CM Siddaramaiah
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಕರ್ನಾಟಕ ರಾಜ್ಯದ ಪೊಲೀಸ್ ಪಡೆಯ ಬಲವರ್ಧನೆ ಸೇರಿದಂತೆ ರಾಜ್ಯ ಕುರಿತಾದ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಕೆಲವುಮನವಿಗಳನ್ನು ಸಹ ಮಾಡಿದ್ದಾರೆ.
ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವುದು ಮತ್ತು ಸಾರ್ವಜನಿಕರ ಸುರಕ್ಷತೆ ನಿಟ್ಟಿನಲ್ಲಿ ಕೇಂದ್ರದಿಂದ ಅಗತ್ಯವಿರುವ ನೆರವಿನ ಕುರಿತ ಹಲವು ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.
ಭಾರತ ಸರ್ಕಾರವು 80 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತೀಯ ರಿಸರ್ವ್ ಬೆಟಾಲಿಯನ್ ಸ್ಥಾಪನೆಗೆ ಅನುಮೋದನೆ ನೀಡಿದೆ. ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಎರಡು ಬೆಟಾಲಿಯನ್ ಸ್ಥಾಪನೆ ಮಾಡುವಂತೆ ಸಿದ್ದರಾಮಯ್ಯ, ಅಮಿತ್ ಷಾ ಬಳಿ ಪ್ರಸ್ತಾವನೆ ಇರಿಸಿದ್ದಾರೆ.
ನಗರಗಳ ಸುರಕ್ಷತೆ ಕುರಿತಾಗಿಯೂ ಸಿದ್ದರಾಮಯ್ಯ, ಷಾ ಬಳಿ ಬೇಡಿಕೆ ಇರಿಸಿದ್ದಾರೆ. ಬೆಂಗಳೂರು ನಗರದಂತೆಯೇ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ ಸೇಫ್ ಸಿಟಿ ಯೋಜನೆಯನ್ನು ತಲಾ 200 ಕೋಟಿ ರೂ. ಗಳಂತೆ ಒಟ್ಟು 1000 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ನಿರ್ಭಯಾ ಯೋಜನೆಯ ಅಡಿ ಅನುಮೋದನೆ ನೀಡುವಂತೆ ಕೋರಿದ್ದಾರೆ.
ಹೈಕೋರ್ಟ್ ನ ಹೊಸ ಆದೇಶದಂತೆ ಬಂಧಿಸುವ, ದಂಡ ವಿಧಿಸುವ ಅಧಿಕಾರಿಗಳು ಕಡ್ಡಾಯವಾಗಿ ಕ್ಯಾಮೆರಾ ಧರಿಸಬೇಕಾಗಿರುವ ಕಾರಣ ರಾಜ್ಯಕ್ಕೆ ತುರ್ತಾಗಿ 58,546 ಕ್ಯಾಮೆರಾಗಳ ಅವಶ್ಯಕತರ ಇದ್ದು ಅದಕ್ಕಾಗಿ 175 ಕೋಟಿ ಖರ್ಚಾಗಲಿದೆ. ಅದಕ್ಕಾಗಿ 100 ಕೋಟಿ ನೆರವು ನೀಡಬೇಕು ಎಂದು ಕೋರಿದ್ದಾರೆ.
ಕರ್ನಾಟಕದಲ್ಲಿ ಹಲವು ಪೊಲೀಸ್ ಠಾಣೆಗಳು ಶಿಥಿಲಾವಸ್ತೆಯಲ್ಲಿವೆ, ಕೆಲವು ಪೊಲೀಸ್ ಠಾಣೆಗಳು ಬಾಡಿಗೆ ಕಟ್ಟಡದಲ್ಲಿವೆ. ಇವುಗಳ ನಿರ್ಮಾಣಕ್ಕೆ 3 ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದು, ಈ ಬಾರಿ 100 ಹೊಸ ಪೊಲೀಸ್ ಠಾಣೆ ನಿರ್ಮಾಣ ಮಾಡುವ ಯೋಚನೆ ಇದೆ. ಇದಕ್ಕಾಗಿ 300 ಕೋಟಿ ರೂಪಾಯಿಯ ಅಗತ್ಯವಿದ್ದು, ಅದನ್ನು ಮಂಜೂರು ಮಾಡುವಂತೆ ಸಿದ್ದರಾಮಯ್ಯ ಕೋರಿದ್ದಾರೆ.
ಪೊಲೀಸರಿಗೆ ಕ್ಯಾಂಟೀನ್ ಸೌಲಭ್ಯ ನಿಒಡಿರುವ ರೀತಿಯೇ ಅಗ್ನಿಶಾಮಕ ಮತ್ತು ಇತರೆ ತುರ್ತು ಸೇವೆಗಳ ಇಲಾಖೆಗಳ ಸಿಬ್ಬಂದಿಗಳಿಗೂ ಕ್ಯಾಂಟೀನ್ ಸ್ಥಾಪಿಸುವ ಆಲೋಚನೆ ಇದ್ದು ಅದಕ್ಕೆ ಅನುಮತಿ ನೀಡಬೇಕು ಹಾಗೂ ಪೊಲೀಸ್ ವಸತಿ ಗೃಹಗಳ ನಿರ್ಮಾಣ, ವಿಧಿವಿಜ್ಞಾನ ಪ್ರಯೋಗಾಲಯಗಳ ಆಧುನೀಕರಣಕ್ಕೆ ನೆರವು ನೀಡುವ ಕುರಿತು ಚರ್ಚಿಸಲಾಗಿದೆ.