DK Shivakumar
ಎಂಥೆಂತಾ ಐನಾತಿಗಳು, ಚಾಲಾಕಿಗಳು ನಮ್ಮ ಸುತ್ತ-ಮುತ್ತ ಇರುತ್ತಾರೆಂದರೆ ಅಬ್ಬಬ್ಬಾ! ಪಾಪ ಯಾವುದೇ ಅಭಿವೃದ್ಧಿ ಕಾರ್ಯಕ್ರಮಕ್ಕೆಂದು ಬಂದು ಶಿಸ್ತಾಗಿ ಶೂ ಬಿಚ್ಚಿ ದೇವರಿಗೆ ಕೈಮುಗಿಯುತ್ತಿದ್ದ ಡಿಕೆ ಶಿವಕುಮಾರ್ ಅವರ ಶೂ ಅನ್ನೇ ಕದ್ದೊಯ್ದಿದ್ದಾರೆ ಯಾರೋ ಚಪ್ಪಲಿ ಕಳ್ಳರು. ಆಗಿದ್ದಿಷ್ಟು, ಇಂದು (ಜುಲೈ 15) ನಗರದ ಕೆಲವು ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡುವ ಕಾರ್ಯಕ್ಕೆ ಉದ್ಘಾಟನೆ ಮಾಡಲು ಡಿಕೆ ಶಿವಕುಮಾರ್ ತೆರಳಿದ್ದರು, ಆ ವೇಳೆ ಅವರ ಶೂ ಅನ್ನು ಯಾರೋ ಎಗರಿಸಿದ್ದಾರೆ!
ಕೆಲ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡುವ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಬೆಂಗಳೂರಿನ ಭಾಷ್ಯಂ ಸರ್ಕಲ್ನಲ್ಲಿ ಆಯೋಜಿಸಲಾಗಿತ್ತು. ಉಪಮುಖ್ಯ ಮಂತ್ರಿ, ಬೆಂಗಳೂರು ಅಭಿವೃದ್ಧಿ ಮಂತ್ರಿ ಡಿಕೆ ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸ್ಥಳೀಯ ಶಾಸಕ ಬಿಜೆಪಿಯ ಅಶ್ವತ್ಥನಾರಾಯಣ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚಾಲನೆ ನೀಡುವ ಮುನ್ನ ರಸ್ತೆ ಕಾಮಗಾರಿಗೆ ಬಳಸುವ ವಸ್ತುಗಳಿಗೆ ಪೂಜೆ ಮಾಡಲಾಯ್ತು. ಪೂಜೆಯಲ್ಲಿ ಭಾಗವಹಿಸಲು ಡಿಕೆ ಶಿವಕುಮಾರ್ ಅವರು ಧರಿಸಿದ್ದ ಶೂ ಬಿಟ್ಟು ವೇದಿಕೆಗೆ ಬಂದರು. ಪೂಜೆ ಮುಗಿದ ಬಳಿಕ ಹಾರೆ ಹಿಡಿದುಕೊಂಡು ಇತರೆ ಗಣ್ಯರೊಟ್ಟಿಗೆ ಫೋಟೊಕ್ಕೆ ಫೋಸು ನೀಡಿದರು. ಕಾರ್ಯಕ್ರಮವೆಲ್ಲ ಮುಗಿದ ಬಳಿಕ ಶೂ ಹಾಕಿಕೊಳ್ಳಲು ಹೋದಾಗ ಶೂ ನಾಪತ್ತೆ!
CM Siddaramaiah: ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ
ಸುಮಾರು ಹದಿನೈದು ನಿಮಿಷಗಳ ಕಾಲ ಡಿಕೆ ಶಿವಕುಮಾರ್, ಅವರ ಸಿಬ್ಬಂದಿ, ಹಾಜರಿದ್ದ ಕೆಲ ಅಧಿಕಾರಿಗಳು ಜೊತೆಗೆ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಸಹ ಉಪ ಮುಖ್ಯಮಂತ್ರಿಗಳ ಶೂಗಾಗಿ ಅಲ್ಲಿ-ಇಲ್ಲಿ ತಡಕಾಡಿದರು. ಡಿಕೆ ಶಿವಕುಮಾರ್ ಅಂತೂ ಸಾಕ್ಸ್ ಮಾತ್ರ ಹಾಕಿಕೊಂಡು ವೇದಿಕೆಯ ಮೇಲೆ ಕೆಳಗೆ ಶೂಗಾಗಿ ಹುಡುಕಾಟ ನಡೆಸುತ್ತಿದ್ದ ದೃಶ್ಯ ನೋಡಲು ನಗು ತರಿಸುವಂತಿತ್ತು. ಎಷ್ಟೇ ಹುಡುಕಿದರೂ ಉಪ ಮುಖ್ಯಮಂತ್ರಿಗಳ ಶೂ ಸಿಗಲಿಲ್ಲ. ಪೆಚ್ಚು ಮೋರೆ ಹಾಕಿಕೊಂಡು ಡಿಕೆ ಶಿವಕುಮಾರ್ ಬರಿಗಾಲಲ್ಲೇ ಕಾರು ಹತ್ತಿ ವಾಪಸ್ ತೆರಳಿದರು.