀಡುವ ಕಾರಣಕ್ಕೆ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಬೆಂಗಳೂರಿನಲ್ಲಿ ಇಂದು (ಜೂನ್ 10) ಸುದ್ದಿ ನಡೆಸಿದರು.
ತಮ್ಮ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿರುವ ಸುಳ್ಳು ಸುದ್ದಿಗಳಿಗೆ ತೀವ್ರ ಬೇಸರ ಹೊರಹಾಕಿದ ಚಂದನ್ ಹಾಗೂ ನಿವೇದಿತಾ, ʼಕೆಲವರು ಮಾಧ್ಯಮಗಳ ಮುಂದೆ ಅದು ಹೇಗೆ ಸುಳ್ಳು ಹೇಳುತ್ತಿದ್ದಾರೆಂದರೆ ಅದು ನಿಜವೇ ಎಂದು ಅವರೇ ನಂಬಿಬಿಟ್ಟಂತಿದೆ” ಎಂದು ಆಶ್ಚರ್ಯಪೂರ್ವಕವಾಗಿ ಹೇಳಿದರು ನಿವೇದಿತಾ ಗೌಡ. ಅವರ ಮಾತಿನ ಬಾಣ ಮಾಜಿ ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಕುರಿತಾಗಿಯೇ ಆಗಿತ್ತು. ಮಾಧ್ಯಮದೊಂದಿಗೆ ಮಾತನಾಡಿದ್ದ ಪ್ರಶಾಂತ್ ಸಂಬರ್ಗಿ, ಏರ್‌ಪೋರ್ಟ್‌ನಲ್ಲಿ ಒಮ್ಮೆ ನಿವೇದಿತಾರನ್ನು ಬೇರೆಯವರ ಜೊತೆ ನೋಡಿದ್ದೆ, ನಿವೇದಿತಾ ಬಗ್ಗೆ ಎಚ್ಚರದಿಂದ ಇರುವಂತೆ ಸಹ ಚಂದನ್‌ಗೆ ಹೇಳಿದ್ದೆ. ನಿವೇದಿತಾ ಈಗ ಸ್ವಿಫ್ಟ್ ಕಾರಿನ ಬದಲು ಬೆಂಜ್ ಕಾರಿನ ಹಿಂದೆ ಹೋಗಿದ್ದಾಳೆ ಎಂದು ಕೇವಲವಾಗಿ ಮಾತನಾಡಿದ್ದರು.
ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನಕ್ಕೆ ಕಾರಣವೇನು?
ಚಂದನ್ ಮಾತನಾಡಿ, ನಿವೇದಿತಾ ನನ್ನಿಂದ 9 ಕೋಟಿ ಜೀವನಾಂಶ ಪಡೆದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ ಅದು ಸುಳ್ಳು, ನಿವೇದಿತಾ ಬಹಳ ಚೆನ್ನಾಗಿ ದುಡಿಯುತ್ತಿದ್ದಾರೆ. ಹಾಗಾಗಿ ಅವರು ನನ್ನಿಂದ ಜೀವನಾಶ ಅಥವಾ ಅಲುಮಿನಿ ಪಡೆದಿಲ್ಲ ಎಂದರು. ಅದಾದ ಬಳಿಕ ನಿವೇದಿತಾ ಹೆಸರನ್ನು ಚಿತ್ರರಂಗಕ್ಕೆ ಸೇರಿದ ವ್ಯಕ್ತಿಯೊಬ್ಬರೊಟ್ಟಿಗೆ ಸೇರಿಸಲಾಗುತ್ತಿದೆ. ಅದು ಸಂಪೂರ್ಣವಾಗಿ ಸುಳ್ಳು. ನಾವು ಒಟ್ಟಿಗೆ ಅವರ ಮನೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆವು. ಅವರೊಬ್ಬ ಅದ್ಭುತವಾದ ವ್ಯಕ್ತಿ. ಅವರ ಕಂಪೆನಿ ನಮಗೆ ಇಷ್ಟವಾಗುತ್ತಿತ್ತು ಹಾಗಾಗಿ ಹೋಗುತ್ತಿದ್ದೆವು” ಎಂದಿದ್ದಾರೆ.
ಇನ್ನು ಮಕ್ಕಳು ಮಾಡಿಕೊಳ್ಳುವ ವಿಷಯಕ್ಕೆ ಜಗಳವಾಡಿ ದೂರಾಗಿದ್ದಾರೆ ಎಂಬ ವಿಚಾರಕ್ಕೆ ಸಹ ಪ್ರತಿಕ್ರಿಯೆ ನೀಡಿದ ಚಂದನ್, ನಾವಿಬ್ಬರೂ ಮಕ್ಕಳು ಮಾಡಿಕೊಳ್ಳಬಾರದು ಎಂದು ಈ ಮೊದಲೇ ನಿಶ್ಚಯ ಮಾಡಿದ್ದೆವು. ನಾವು ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಕಾರಣ ಇಬ್ಬರಿಗೂ ಸಮಯದ ಅಭಾವ ಇರುತ್ತದೆ. ಮಕ್ಕಳನ್ನು ನೋಡಿಕೊಳ್ಳಲು ಆಗುವುದಿಲ್ಲ ಎಂಬ ಕಾರಣಕ್ಕೆ ನಾವು ಮೊದಲೇ ಮಕ್ಕಳು ಮಾಡಿಕೊಳ್ಳಬಾರದು ಎಂದು ನಿಶ್ಚಯಿಸಿದ್ದೆವು. ಆ ವಿಷಯಕ್ಕೆ ನಮ್ಮ ಭಿನ್ನಾಭಿಪ್ರಾಯ ಇರಲಿಲ್ಲ ಎಂದಿದ್ದಾರೆ. ಇಬ್ಬರೂ ಸಹ ವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಒಪ್ಪಿಗೆಯಿಂದ ದೂರಾಗಿದ್ದೇವೆ ಎಂದಿದ್ದಾರೆ.